ರಾಜಕೀಯ

ಗ್ರಾಮೀಣ ಮತಕ್ಷೇತ್ರಗಳಲ್ಲಿ ಜೆಡಿಎಸ್ ಸಂಘಟನೆ ಬಲಪಡಿಸಲು ನೂತನ ಪದಾಧಿಕಾರಿಗಳಿಗೆ ಕರೆ

ಜೆಡಿಎಸ್ ಗ್ರಾಮೀಣ ಘಟಕದ ಪುನರ್‌ರಚನೆ: ಪಕ್ಷ ಬಲಪಡಿಸಲು ಬಿರಬಿಟ್ಟಿ ಕರೆ

ಕಲಬುರಗಿ, ಆ.9: ನೂತನ ಪದಾಧಿಕಾರಿಗಳು ತಮ್ಮ ಮತಕ್ಷೇತ್ರಗಳಲ್ಲಿ ಪಕ್ಷದ ಸಂಘಟನೆಯನ್ನು ಬಲಪಡಿಸುವುದರ ಜೊತೆಗೆ ಜೆಡಿಎಸ್ ಪಕ್ಷವನ್ನು ತಳಮಟ್ಟದಿಂದ ಸಂಘಟಿಸಬೇಕು ಎಂದು ಜಾತ್ಯತೀತ ಜನತಾದಳದ ಜಿಲ್ಲಾ ಮಹಾ ಪ್ರಧಾನ ಕಾರ್ಯದರ್ಶಿ ಬಸವರಾಜ್ ಬಿರಬಿಟ್ಟಿ ಕರೆ ನೀಡಿದರು.

ಜೆಡಿಎಸ್ ಕಚೇರಿಯಲ್ಲಿ ಗ್ರಾಮೀಣ ಮತಕ್ಷೇತ್ರದ ನೂತನ ಪದಾಧಿಕಾರಿಗಳಿಗೆ ನೇಮಕಾತಿ ಆದೇಶ ಪತ್ರ ವಿತರಿಸಿದ ಬಳಿಕ ಮಾತನಾಡಿದ ಅವರು, ಗ್ರಾಮೀಣ ಮತಕ್ಷೇತ್ರಗಳಲ್ಲಿ ಜೆಡಿಎಸ್ ಸಂಘಟನೆಯನ್ನು ಇನ್ನಷ್ಟು ಬಲಪಡಿಸುವ ನಿಟ್ಟಿನಲ್ಲಿ ನೂತನ ಪದಾಧಿಕಾರಿಗಳು ಸಕ್ರಿಯವಾಗಿ ಕಾರ್ಯನಿರ್ವಹಿಸಬೇಕು ಎಂದು ಹೇಳಿದರು.

ಪಕ್ಷದ ತತ್ವ, ಸಿದ್ಧಾಂತ ಹಾಗೂ ಜನಪರ ಕಾರ್ಯಕ್ರಮಗಳನ್ನು ಮನೆಮನೆಗೆ ತಲುಪಿಸುವ ಮೂಲಕ ಪಕ್ಷವನ್ನು ತಳಮಟ್ಟದಿಂದ ಸಂಘಟಿಸಬೇಕು. ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಂಘಟನೆಯನ್ನು ಬಲಪಡಿಸುವ ಜವಾಬ್ದಾರಿ ನೂತನ ಪದಾಧಿಕಾರಿಗಳ ಮೇಲಿದೆ ಎಂದು ಅವರು ತಿಳಿಸಿದರು.

ಜಿಲ್ಲಾ ಯುವ ಘಟಕದ ಅಧ್ಯಕ್ಷ ಪ್ರವೀಣ್ ಎಲ್. ಮಾತನಾಡಿ, ಯುವಕರನ್ನು ಹೆಚ್ಚಿನ ಸಂಖ್ಯೆಯಲ್ಲಿ ಪಕ್ಷದ ಸಂಘಟನೆಯಲ್ಲಿ ತೊಡಗಿಸಿಕೊಳ್ಳುವ ಮೂಲಕ ಗ್ರಾಮೀಣ ಭಾಗದಲ್ಲಿ ಜೆಡಿಎಸ್‌ಗೆ ಮತ್ತಷ್ಟು ಬಲ ತುಂಬುವ ಅಗತ್ಯವಿದೆ. ನೂತನ ಪದಾಧಿಕಾರಿಗಳು ಕಾರ್ಯಕರ್ತರನ್ನು ಒಗ್ಗೂಡಿಸಿ ಪಕ್ಷದ ಸಂಘಟನೆಯನ್ನು ಪರಿಣಾಮಕಾರಿಯಾಗಿ ಕಟ್ಟಬೇಕು ಎಂದು ಹೇಳಿದರು.

ಚಂದ್ರಕಾಂತ ಮೋರೆ ಮಾತನಾಡಿ, ನೂತನ ಪದಾಧಿಕಾರಿಗಳ ನೇಮಕದಿಂದ ಪಕ್ಷದ ಸಂಘಟನೆಗೆ ಹೊಸ ಚೈತನ್ಯ ದೊರೆಯಲಿದೆ. ಎಲ್ಲರೂ ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಿ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಮೂಲಕ ಜೆಡಿಎಸ್ ಪಕ್ಷವನ್ನು ಬಲಪಡಿಸಬೇಕು ಎಂದು ತಿಳಿಸಿದರು.

ಪಕ್ಷದ ಜಿಲ್ಲಾಧ್ಯಕ್ಷ ಬಾಲರಾಜ್ ಎ. ಗುತೇದಾರ್ ಅವರ ಆದೇಶದ ಮೇರೆಗೆ ಗ್ರಾಮೀಣ ಮತಕ್ಷೇತ್ರದ ಅಧ್ಯಕ್ಷ ಗಂಗಾಧರ ಆರ್. ಪಂಚಾಳ್ ಅಂಬಲಗಾ ಅವರ ನೇತೃತ್ವದಲ್ಲಿ ಹಾಗೂ ಜಿಲ್ಲಾ ಮಹಾಪ್ರಧಾನ ಕಾರ್ಯದರ್ಶಿ ಅವರ ಸಮ್ಮುಖದಲ್ಲಿ ನೂತನ ಪದಾಧಿಕಾರಿಗಳ ನೇಮಕಾತಿ ಕಾರ್ಯಕ್ರಮ ನಡೆಯಿತು.

ಕಾರ್ಯಾಧ್ಯಕ್ಷರಾಗಿ ಸಂಜೀವಕುಮಾರ್ ಮಡಕಿ, ಹಿರಿಯ ಉಪಾಧ್ಯಕ್ಷರಾಗಿ ಅಣ್ಣಪ್ಪ ಶಿರಗಾಪುರ, ವಿ.ಕೆ. ಸಲಗರ, ಪ್ರಕಾಶ್ ಗೋಣೆಕಿ ಅಂಬಲಗಾ, ವೀರಂತಪ್ಪ ಆರ್. ಲಿಂಗನಾಯಕ, ಉಪಾಧ್ಯಕ್ಷರಾಗಿ ರಾಜೇಂದ್ರ ಜಿ. ರೊಳೆ, ಬಂಡಪ್ಪ ಡಿ. ಸಂಗೋಳಿ, ಮಹಾ ಪ್ರಧಾನ ಕಾರ್ಯದರ್ಶಿಗಳಾಗಿ ರಮಜಾನ್ ಬಿ. ಮುದ್ದಡಗಾ, ಸಂಘಟನಾ ಕಾರ್ಯದರ್ಶಿಗಳಾಗಿ ಪ್ರಕಾಶ್ ದೊಡ್ಡಮನಿ, ಸಹ ಕಾರ್ಯದರ್ಶಿಗಳಾಗಿ ಬಾಬುರಾವ್ ಎಚ್. ಬಿರಾದಾರ್ ಹಾಗೂ ಸಂಘಟನಾ ಕಾರ್ಯದರ್ಶಿಗಳಾಗಿ ದೇವೇಂದ್ರ ಎ. ಅಂಬಲಗಾ ಅವರನ್ನು ಆಯ್ಕೆ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಸಾಮಾಜಿಕ ಜಾಲತಾಣದ ಅಧ್ಯಕ್ಷ ನಾಗೇಶ್ ಹೆಬ್ಬಾಳ್, ಜಿಲ್ಲಾ ಸಂಚಾಲಕ ಶಿವಲಿಂಗಪ್ಪ ಪಾಟೀಲ ಸೇರಿದಂತೆ ಪಕ್ಷದ ಅನೇಕ ಮುಖಂಡರು, ನೂತನ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button