ಸಾಂಸ್ಕೃತಿಕಸಾಹಿತ್ಯ

ಕಲಬುರಗಿಯಲ್ಲಿ ಆ.16ಕ್ಕೆ ಜಿಲ್ಲಾ ಪ್ರಥಮ ಕವಯಿತ್ರಿಯರ ಸಮ್ಮೇಳನ

ಹಿರಿಯ ಲೇಖಕಿ ಶಕುಂತಲಾ ಪಾಟೀಲ ಜವಳಿ ಅವರಿಗೆ ಸಮ್ಮೇಳನಾಧ್ಯಕ್ಷತೆ

ಸಾಹಿತ್ಯ ಕ್ಷೇತ್ರದಲ್ಲಿ ಕೃಷಿ ಮಾಡುತ್ತಿರುವ ಯುವ ಮಹಿಳಾ ಬರಹಗಾರ್ತಿಯರು ಜನಮುಖಿ ಸಾಹಿತ್ಯ ರಚಿಸಬೇಕು ಎಂದು ಜಿಲ್ಲಾ ಪ್ರಥಮ ಕವಯಿತ್ರಿಯರ ಸಮ್ಮೇಳನದ ನಿಯೋಜಿತ ಸಮ್ಮೇಳನಾಧ್ಯಕ್ಷೆ ಹಾಗೂ ಹಿರಿಯ ಲೇಖಕಿ ಶಕುಂತಲಾ ಪಾಟೀಲ ಜವಳಿ ಹೇಳಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್, ಅಖಿಲ ಕರ್ನಾಟಕ ರಾಜ್ಯ ಸರ್ಕಾರಿ ಮಹಿಳಾ ನೌಕರರ ಸಂಘ ಹಾಗೂ ತಾಲೂಕು ಕನ್ನಡ ಸಾಹಿತ್ಯ ಪರಿಷತ್‌ಗಳ ಸಂಯುಕ್ತಾಶ್ರಯದಲ್ಲಿ ಆ.16ರಂದು ನಗರದ ಕನ್ನಡ ಭವನದಲ್ಲಿ ಒಂದು ದಿನದ ಜಿಲ್ಲಾ ಪ್ರಥಮ ಕಾವ್ಯ ಮಹಿಳಾ ಸಮ್ಮೇಳನ ಆಯೋಜಿಸಲಾಗಿದೆ. ಈ ಹಿನ್ನೆಲೆಯಲ್ಲಿ ಅಧಿಕೃತ ಆಹ್ವಾನ ಸ್ವೀಕರಿಸಿ ಮಾತನಾಡಿದ ಶಕುಂತಲಾ ಪಾಟೀಲ ಜವಳಿ, ಆಧುನಿಕ ಸಾಹಿತ್ಯ ಸೃಷ್ಟಿಯಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ತೊಡಗಿಸಿಕೊಂಡಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದರು.

ಯಾವುದೇ ಸಾಹಿತ್ಯ ರಚನೆಯಾದರೂ ಅದು ಸಾಮಾನ್ಯ ಜನರ ಬದುಕಿಗೆ ಹತ್ತಿರವಾಗಿರಬೇಕು. ಸಮಾಜಮುಖಿ ಸಾಹಿತ್ಯದ ಮೂಲಕ ಪರಿವರ್ತನೆ ತರಲು ಸಾಧ್ಯ. ಆದ್ದರಿಂದ ಲೇಖಕರು ಸಂವೇದನಾಶೀಲತೆಯನ್ನು ರೂಢಿಸಿಕೊಂಡು ತಮ್ಮ ಬರಹಗಳಲ್ಲಿ ಗಟ್ಟಿತನ ಮೂಡಿಸಬೇಕು ಎಂದು ಅವರು ಕಿವಿಮಾತು ಹೇಳಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಮಾತನಾಡಿ, ಮಹಿಳೆಯರು ಇಂದು ಎಲ್ಲ ಕ್ಷೇತ್ರಗಳಲ್ಲಿಯೂ ಮೇಲುಗೈ ಸಾಧಿಸುತ್ತಿದ್ದಾರೆ. ಕಲೆ, ಸಾಹಿತ್ಯ, ಸಾಂಸ್ಕೃತಿಕ, ಕ್ರೀಡೆ ಹಾಗೂ ರಾಜಕೀಯ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿದ್ದಾರೆ. ಮಹಿಳೆಯರ ಆಂತರಿಕ ಧ್ವನಿಯನ್ನು ಗುರುತಿಸಿ ಇಂತಹ ಸಮ್ಮೇಳನಗಳ ಮೂಲಕ ಸಮಾಜದ ಮುಖ್ಯವಾಹಿನಿಗೆ ತರುವ ಕಾರ್ಯವನ್ನು ಕನ್ನಡ ಸಾಹಿತ್ಯ ಪರಿಷತ್ ಮಾಡುತ್ತಿದೆ ಎಂದರು.

ಮಹಿಳೆಯರ ಸರ್ವಾಂಗೀಣ ಅಭಿವೃದ್ಧಿಗಾಗಿ ಪರಿಷತ್ ಹಲವು ರಚನಾತ್ಮಕ ಕಾರ್ಯಕ್ರಮಗಳನ್ನು ರೂಪಿಸುತ್ತಿದೆ. ಸಾಹಿತ್ಯ ಕ್ಷೇತ್ರಕ್ಕೆ ಜಿಲ್ಲೆಯ ಲೇಖಕಿಯರ ಕೊಡುಗೆ ಅಪಾರವಾಗಿದ್ದು, ಅವರ ಪ್ರತಿಭೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಸಮ್ಮೇಳನ ಆಯೋಜಿಸಲಾಗಿದೆ ಎಂದು ತಿಳಿಸಿದರು.

ಸಮ್ಮೇಳನದಲ್ಲಿ ಜಿಲ್ಲೆಯ ವಿವಿಧ ಭಾಗಗಳಿಂದ ಮಹಿಳಾ ಕವಯಿತ್ರಿಯರು, ಲೇಖಕಿಯರು ಹಾಗೂ ಸಾಹಿತ್ಯಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಕಾರ್ಯಕ್ರಮದಲ್ಲಿ ಸಾಹಿತ್ಯ, ಮಹಿಳಾ ಬರಹ ಹಾಗೂ ಸಮಾಜಮುಖಿ ಚಿಂತನೆಗಳ ಕುರಿತು ಚರ್ಚೆ ಮತ್ತು ಕಾವ್ಯ ವಾಚನ ಸೇರಿದಂತೆ ವಿವಿಧ ಕಾರ್ಯಕ್ರಮಗಳು ನಡೆಯಲಿವೆ.

ಕಾರ್ಯಕ್ರಮದಲ್ಲಿ ಪರಿಷತ್ ಜಿಲ್ಲಾ ಕಾರ್ಯದರ್ಶಿಗಳಾದ ಶಿವರಾಜ ಅಂಡಗಿ, ಧರ್ಮಣ್ಣ ಎಚ್. ಧನ್ನಿ, ಪ್ರಮುಖರಾದ ನಂದಿನಿ ಸನಬಾಳ, ರೇಣುಕಾ ಎನ್., ಶಿವಲೀಲಾ ಕಲಗುರಕಿ, ಧರ್ಮರಾಜ ಜವಳಿ, ಸೋಮಶೇಖರ ನಂದಿಧ್ವಜ, ಕುಪೇಂದ್ರ ಬರಗಾಲಿ, ಶರಣು ಹಗರಗುಂಡಗಿ, ರಾಜೇಂದ್ರ ಮಾಡಬೂಳ, ಹನುಮಂತರಾವ್ ಪೇಚನಪಳ್ಳಿ, ಅನೀಲಕುಮಾರ ಪಾಟೀಲ ತೇಗಲತಿಪ್ಪಿ, ಪ್ರಭುಶೆಟ್ಟಿ ಮುದ್ದಾ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button