ಕೆಬಿಎನ್ ವಿಶ್ವವಿದ್ಯಾಲಯದಲ್ಲಿ ಬಿ.ಎಡ್ ವಿದ್ಯಾರ್ಥಿಗಳಿಗೆ ಓರಿಯಂಟೇಶನ್ ಕಾರ್ಯಕ್ರಮ
ಸ್ಪಷ್ಟ ಗುರಿ, ಕಠಿಣ ಪರಿಶ್ರಮ ಮತ್ತು ಗುಣಮಟ್ಟದ ಶಿಕ್ಷಣಕ್ಕೆ ಒತ್ತು; ತಜ್ಞರಿಂದ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ

ಕಲಬುರಗಿ: ಕೆಬಿಎನ್ ವಿಶ್ವವಿದ್ಯಾಲಯದ ಶಿಕ್ಷಣ ನಿಕಾಯದಲ್ಲಿ ನೂತನ ಬಿ.ಎಡ್ ವಿದ್ಯಾರ್ಥಿಗಳಿಗಾಗಿ ಮಂಗಳವಾರ ಓರಿಯಂಟೇಶನ್ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಮುಖ್ಯ ಅತಿಥಿಗಳಾದ ಭಾಷಾ ನಿಕಾಯದ ಡೀನ್ ಡಾ. ನಿಶಾತ್ ಆರಿಫ್ ಹುಸ್ಸೇನಿ, ಖಾಜಾ ಶಿಕ್ಷಣ ಸಂಸ್ಥೆಯ ಶೈಕ್ಷಣಿಕ ಪರಂಪರೆ ಮತ್ತು ಮೌಲ್ಯಗಳ ಕುರಿತು ಮಾಹಿತಿ ನೀಡಿದರು. ವಿದ್ಯಾರ್ಥಿಗಳು ಕಠಿಣ ಪರಿಶ್ರಮ, ಶಿಸ್ತು ಹಾಗೂ ಸಮರ್ಪಣಾ ಮನೋಭಾವದಿಂದ ವಿದ್ಯಾಭ್ಯಾಸ ಮಾಡಿದರೆ ಜೀವನದಲ್ಲಿ ಯಶಸ್ಸು ಸಾಧಿಸಬಹುದು ಎಂದು ತಿಳಿಸಿದರು.
ವಾಣಿಜ್ಯ ನಿಕಾಯದ ಡೀನ್ ಡಾ. ಶ್ರೀನಿವಾಸ ಮಾತನಾಡಿ, ವಿದ್ಯಾರ್ಥಿಗಳು ಸ್ಪಷ್ಟ ಗುರಿಯನ್ನು ಹೊಂದಿ ಅಧ್ಯಯನ ನಡೆಸಬೇಕು. ಯೋಜಿತ ಅಭ್ಯಾಸ ಮತ್ತು ನಿರಂತರ ಕಲಿಕೆಯ ಮೂಲಕ ಉತ್ತಮ ಶಿಕ್ಷಕರಾಗಿ ರೂಪುಗೊಳ್ಳುವಂತೆ ಕರೆ ನೀಡಿದರು.
ಶಿಕ್ಷಣ ನಿಕಾಯದ ಡೀನ್ ಡಾ. ಇಕ್ಬಲ್ ಮಟ್ಟು ಪ್ರಾಸ್ತಾವಿಕವಾಗಿ ಮಾತನಾಡಿ, ಓರಿಯಂಟೇಶನ್ ಕಾರ್ಯಕ್ರಮದ ಉದ್ದೇಶ ಹಾಗೂ ಶಿಕ್ಷಣ ನಿಕಾಯದ ಕಾರ್ಯಚಟುವಟಿಕೆಗಳ ಕುರಿತು ವಿವರಿಸಿದರು.
ಕಾರ್ಯಕ್ರಮದಲ್ಲಿ ಕ್ಯಾಲಿಕಟ್ ವಿಶ್ವವಿದ್ಯಾಲಯದ ಡಾ. ಅಬ್ದುಲ್ ಗಫೂರ್ ಹಾಗೂ ರಿಷಿಹುಡ್ ವಿಶ್ವವಿದ್ಯಾಲಯದ ಪ್ರೊ. ರೇವಾ ಪರಿಮೋ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ, ಶಿಕ್ಷಕರ ವೃತ್ತಿ, ಬೋಧನಾ ಕೌಶಲ್ಯ, ಮೌಲ್ಯಾಧಾರಿತ ಶಿಕ್ಷಣ ಹಾಗೂ ಸಮಕಾಲೀನ ಶೈಕ್ಷಣಿಕ ಸವಾಲುಗಳ ಕುರಿತು ಉಪನ್ಯಾಸ ನೀಡಿದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿಯರಾದ ಅಜರಾ ಅಂಜು ಮತ್ತು ಸನಾ ಅಮ್ರೀನ್ ಪ್ರಾರ್ಥಿಸಿದರು. ಸಯ್ಯದಾ ಆಯೇಷಾ ಮುಸ್ಕಾನ್ ಸ್ವಾಗತಿಸಿದರು. ಸಯ್ಯದಾ ಆಯೇಷಾ ರೂಹಿ ಮತ್ತು ಮುಸ್ಕಾನ್ ಕಾರ್ಯಕ್ರಮ ನಿರೂಪಿಸಿದರು. ಡಾ. ಸಾಲಿಹಾ ಖಾತೂನ್ ಹಾಗೂ ಡಾ. ಕುದ್ರತ್ ಉನ್ನಿಸಾ ಶೇಖ್ ವಂದಿಸಿದರು.
ಈ ಸಂದರ್ಭದಲ್ಲಿ ಉಪನ್ಯಾಸಕರಾದ ಡಾ. ವಡ್ಡನಕೇರಿ, ರಿಯಾಜ್ ಪಠಾಣ್, ಮಹಬೂಬ್ ಸಿ, ಫಾತಿಮಾ ಬೇಗಂ, ರಝಿಯಾ ಪರ್ವೀನ್ ಸೇರಿದಂತೆ ಶಿಕ್ಷಣ ನಿಕಾಯದ ಎಲ್ಲಾ ಬೋಧಕ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.



