ಜಿಲ್ಲಾಸುದ್ದಿ

ಅರಿತವರಿಂದ ಭವಿಷ್ಯ ನಿರ್ಮಾಣ ಸಾಧ್ಯ: ಅಪ್ಪಾರಾವ್ ಅಕ್ಕೋಣಿ

ಕಲಬುರಗಿ, ಸೆ.18: ದೇಶ ಸ್ವಾತಂತ್ರ್ಯಗೊಂಡು ಒಂದು ವರ್ಷ, ಒಂದು ತಿಂಗಳು, ಎರಡು ದಿನಗಳ ಬಳಿಕ ಹೈದರಾಬಾದ್ ಸಂಸ್ಥಾನದಿಂದ ವಿಮೋಚನೆಗೊಂಡ ಕಲ್ಯಾಣ ಕರ್ನಾಟಕ ಭಾಗದ ಸ್ವಾತಂತ್ರ್ಯ ಚಳವಳಿಯಲ್ಲಿ ಅನೇಕರು ತ್ಯಾಗ, ಬಲಿದಾನ ಮಾಡಿದ್ದಾರೆ ಎಂದು ಕನ್ನಡ ನಾಡು ಲೇಖಕರ ಹಾಗೂ ಓದುಗರ ಸಹಕಾರ ಸಂಘದ ಅಧ್ಯಕ್ಷ ಅಪ್ಪಾರಾವ್ ಅಕ್ಕೋಣಿ ಹೇಳಿದರು.

ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ವೀರಮ್ಮ ಗಂಗಸಿರಿ ಮಹಿಳಾ ಮಹಾವಿದ್ಯಾಲಯದ ಆವರಣದಲ್ಲಿ ಆಯೋಜಿಸಿದ್ದ ಡಾ. ಸುಭಾಷ್ಚಂದ್ರ ದೊಡ್ಡಮನಿ ಅವರು ರಚಿಸಿದ ‘ಆಪರೇಷನ್ ಪೋಲೋ’ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದರು.

ಹೈದರಾಬಾದ್ ಕರ್ನಾಟಕದ ಇತಿಹಾಸ ಹಾಗೂ ಹೋರಾಟ ಅತ್ಯಂತ ರೋಚಕವಾಗಿದೆ. ಕಲ್ಯಾಣ ಕರ್ನಾಟಕ ಭಾಗದ ವಿಮೋಚನೆಗಾಗಿ ನಡೆದ ಹೋರಾಟದಲ್ಲಿ ಅನೇಕ ಮಹನೀಯರು ಕೊಡುಗೆ ನೀಡಿದ್ದಾರೆ. ಅವರ ತ್ಯಾಗ ಮತ್ತು ಹೋರಾಟವನ್ನು ಇಂದಿನ ಪೀಳಿಗೆ ಅರಿತುಕೊಳ್ಳಬೇಕಿದೆ ಎಂದು ಹೇಳಿದರು.

ಕಲಬುರಗಿಯ ಸರ್ದಾರ್ ಶರಣಗೌಡ, ಅಪ್ಪಾರಾವ್ ಪಾಟೀಲ, ಕೆ. ಚನ್ನಬಸಪ್ಪ, ಬೀದರ್‌ನ ರಾಮಚಂದ್ರ ವೀರಪ್ಪ, ರಾಯಚೂರಿನ ಎಂ. ನಾಗಪ್ಪ, ಯಾದಗಿರಿಯ ಅಚ್ಚಪ್ಪಗೌಡ ಸುಬೇದಾರ್, ಕೊಪ್ಪಳದ ಶಿವಮೂರ್ತಿ ಅಳವಂಡಿ ಸೇರಿದಂತೆ ಈ ಭಾಗದ ನೂರಾರು ಜನರು ತರಬೇತಿ, ಶಿಬಿರಗಳಲ್ಲಿ ಪಾಲ್ಗೊಂಡು ರಜಾಕಾರರ ವಿರುದ್ಧ ಹೋರಾಟ ನಡೆಸಿದರು. ಅಂದಿನ ಕೇಂದ್ರ ಗೃಹ ಸಚಿವರಾಗಿದ್ದ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರು ಮಿಲಿಟರಿ ಕಾರ್ಯಾಚರಣೆ ನಡೆಸಿ ಹೈದರಾಬಾದ್ ಸಂಸ್ಥಾನವನ್ನು ವಿಲೀನಗೊಳಿಸಿದರು ಎಂದು ಅವರು ವಿವರಿಸಿದರು.

ಇತಿಹಾಸ ಅರಿತರೆ ಭವಿಷ್ಯ ನಿರ್ಮಾಣ ಸಾಧ್ಯ

ಪತ್ರಕರ್ತ ಹಾಗೂ ಲೇಖಕ ಡಾ. ಶಿವರಂಜನ್ ಸತ್ಯಂಪೇಟೆ ಮಾತನಾಡಿ, ವರ್ತಮಾನವನ್ನು ಅರಿಯಬೇಕಾದರೆ ಭೂತಕಾಲವನ್ನು ತಿಳಿದುಕೊಳ್ಳುವುದು ಅಗತ್ಯ. ಇತಿಹಾಸ ಅರಿತವರಿಂದ ಮಾತ್ರ ಭವಿಷ್ಯ ನಿರ್ಮಾಣ ಸಾಧ್ಯ ಎಂಬುದಕ್ಕೆ ‘ಆಪರೇಷನ್ ಪೋಲೋ’ ಕೃತಿ ಸಾಕ್ಷಿಯಾಗಿದೆ ಎಂದರು.

ವಿಭಿನ್ನ ಆಕಾರ, ಗಾತ್ರದ ದೃಷ್ಟಿಯಿಂದ ಗಮನ ಸೆಳೆಯುವ ಈ ಕೃತಿಯಲ್ಲಿ ಹೈದರಾಬಾದ್ ವಿಮೋಚನೆಗಾಗಿ ಹೋರಾಡಿದ ಮಹನೀಯರ ಕೊಡುಗೆ ಹಾಗೂ ಇತಿಹಾಸವನ್ನು ದಾಖಲಿಸಲಾಗಿದೆ. ಯಾವುದೇ ಒಂದು ಜಾತಿ ಅಥವಾ ಧರ್ಮವನ್ನು ನಿಂದಿಸುವ, ಪ್ರಚೋದಿಸುವ ರೀತಿಯಲ್ಲಿ ಬರೆಯದೆ, ಇತಿಹಾಸದ ಸತ್ಯ ಘಟನೆಗಳನ್ನು ಕೃತಿಯಲ್ಲಿ ದಾಖಲಿಸಲಾಗಿದೆ ಎಂದು ಹೇಳಿದರು.

ಕಾರ್ಯಕ್ರಮವನ್ನು ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯ ಹಾಗೂ ಸಂಯೋಜಕ ನಾಗಣ್ಣ ಘಂಟಿ ಉದ್ಘಾಟಿಸಿದರು. ಕಾಲೇಜಿನ ಪ್ರಾಚಾರ್ಯ ಆರ್.ಬಿ. ಕೊಂಡಾ ಅಧ್ಯಕ್ಷತೆ ವಹಿಸಿದ್ದರು. ರೇಖಾ ಡಿ.ಟಿ. ನಿರೂಪಿಸಿದರು. ಡಾ. ಸುಭಾಷ್ಚಂದ್ರ ದೊಡ್ಡಮನಿ ವಂದಿಸಿದರು.

ಡಾ. ಮೋಹನರಾಜ್ ಪತ್ತಾರ್, ಡಾ. ಮಹೇಶ್ ಗಂವ್ಹಾರ್, ವಿಶ್ವನಾಥ್ ಡಿ., ಸುಷ್ಮಾ ಕುಲಕರ್ಣಿ, ಡಾ. ಪ್ರೇಮಚಂದ್ರ ಚವ್ಹಾಣ, ಡಾ. ನಾಗರತ್ನ, ಕವಿತಾ ಎನ್., ಶ್ರೇಯಸ್ ದೊಡ್ಡಮನಿ ಸೇರಿದಂತೆ ಹಲವರು ಭಾಗವಹಿಸಿದ್ದರು.

Related Articles

Leave a Reply

Your email address will not be published. Required fields are marked *

Back to top button