ಅಪರಾಧ

ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ವಸತಿ ಗೃಹಗಳಿಗೆ ದುಷ್ಕರ್ಮಿಗಳ ನುಗ್ಗಾಟ

ಮುಖ ಮುಚ್ಚಿಕೊಂಡು ಚಾಕು ಹಿಡಿದು ಬಂದ ಮೂವರು; ಸಿಸಿಟಿವಿಯಲ್ಲಿ ದೃಶ್ಯ ಸೆರೆ – ನರೋಣಾ ಠಾಣೆಯಲ್ಲಿ ಪ್ರಕರಣ ದಾಖಲು

ಕಲಬುರಗಿ, ಆ.6: ಜಿಲ್ಲೆಯ ಆಳಂದ ತಾಲ್ಲೂಕಿನ ಕಡಗಂಚಿ ಸಮೀಪದ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಅಧ್ಯಾಪಕರ ವಸತಿ ಗೃಹಗಳಿಗೆ ದುಷ್ಕರ್ಮಿಗಳು ನುಗ್ಗಿದ ಘಟನೆ ಬೆಳಕಿಗೆ ಬಂದಿದೆ. ಘಟನೆ ಆಗಸ್ಟ್‌ 1ರ ಮುಂಜಾನೆ ಸುಮಾರು 2.40 ಗಂಟೆಗೆ ನಡೆದಿರುವುದು ತಿಳಿದುಬಂದಿದೆ.

ಮೂವರು ದುಷ್ಕರ್ಮಿಗಳು ವಿಶ್ವವಿದ್ಯಾಲಯದ ಮೂರು ವಸತಿ ಗೃಹಗಳ ಬಾಗಿಲು ಮುರಿದು ಒಳನುಗ್ಗಿರುವ ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ. ಮುಖವನ್ನು ಮಾಸ್ಕ್‌ನಿಂದ ಮುಚ್ಚಿಕೊಂಡಿದ್ದ ಅವರು ಕೈಯಲ್ಲಿ ಚಾಕು ಹಿಡಿದು ವಸತಿ ಗೃಹಗಳ ಆವರಣದಲ್ಲಿ ಓಡಾಡುತ್ತಿರುವುದು ದೃಶ್ಯಗಳಲ್ಲಿ ಕಂಡುಬಂದಿದೆ.

ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾದ ಡಾ. ಮಹಿಮಾರಾಜ್, ಡಾ. ಸಂಗಮೇಶ್ ಹಾಗೂ ಡಾ. ಎಂ. ಶಿವಮೂರ್ತಿ ಅವರಿಗೆ ಹಂಚಿಕೆ ಮಾಡಲಾಗಿದ್ದ ವಸತಿ ಗೃಹಗಳಿಗೆ ದುಷ್ಕರ್ಮಿಗಳು ಪ್ರವೇಶಿಸಿದ್ದರು. ಅದೃಷ್ಟವಶಾತ್ ಘಟನೆ ನಡೆದ ವೇಳೆ ವಸತಿ ಗೃಹಗಳಲ್ಲಿ ಯಾರೂ ಇಲ್ಲದಿದ್ದ ಕಾರಣ ಯಾವುದೇ ಅನಾಹುತ ಸಂಭವಿಸಿಲ್ಲ.

ಘಟನೆ ಸಂಬಂಧ ವಿಶ್ವವಿದ್ಯಾಲಯದ ಕುಲಸಚಿವ ಪ್ರೊ. ಆರ್.ಆರ್. ಬಿರಾದಾರ್ ಅವರು ದೂರು ದಾಖಲಿಸಿದ್ದು, ನರೋಣಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ ಆರೋಪಿಗಳ ಪತ್ತೆಗೆ ತನಿಖೆ ಮುಂದುವರಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button