ಮೇಯರ್ ಚುನಾವಣೆ ಮುಂದೂಡಿಕೆ ಆರೋಪ; ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಶಿವಸೇನೆ ವಾಗ್ದಾಳಿ
ಹೈಕೋರ್ಟ್ ಆದೇಶದಂತೆ ಚುನಾವಣೆ ನಡೆಸಬೇಕಿತ್ತು ಎಂದು ಒತ್ತಾಯ – ಆಡಳಿತ ಪಕ್ಷದ ವಿರುದ್ಧ ತೀವ್ರ ಟೀಕೆ

ಕಲಬುರಗಿ, ಆ.7: ಕಲಬುರಗಿ ಮಹಾನಗರ ಪಾಲಿಕೆಯ ಮೇಯರ್ ಹಾಗೂ ಉಪಮೇಯರ್ ಚುನಾವಣೆ ಮುಂದೂಡಿರುವ ವಿಚಾರಕ್ಕೆ ಸಂಬಂಧಿಸಿ ಶಿವಸೇನೆ ರಾಜ್ಯಾಧ್ಯಕ್ಷ ಸಿದ್ದಲಿಂಗ ಸ್ವಾಮೀಜಿ ರಾಜ್ಯ ಸರ್ಕಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹೈಕೋರ್ಟ್ ನಿರ್ದೇಶನದಂತೆ ಆಗಸ್ಟ್ 7ರಂದು ಮೇಯರ್ ಹಾಗೂ ಉಪಮೇಯರ್ ಚುನಾವಣೆ ನಡೆಸಬೇಕಾಗಿತ್ತು. ಆದರೆ ಮೇಯರ್ ಸ್ಥಾನ ಬದಲಾವಣೆಯನ್ನು ತಪ್ಪಿಸಿ ಹಾಲಿ ಮೇಯರ್ ಅವರನ್ನು ಮುಂದುವರಿಸಲು ಉದ್ದೇಶಪೂರ್ವಕವಾಗಿ ಚುನಾವಣೆ ಮುಂದೂಡಲಾಗಿದೆ ಎಂದು ಆರೋಪಿಸಿದರು.
ಕರ್ನಾಟಕ ಮುನ್ಸಿಪಲ್ ಕಾರ್ಪೊರೇಷನ್ ಕಾಯ್ದೆ, 1976ರ ಸೆಕ್ಷನ್ 10ರ ಪ್ರಕಾರ ಮೇಯರ್ ಹಾಗೂ ಉಪಮೇಯರ್ ಆಯ್ಕೆ ಪ್ರಕ್ರಿಯೆ ನಡೆಯಬೇಕಿದ್ದು, ಅವಧಿ ಪೂರ್ಣಗೊಂಡ ಬಳಿಕ ತಕ್ಷಣವೇ ಚುನಾವಣೆ ನಡೆಸಬೇಕು ಎಂದು ಅವರು ಒತ್ತಾಯಿಸಿದರು.
ಹೈಕೋರ್ಟ್ ಕೂಡ ಆಗಸ್ಟ್ 7ರಂದು ಚುನಾವಣೆ ನಡೆಸುವಂತೆ ಆದೇಶ ನೀಡಿದ್ದರೂ, ಪಾಲಿಕೆ ಆಡಳಿತ ವಿವಿಧ ಕಾರಣಗಳನ್ನು ಮುಂದಿಟ್ಟು ಚುನಾವಣೆಯನ್ನು ಮುಂದೂಡಿದೆ. ಇದರ ಹಿಂದೆ ಸಚಿವ ಪ್ರಿಯಾಂಕ್ ಖರ್ಗೆ ಅವರ ರಾಜಕೀಯ ಹಸ್ತಕ್ಷೇಪವಿದೆ ಎಂದು ಸಿದ್ದಲಿಂಗ ಸ್ವಾಮೀಜಿ ಆರೋಪಿಸಿದರು.
ಅಲ್ಪಸಂಖ್ಯಾತ ಸಮುದಾಯಕ್ಕೆ ಸಿಗಬೇಕಿದ್ದ ಮೇಯರ್ ಸ್ಥಾನವನ್ನು ಉದ್ದೇಶಪೂರ್ವಕವಾಗಿ ವಿಳಂಬಗೊಳಿಸಲಾಗುತ್ತಿದೆ ಎಂದು ದೂರಿದ ಅವರು, ಈ ಕ್ರಮವು ಅಲ್ಪಸಂಖ್ಯಾತ ಸಮುದಾಯದ ಹಕ್ಕಿಗೆ ಧಕ್ಕೆಯಾಗಿದೆ ಎಂದು ಹೇಳಿದರು. ಈ ತಿಂಗಳ 29ರೊಳಗೆ ಮೇಯರ್ ಚುನಾವಣೆ ನಡೆಸಬೇಕು ಎಂದು ಅವರು ಆಗ್ರಹಿಸಿದರು.
ಮಹಾನಗರ ಪಾಲಿಕೆಯಲ್ಲಿ ಅಭಿವೃದ್ಧಿ ಕಾರ್ಯಗಳು ಕುಂಠಿತಗೊಂಡಿದ್ದು, ಕಳೆದ ಕೆಲವು ವರ್ಷಗಳಿಂದ ನಗರದ ಅಭಿವೃದ್ಧಿಗೆ ಆದ್ಯತೆ ಸಿಗುತ್ತಿಲ್ಲ ಎಂದು ಟೀಕಿಸಿದ ಅವರು, ಆಡಳಿತ ಪಕ್ಷ ರಾಜಕೀಯ ದ್ವೇಷದ ಹಿನ್ನೆಲೆಯಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ಆರೋಪಿಸಿದರು.
ಪಾಲಿಕೆಯ ವಿರೋಧ ಪಕ್ಷದ ಸದಸ್ಯರು ಆಡಳಿತ ಪಕ್ಷವನ್ನು ಪ್ರಶ್ನಿಸುವಲ್ಲಿ ವಿಫಲರಾಗಿದ್ದಾರೆ ಎಂದು ಟೀಕಿಸಿದ ಅವರು, ನಗರಾಭಿವೃದ್ಧಿ ಹಾಗೂ ಜನಪರ ಆಡಳಿತಕ್ಕೆ ಆದ್ಯತೆ ನೀಡುವಂತೆ ಸರ್ಕಾರವನ್ನು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಗುರುಶಾಂತ್ ಟೆಂಗಳಿ, ರಾಕೇಶ್ ಜಮಾದಾರ್ ಸೇರಿದಂತೆ ಶಿವಸೇನೆ ಮುಖಂಡರು ಉಪಸ್ಥಿತರಿದ್ದರು.



