ಜಿಲ್ಲಾಸುದ್ದಿ

ತಂಬಾಕು ಬಳಕೆ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮ: ನಗರ ಪೊಲೀಸ್ ಆಯುಕ್ತ

ಕಲಬುರಗಿ, ಸೆ. 3: ತಂಬಾಕು ಉತ್ಪನ್ನಗಳ ಬಳಕೆ ನಿಯಂತ್ರಣ ಹಾಗೂ ಸಾರ್ವಜನಿಕರ ಆರೋಗ್ಯ ರಕ್ಷಣೆಗೆ COTPA ಕಾಯ್ದೆಯ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು ಎಂದು ನಗರ ಪೊಲೀಸ್ ಆಯುಕ್ತ ಡಾ. ಶರಣಪ್ಪ ಎಸ್.ಡಿ. ಸೂಚಿಸಿದರು.
ನಗರ ಪೊಲೀಸ್ ಆಯುಕ್ತರ ಕಚೇರಿ ಸಭಾಂಗಣದಲ್ಲಿ ಗುರುವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಇಲಾಖೆ, ಜಿಲ್ಲಾ ತಂಬಾಕು ನಿಯಂತ್ರಣ ಕೋಶ ಹಾಗೂ ಗೃಹ ಇಲಾಖೆ ಮತ್ತು ನಗರ ಪೊಲೀಸ್ ಆಯುಕ್ತಾಲಯದ ಅಧಿಕಾರಿಗಳಿಗಾಗಿ ಆಯೋಜಿಸಿದ್ದ ‘COTPA ರಾಜ್ಯ ತಿದ್ದುಪಡಿ–2024, PECA–2019 ಹಾಗೂ ಇತರ ಕಾನೂನುಗಳ ಕುರಿತು ಸಂವೇದನಾಶೀಲ ಕಾರ್ಯಾಗಾರ’ ಉದ್ಘಾಟಿಸಿ ಅವರು ಮಾತನಾಡಿದರು.
ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ನಿಯಂತ್ರಣ, ಅಪ್ರಾಪ್ತ ವಯಸ್ಕರಿಗೆ ತಂಬಾಕು ಉತ್ಪನ್ನಗಳ ಮಾರಾಟಕ್ಕೆ ಇರುವ ನಿರ್ಬಂಧ ಹಾಗೂ ತಂಬಾಕು ಉತ್ಪನ್ನಗಳ ಜಾಹೀರಾತು ಮತ್ತು ಪ್ರಚಾರದ ಮೇಲಿನ ನಿಯಂತ್ರಣಗಳ ಬಗ್ಗೆ ಅಧಿಕಾರಿಗಳು ಅರಿವು ಹೊಂದಿರಬೇಕು ಎಂದು ಹೇಳಿದರು.
PECA–2019 (ಎಲೆಕ್ಟ್ರಾನಿಕ್ ಸಿಗರೇಟ್‌ಗಳ ನಿಷೇಧ ಕಾಯ್ದೆ) ಅಡಿಯಲ್ಲಿ ಎಲೆಕ್ಟ್ರಾನಿಕ್ ಸಿಗರೇಟ್‌ಗಳ ಉತ್ಪಾದನೆ, ಆಮದು, ಮಾರಾಟ, ವಿತರಣೆ, ಸಂಗ್ರಹಣೆ ಹಾಗೂ ಜಾಹೀರಾತಿನ ಮೇಲಿರುವ ನಿಷೇಧಗಳ ಕುರಿತು ಅಧಿಕಾರಿಗಳಿಗೆ ಮಾಹಿತಿ ನೀಡಿದರು.
ಕಲಬುರಗಿ ನಗರದ ಸಾರ್ವಜನಿಕ ಸ್ಥಳಗಳು, ಶಿಕ್ಷಣ ಸಂಸ್ಥೆಗಳ ಆವರಣ ಹಾಗೂ ರಸ್ತೆಗಳಲ್ಲಿ ಧೂಮಪಾನ ಸೇರಿದಂತೆ ಕಾನೂನುಬಾಹಿರ ಚಟುವಟಿಕೆಗಳು ಕಂಡುಬಂದಲ್ಲಿ ಕ್ರಮ ಕೈಗೊಳ್ಳಬೇಕು. ತಂಬಾಕು, ಗುಟ್ಕಾ ಸೇರಿದಂತೆ ದುಶ್ಚಟಗಳಿಂದ ಯುವಜನತೆ ದೂರ ಉಳಿಯುವಂತೆ ಜಾಗೃತಿ ಮೂಡಿಸಬೇಕು ಎಂದು ಸೂಚಿಸಿದರು.
ತಂಬಾಕು ಸೇವನೆಯ ದುಷ್ಪರಿಣಾಮಗಳಿಂದ ಸ್ವಂತ ಆರೋಗ್ಯದ ಜತೆಗೆ ಇತರರ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ. ಹೀಗಾಗಿ ಪೊಲೀಸ್ ಇಲಾಖೆಯ ಸಿಬ್ಬಂದಿಯೂ ತಂಬಾಕು ಮತ್ತು ಗುಟ್ಕಾ ಸೇವನೆಯಂತಹ ದುಶ್ಚಟಗಳನ್ನು ತ್ಯಜಿಸುವ ಮೂಲಕ ಸಮಾಜಕ್ಕೆ ಮಾದರಿಯಾಗಬೇಕು ಎಂದು ಸಲಹೆ ನೀಡಿದರು.
COTPA ಕಾಯ್ದೆಯಡಿ ಸಾರ್ವಜನಿಕ ಸ್ಥಳಗಳಲ್ಲಿ ನಿಯಮ ಉಲ್ಲಂಘಿಸುವವರಿಗೆ ಈ ಹಿಂದೆ ₹500 ದಂಡ ವಿಧಿಸಲಾಗುತ್ತಿತ್ತು. ತಿದ್ದುಪಡಿ ನಿಯಮಗಳ ಅನ್ವಯ ₹1,000 ದಂಡ ವಿಧಿಸುವ ಕುರಿತು ಕ್ರಮ ಕೈಗೊಳ್ಳಬೇಕು. ಎಲ್ಲ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಕಾಯ್ದೆಯ ಕುರಿತು ಜಾಗೃತಿ ಮೂಡಿಸುವ ಪೋಸ್ಟರ್‌ಗಳನ್ನು ಅಳವಡಿಸಿ, ನಿಯಮ ಉಲ್ಲಂಘಿಸುವವರ ವಿರುದ್ಧ ಕಾರ್ಯಾಚರಣೆ ನಡೆಸಬೇಕು ಎಂದು ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದರು.
ಕಾರ್ಯಾಗಾರದಲ್ಲಿ ವೈಟಲ್ ಸ್ಟ್ರಾಟಜಿ, ನವದೆಹಲಿಯ ಉಪ ನಿರ್ದೇಶಕ ಡಾ. ಅಮಿತ್ ಯಾದವ್ ಅವರು COTPA–2003ರ ರಾಜ್ಯ ತಿದ್ದುಪಡಿ–2024ರ ಪ್ರಮುಖ ಅಂಶಗಳು, ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ನಿಯಂತ್ರಣ, ಅಪ್ರಾಪ್ತರಿಗೆ ತಂಬಾಕು ಉತ್ಪನ್ನಗಳ ಮಾರಾಟ ನಿಷೇಧ ಹಾಗೂ ಜಾಹೀರಾತು ಮತ್ತು ಪ್ರಚಾರದ ಮೇಲಿನ ನಿಯಂತ್ರಣ ಕುರಿತು ವಿವರಿಸಿದರು.
ಎಲೆಕ್ಟ್ರಾನಿಕ್ ಸಿಗರೇಟ್‌ಗಳ ನಿಷೇಧಕ್ಕೆ ಸಂಬಂಧಿಸಿದ PECA–2019ರ ನಿಯಮಗಳ ಬಗ್ಗೆಯೂ ಮಾಹಿತಿ ನೀಡಲಾಯಿತು.
ಕಾರ್ಯಾಗಾರದ ಅಂಗವಾಗಿ COTPA ಕಾಯ್ದೆಯಡಿ ಸಾರ್ವಜನಿಕ ಸ್ಥಳಗಳಲ್ಲಿ ದಂಡ ವಿಧಿಸುವ ಕುರಿತು ಹಾಗೂ ತಂಬಾಕು ಸೇವನೆಯ ವಿರುದ್ಧ ಜಾಗೃತಿ ಮೂಡಿಸುವ ಪೋಸ್ಟರ್‌ಗಳನ್ನು ಬಿಡುಗಡೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಉಪ ನಗರ ಪೊಲೀಸ್ ಆಯುಕ್ತೆ (ಕಾನೂನು ಮತ್ತು ಸುವ್ಯವಸ್ಥೆ) ಶಾಲೂ ಐಪಿಎಸ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಶರಣಬಸಪ್ಪ ಕ್ಯಾತನಾಳ್ ಉಪಸ್ಥಿತರಿದ್ದರು.
ಸಂಪನ್ಮೂಲ ವ್ಯಕ್ತಿಗಳಾಗಿ ಎಸ್‌ಎಸ್‌ಎಲ್ ಕಾನೂನು ಕಾಲೇಜಿನ ಪ್ರಾಂಶುಪಾಲೆ ಡಾ. ಮಹೇಶ್ವರಿ ಹಿರೇಮಠ್ ಹಾಗೂ ರಾಜ್ಯ ತಂಬಾಕು ನಿಯಂತ್ರಣ ಕೋಶದ ವಿಭಾಗೀಯ ಸಂಯೋಜಕ ಮಹಾಂತೇಶ ಉಳ್ಳಾಗಡ್ಡಿ ಭಾಗವಹಿಸಿದ್ದರು.
ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಜಿಲ್ಲಾ ಸಲಹೆಗಾರ್ತಿ ಸುಜಾತಾ ಪಾಟೀಲ, ಸಮಾಜ ಕಾರ್ಯಕರ್ತೆ ಆರತಿ ಧನಶ್ರೀ, ಸೈಕಾಲಜಿಸ್ಟ್‌ ಕೌನ್ಸಿಲರ್ ಮಂಜುನಾಥ ಕಂಬಾಳಿಮಠ, ಗಣಕಯಂತ್ರ ಸಹಾಯಕ ರವಿಕುಮಾರ್ ಪೂಜಾರಿ ಸೇರಿದಂತೆ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದರು.
‘ತಂಬಾಕು ಮುಕ್ತ ಸಮಾಜ ಮತ್ತು ಆರೋಗ್ಯಕರ ಭವಿಷ್ಯಕ್ಕಾಗಿ ನಾವು ಒಟ್ಟಾಗಿ ಕೆಲಸ ಮಾಡೋಣ’ ಎಂಬ ಸಂದೇಶದೊಂದಿಗೆ ಕಾರ್ಯಾಗಾರ ನಡೆಯಿತು.

Related Articles

Leave a Reply

Your email address will not be published. Required fields are marked *

Back to top button