ಸಂಗೀತ ಅನೇಕ ರೋಗಗಳಿಗೆ ಸಂಜೀವಿನಿ: ಸಿದ್ದರಾಮಪ್ಪ ಆಲಗೂಡಕರ್
ಗುರುಕುಮಾರ್ ಪಂಚಾಕ್ಷರೇಶ್ವರ ಪ್ರಶಸ್ತಿ ಪ್ರದಾನ; ವಿವಿಧ ಕ್ಷೇತ್ರಗಳ ಸಾಧಕರಿಗೆ ಗೌರವ

ಕಲಬುರಗಿ, ಆ. 8: ಸಂಗೀತವು ಅನೇಕ ರೋಗಗಳಿಗೆ ಸಂಜೀವಿನಿಯಂತೆ ಕಾರ್ಯನಿರ್ವಹಿಸುತ್ತದೆ. ಜೀವನದ ಜಂಜಾಟದಲ್ಲಿ ಮುಳುಗಿರುವ ಮನುಷ್ಯನ ಮನಸ್ಸಿಗೆ ಸಂಗೀತ ಮುದ ನೀಡುತ್ತದೆ ಎಂದು ಪಂಚಪೀಠದ ವಾರ್ತಾಧಿಕಾರಿ ಸಿದ್ದರಾಮಪ್ಪ ಆಲಗೂಡಕರ್ ಹೇಳಿದರು.
ನಗರದ ದುಬೈ ಕಾಲೋನಿ ಬಡಾವಣೆಯ ಶ್ರೀ ಶಿವಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ಶ್ರೀ ಕನಕ ಪುರಂದರ ಕಲಾ ಸಾಹಿತ್ಯ ಸಾಂಸ್ಕೃತಿಕ ಕಲಾ ಸೇವಾ ಸಂಸ್ಥೆ ವತಿಯಿಂದ ಪುಣ್ಯಸ್ಮರಣೋತ್ಸವದ ಅಂಗವಾಗಿ ಸಾಧಕರಿಗೆ ಪ್ರಶಸ್ತಿ ಪ್ರದಾನ ಹಾಗೂ ಗುರು ವಚನಾಮೃತ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ಸಂಗೀತವು ಮನಸ್ಸಿಗೆ ನೆಮ್ಮದಿ ನೀಡುವುದಲ್ಲದೆ, ಪ್ರಕೃತಿಯೂ ಸಂಗೀತವನ್ನು ಆಸ್ವಾದಿಸುತ್ತದೆ. ಗಿಡಮರಗಳೂ ಸಂಗೀತಕ್ಕೆ ಸ್ಪಂದಿಸುತ್ತವೆ ಎಂದು ಹೇಳಿದರು.
ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಡಾ. ದಯಾನಂದ ವಾರಿಕ್, ಶಿವಕುಮಾರ ಶಾಸ್ತ್ರೀ ಧುತ್ತರಗಾಂವ, ಶ್ರೀಮತಿ ಗುರುಶಾಂತಮ್ಮ ವೀರಭದ್ರಯ್ಯ ಸ್ವಾಮಿ, ಬಂಡಯ್ಯ ಶಾಸ್ತ್ರೀ, ವಿಶ್ವರಾಧ್ಯ ಹಿರೇಮಠ ಹಾಗೂ ಜಗನ್ನಾಥ ಚೇಂಗಟಿ ಅವರಿಗೆ ಗುರುಕುಮಾರ್ ಪಂಚಾಕ್ಷರೇಶ್ವರ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು.
ಕಾರ್ಯಕ್ರಮದ ಸಾನ್ನಿಧ್ಯವನ್ನು ಸೋಮಯ್ಯ ಸ್ವಾಮಿ ವಹಿಸಿದ್ದರು. ಸೋಮಶೇಖರ ಬೆಳಮಗಿ ಅವರು ಕಾರ್ಯಕ್ರಮ ಉದ್ಘಾಟಿಸಿದರು. ಮಲ್ಲಣ್ಣ ಕಣ್ಣಿ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ದೇವೇಂದ್ರಪ್ಪ, ಜಗದೀಶ ಹಾವನೂರು, ಮಹಾದೇವಪ್ಪ ಕುಂಬಾರ, ಶಿವಶಾಂತಯ್ಯ ನೂರಂದಯ್ಯ ಸ್ವಾಮಿ, ಚನ್ನಬಸಪ್ಪ ಕುಂಬಾರ, ಚನ್ನಪ್ಪ ವಾಡಿ, ಶರಣಬಸಪ್ಪ ಅವರಳ್ಳಿ, ಶರಣು ಕಣ್ಣಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ನಂತರ ನಡೆದ ಸಂಗೀತ ಕಾರ್ಯಕ್ರಮದಲ್ಲಿ ಕೋಟನೂರಿನ ಶಿವಶಂಕರ ಬಿರಾದಾರ, ದತ್ತರಾಜ ಕಲಶೆಟ್ಟಿ, ಬಂಡಯ್ಯ ಸ್ವಾಮಿ, ಶಿವಕುಮಾರ ಮಂಗಲಗಿ, ಶ್ರೀಶೈಲ ಕೊಂಡೆದ, ವಿಜಯಲಕ್ಷ್ಮಿ ಕೆಂಗನಾಳ, ವಿನೋದಕುಮಾರ ದಸ್ತಾಪುರ, ನಂದಿನಿ ಪೊದ್ದಾರ, ಗುರುಶಾಂತಮ್ಮ, ಶರಣು ಸಾಗನೂರು, ನಿರ್ಮಲಾ ಸಿರಗಾಪುರ ಹಾಗೂ ಜಗದೀಶ ಮಾನು ಸೇರಿದಂತೆ ವಿವಿಧ ಕಲಾವಿದರು ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು.
ಸಂಸ್ಥೆಯ ಅಧ್ಯಕ್ಷ ಬಸಯ್ಯ ಬಿ. ಗುತ್ತೇದಾರ ಸ್ವಾಗತಿಸಿದರು. ಸುಂಟನೂರಿನ ನಾಗಲಿಂಗಯ್ಯ ಶಾಸ್ತ್ರೀ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಸಂಗೀತಾಭಿಮಾನಿಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.



