ರಾಜ್ಯ

ಹೊರಗುತ್ತಿಗೆ ಕಾರ್ಮಿಕರಿಗೆ ಪರಿಷ್ಕೃತ ಕನಿಷ್ಠ ವೇತನ ಜಾರಿಗೆ ಆಗ್ರಹಿಸಿ ಪ್ರತಿಭಟನೆ

ಒಂಬತ್ತು ವರ್ಷಗಳಿಂದ ವೇತನ ಪರಿಷ್ಕರಣೆ ಬಾಕಿ; ಸರ್ಕಾರ ತಕ್ಷಣ ಅಧಿಸೂಚನೆ ಜಾರಿಗೊಳಿಸಿ ಬಾಕಿ ವೇತನ ಪಾವತಿಸಬೇಕೆಂದು ಆಗ್ರಹ

ಕಲಬುರಗಿ, ಆ.6: ಕಳೆದ ಒಂಬತ್ತು ವರ್ಷಗಳಿಂದ ಕನಿಷ್ಠ ವೇತನ ಪರಿಷ್ಕರಣೆಗೆ ಕಾಯುತ್ತಿರುವ ಲಕ್ಷಾಂತರ ಹೊರಗುತ್ತಿಗೆ ಕಾರ್ಮಿಕರಿಗೆ ನ್ಯಾಯ ಒದಗಿಸುವಂತೆ ಆಗ್ರಹಿಸಿ ಆಲ್ ಇಂಡಿಯಾ ಡೆಮಾಕ್ರಟಿಕ್ ಯೂತ್ ಆರ್ಗನೈಸೇಶನ್ (ಎಐಡಿವೈಒ) ಕಾರ್ಯಕರ್ತರು ಗುರುವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಪ್ರತಿಭಟನೆ ಬಳಿಕ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿ ಅವರಿಗೆ ಮನವಿ ಸಲ್ಲಿಸಿದ ಪ್ರತಿಭಟನಾಕಾರರು, ಕನಿಷ್ಠ ವೇತನ ಪರಿಷ್ಕರಣೆಗೆ ಸಂಬಂಧಿಸಿದ ಅಂತಿಮ ಅಧಿಸೂಚನೆಯನ್ನು ಯಾವುದೇ ವಿಳಂಬವಿಲ್ಲದೆ ಜಾರಿಗೆ ತರಬೇಕು ಎಂದು ಒತ್ತಾಯಿಸಿದರು. ಈ ವಿಷಯದಲ್ಲಿ ಹೈಕೋರ್ಟ್ ತಡೆಯಾಜ್ಞೆ ನೀಡಿಲ್ಲ. ಕೆಲ ಮಾಲೀಕರ ಸಂಘಗಳು ನ್ಯಾಯಾಲಯದ ಮೆಟ್ಟಿಲೇರಿದ್ದರೂ ತಡೆಯಾಜ್ಞೆ ಸಿಗದ ಹಿನ್ನೆಲೆಯಲ್ಲಿ ಆಡಳಿತಾತ್ಮಕವಾಗಿ ಅಧಿಸೂಚನೆ ತಡೆಹಿಡಿಯುವುದು ನ್ಯಾಯಸಮ್ಮತವಲ್ಲ ಎಂದು ಅವರು ಹೇಳಿದರು.

2016ರ ನಂತರ 2021ರಲ್ಲಿ ಜಾರಿಯಾಗಬೇಕಿದ್ದ ವೇತನ ಪರಿಷ್ಕರಣೆ ಸರ್ಕಾರದ ವಿಳಂಬದಿಂದ 2026ಕ್ಕೆ ಮುಂದೂಡಲ್ಪಟ್ಟಿದೆ. ಇದೀಗ ಮತ್ತಷ್ಟು ವಿಳಂಬ ಮಾಡುವುದು ಕಾರ್ಮಿಕರಿಗೆ ಅನ್ಯಾಯವಾಗಲಿದೆ ಎಂದು ಪ್ರತಿಭಟನಾಕಾರರು ಆಕ್ಷೇಪ ವ್ಯಕ್ತಪಡಿಸಿದರು. ಕನಿಷ್ಠ ವೇತನ ಕಾಯ್ದೆ-1948ರ ಪ್ರಕಾರ ಅಂತಿಮ ಅಧಿಸೂಚನೆ ಪ್ರಕಟವಾದ ಬಳಿಕ ಅದನ್ನು ಅಮಾನತಿನಲ್ಲಿ ಇಡುವ ಅಧಿಕಾರ ಯಾವುದೇ ಇಲಾಖೆಗೆ ಇಲ್ಲ ಎಂದು ಅವರು ತಿಳಿಸಿದರು.

ಈಗಾಗಲೇ ಹಲವು ಸರ್ಕಾರಿ ಇಲಾಖೆಗಳು ಪರಿಷ್ಕೃತ ವೇತನ ಜಾರಿಗೊಳಿಸಿದ್ದು, ಕಾರ್ಮಿಕ ಇಲಾಖೆ ಸಹ ಜಾರಿಗೆ ಸೂಚನೆ ನೀಡಿದೆ. ಇಂತಹ ಸಂದರ್ಭದಲ್ಲಿ ಮತ್ತೆ ವಿಳಂಬ ಮಾಡಿದರೆ ಆಡಳಿತಾತ್ಮಕ ಗೊಂದಲ ಉಂಟಾಗುವುದರ ಜೊತೆಗೆ ಕಾರ್ಮಿಕರ ಜೀವನದ ಮೇಲೆ ಗಂಭೀರ ಪರಿಣಾಮ ಬೀಳಲಿದೆ ಎಂದು ಎಚ್ಚರಿಸಿದರು.

ಉದ್ಯಮಗಳು ರಾಜ್ಯ ತೊರೆಯುತ್ತವೆ ಎಂಬ ವಾದಕ್ಕೆ ಯಾವುದೇ ಆಧಾರವಿಲ್ಲ. ಕಟ್ಟಡ ನಿರ್ಮಾಣ, ಭದ್ರತಾ ಸೇವೆ, ಹೌಸ್‌ಕೀಪಿಂಗ್, ಸ್ವಚ್ಛತಾ ಸೇವೆಗಳು, ಪೌರಸೇವೆಗಳು, ಸರ್ಕಾರಿ ಹೊರಗುತ್ತಿಗೆ ಸೇವೆಗಳು ಸೇರಿದಂತೆ ಸ್ಥಳಾಧಾರಿತ ಸೇವೆಗಳು ಬೇರೆ ರಾಜ್ಯಗಳಿಗೆ ಸ್ಥಳಾಂತರಗೊಳ್ಳಲು ಸಾಧ್ಯವಿಲ್ಲ ಎಂದು ಪ್ರತಿಭಟನಾಕಾರರು ಹೇಳಿದರು.

ಆರ್ಥಿಕ ಸಂಕಷ್ಟದ ನೆಪ ಹೇಳಿ ಕಾರ್ಮಿಕರಿಗೆ ಕನಿಷ್ಠ ವೇತನ ನೀಡುವುದನ್ನು ನಿರಾಕರಿಸಲಾಗುವುದಿಲ್ಲ. ಸುಪ್ರೀಂ ಕೋರ್ಟ್ ತೀರ್ಪುಗಳ ಪ್ರಕಾರ ಸರ್ಕಾರವು ಕಾರ್ಮಿಕರಿಗೆ ನ್ಯಾಯಯುತ ವೇತನ ನೀಡುವುದು ಕಡ್ಡಾಯ ಕರ್ತವ್ಯವಾಗಿದೆ. ಸಂವಿಧಾನದ ವಿಧಿ 21, 23 ಹಾಗೂ 131ರ ಆಶಯಗಳಿಗೂ ಇದು ಸಂಬಂಧಿಸಿದೆ ಎಂದು ಅವರು ವಿವರಿಸಿದರು.

ಮೇ 22ರಂದು ಹೊರಡಿಸಿರುವ ಕನಿಷ್ಠ ವೇತನ ಅಧಿಸೂಚನೆಯನ್ನು ತಕ್ಷಣ ಜಾರಿಗೊಳಿಸಿ, ಎಲ್ಲಾ ಸರ್ಕಾರಿ, ಖಾಸಗಿ ಹಾಗೂ ಹೊರಗುತ್ತಿಗೆ ಸಂಸ್ಥೆಗಳಲ್ಲಿ ಪರಿಷ್ಕೃತ ವೇತನ ಅನುಷ್ಠಾನಗೊಳಿಸಬೇಕು. ಕಾರ್ಮಿಕರಿಗೆ ಬಾಕಿ ಇರುವ ವೇತನವನ್ನು ಪಾವತಿಸುವುದರ ಜೊತೆಗೆ ಅಗತ್ಯ ಅನುದಾನವನ್ನು ಹಣಕಾಸು ಇಲಾಖೆ ತಕ್ಷಣ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.

ವೇತನ ಪಾವತಿಸದ ಸಂಸ್ಥೆಗಳ ವಿರುದ್ಧ ಕಾರ್ಮಿಕ ಇಲಾಖೆ ಕಠಿಣ ಕ್ರಮ ಕೈಗೊಂಡು ವಿಶೇಷ ತಪಾಸಣೆ ಮತ್ತು ಜಾಗೃತಿ ಅಭಿಯಾನಗಳನ್ನು ನಡೆಸಬೇಕು. ಪರಿಷ್ಕೃತ ವೇತನ ಜಾರಿಗೆ ಅಡ್ಡಿಯಾಗುವ ಯಾವುದೇ ಕಾನೂನು ಕ್ರಮವನ್ನು ಸರ್ಕಾರ ದೃಢವಾಗಿ ಎದುರಿಸಿ ಕಾರ್ಮಿಕರ ಹಿತಾಸಕ್ತಿಯನ್ನು ಕಾಪಾಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಎಐಡಿವೈಒ ಜಿಲ್ಲಾ ಉಪಾಧ್ಯಕ್ಷ ರಾಘವೇಂದ್ರ ಎಂ.ಜಿ., ಎಸ್.ಎಂ. ಶರ್ಮಾ ಸೇರಿದಂತೆ ಹಲವು ಮುಖಂಡರು ಮತ್ತು ಕಾರ್ಯಕರ್ತರು ಭಾಗವಹಿಸಿದ್ದರು.

Related Articles

Leave a Reply

Your email address will not be published. Required fields are marked *

Back to top button