ರಾಜಕೀಯ

ಅಜಯಸಿಂಗ್‌ಗೆ ಉತ್ತಮ ಖಾತೆ ನೀಡಿ: ಎಂ.ಎಸ್. ಪಾಟೀಲ ನರಿಬೋಳ ಆಗ್ರಹ

ಅಜಯಸಿಂಗ್ ಅವರ ಅನುಭವ ಹಾಗೂ ಸಾಮರ್ಥ್ಯಕ್ಕೆ ತಕ್ಕ ಜವಾಬ್ದಾರಿ ನೀಡಿದರೆ ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ಹೆಚ್ಚಿನ ಬಲ

ಕಲಬುರಗಿ: ಜೇವರ್ಗಿ ಶಾಸಕ ಅಜಯಸಿಂಗ್ ಅವರಿಗೆ ಸಚಿವ ಸ್ಥಾನ ನೀಡಿರುವುದು ಸಂತಸದ ವಿಚಾರವಾಗಿದ್ದು, ಅವರ ಅನುಭವ, ಸಾಮರ್ಥ್ಯ ಹಾಗೂ ಈ ಭಾಗದ ಅಭಿವೃದ್ಧಿಯ ಮೇಲಿನ ಕಾಳಜಿಗೆ ಅನುಗುಣವಾಗಿ ಉತ್ತಮ ಹಾಗೂ ಪ್ರಮುಖ ಖಾತೆಯನ್ನು ನೀಡಬೇಕು ಎಂದು ಕಲ್ಯಾಣ ಕರ್ನಾಟಕ ಪ್ರತ್ಯೇಕ ರಾಜ್ಯ ಹೋರಾಟ ಸಮಿತಿ ಅಧ್ಯಕ್ಷ ಎಂ.ಎಸ್. ಪಾಟೀಲ ನರಿಬೋಳ ಆಗ್ರಹಿಸಿದ್ದಾರೆ.

ಅಜಯಸಿಂಗ್ ಅವರಿಗೆ ಸಚಿವ ಸ್ಥಾನ ದೊರೆಯಲು ಹಲವು ವರ್ಷಗಳ ಕಾಲ ಕಾಯಬೇಕಾಯಿತು. ಕಾಂಗ್ರೆಸ್ ಪಕ್ಷಕ್ಕಾಗಿ ನಿರಂತರವಾಗಿ ಶ್ರಮಿಸಿದ ಅವರಿಗೆ ಕೊನೆಗೂ ಹೈಕಮಾಂಡ್ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ನೇತೃತ್ವದಲ್ಲಿ ಸಚಿವ ಸ್ಥಾನ ನೀಡಿರುವುದು ಸ್ವಾಗತಾರ್ಹ ಬೆಳವಣಿಗೆಯಾಗಿದೆ ಎಂದು ಅವರು ತಿಳಿಸಿದ್ದಾರೆ.

ಕಲ್ಯಾಣ ಕರ್ನಾಟಕ ಭಾಗದ ಬಗ್ಗೆ ಹೆಚ್ಚಿನ ಕಾಳಜಿ ಹೊಂದಿರುವ ಕುಟುಂಬಗಳಲ್ಲಿ ಮಾಜಿ ಮುಖ್ಯಮಂತ್ರಿ ದಿವಂಗತ ಧರ್ಮಸಿಂಗ್ ಅವರ ಕುಟುಂಬವೂ ಪ್ರಮುಖವಾಗಿದೆ. ಅವರ ಪುತ್ರ ಅಜಯಸಿಂಗ್ ಸಾಮಾನ್ಯ ರಾಜಕಾರಣಿಯಲ್ಲ. ಕ್ಷೇತ್ರದ ಶಾಸಕರಾಗಿ ಹಾಗೂ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ಅಧ್ಯಕ್ಷರಾಗಿ ಈ ಭಾಗಕ್ಕೆ ಹಲವು ಕೊಡುಗೆಗಳನ್ನು ನೀಡಿದ್ದಾರೆ. ತಾಂತ್ರಿಕ ಹಾಗೂ ಸಾಮಾಜಿಕ ಕ್ಷೇತ್ರಗಳ ಬಗ್ಗೆ ಉತ್ತಮ ಅರಿವು ಹೊಂದಿರುವ ಅವರು, ಪ್ರಸಕ್ತ ವಿದ್ಯಮಾನಗಳ ಕುರಿತು ಸಮಗ್ರ ಮಾಹಿತಿ ಹೊಂದಿದ್ದಾರೆ. ಯುವಜನರಲ್ಲಿಯೂ ಉತ್ತಮ ಜನಪ್ರಿಯತೆ ಗಳಿಸಿದ್ದಾರೆ ಎಂದು ನರಿಬೋಳ ಹೇಳಿದ್ದಾರೆ.

ಸಚಿವ ಸ್ಥಾನ ನೀಡುವುದಾಗಿ ನೀಡಲಾಗಿದ್ದ ಭರವಸೆಯ ಹಿನ್ನೆಲೆಯಲ್ಲಿ ಅಜಯಸಿಂಗ್ ಅವರು ಹಲವು ವರ್ಷಗಳಿಂದ ಕಾಂಗ್ರೆಸ್ ಪಕ್ಷದ ಸಂಘಟನೆ ಹಾಗೂ ಜನಪರ ಕಾರ್ಯಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಇದೀಗ ಸಚಿವ ಸ್ಥಾನ ದೊರೆತಿರುವುದರಿಂದ ಅವರ ಅನುಭವವನ್ನು ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ಬಳಸಿಕೊಳ್ಳುವ ಅವಕಾಶ ಸರ್ಕಾರಕ್ಕೆ ದೊರೆತಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಕೇವಲ ನಾಮಮಾತ್ರಕ್ಕೆ ಸಚಿವ ಸ್ಥಾನ ನೀಡದೆ, ಅಜಯಸಿಂಗ್ ಅವರ ಸೇವೆ, ಘನತೆ, ಪರಿಣಿತಿ ಹಾಗೂ ರಾಜಕೀಯ ಅನುಭವಕ್ಕೆ ತಕ್ಕಂತಹ ಪ್ರಮುಖ ಖಾತೆಯನ್ನು ನೀಡಬೇಕು. ಇದರಿಂದ ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲು ಸಾಧ್ಯವಾಗಲಿದೆ ಎಂದು ಅವರು ಒತ್ತಾಯಿಸಿದ್ದಾರೆ.

ವಿಶೇಷವಾಗಿ ಕೃಷಿ ಖಾತೆ ನೀಡಿದರೆ ಕಲ್ಯಾಣ ಕರ್ನಾಟಕದ ರೈತರು ಎದುರಿಸುತ್ತಿರುವ ಸಮಸ್ಯೆಗಳಿಗೆ ಸ್ಪಂದಿಸಲು ಹಾಗೂ ಕೃಷಿ ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲು ಅನುಕೂಲವಾಗಲಿದೆ ಎಂದು ಎಂ.ಎಸ್. ಪಾಟೀಲ ನರಿಬೋಳ ತಿಳಿಸಿದ್ದಾರೆ.

ಅಜಯಸಿಂಗ್ ಅವರಿಗೆ ಅವರ ಸ್ಥಾನಮಾನ ಹಾಗೂ ಸಾಮರ್ಥ್ಯಕ್ಕೆ ತಕ್ಕ, ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ಅನುಕೂಲವಾಗುವ ಜವಾಬ್ದಾರಿಯುತ ಖಾತೆ ನೀಡುವ ಮೂಲಕ ಈ ಭಾಗದ ಜನರಿಗೆ ಸರ್ಕಾರ ನ್ಯಾಯ ಒದಗಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button