ಧಾರ್ಮಿಕಸಾಂಸ್ಕೃತಿಕ

ಗುರು ಬೋಧಾಮೃತದಿಂದ ಸುಖ-ಶಾಂತಿ ಪ್ರಾಪ್ತಿ: ಉಜ್ಜಯಿನಿ ಜಗದ್ಗುರುಗಳ ಸಂದೇಶ

ಗುರು ಜ್ಞಾನದಿಂದಲೇ ಜೀವನ ಸಾರ್ಥಕವಾಗುತ್ತದೆ; ಸಿದ್ಧಾಂತ ಶಿಖಾಮಣಿ ಆಧ್ಯಾತ್ಮಿಕ ಕಾರ್ಯಕ್ರಮದಲ್ಲಿ ಆಶೀರ್ವಚನ

ಕಲಬುರಗಿ, ಆ.5: ಯೋಗಿಗೆ ಯೋಗದ ಚಿಂತೆ, ಯೋಧನಿಗೆ ಯುದ್ಧದ ಚಿಂತೆ, ತಂದೆಗೆ ಮಗನ ಚಿಂತೆ ಇದ್ದಂತೆ, ಗುರುಗೆ ಶಿಷ್ಯನ ಉದ್ಧಾರದ ಚಿಂತೆಯೇ ಮುಖ್ಯವಾಗಿರುತ್ತದೆ. ಗುರು ಬೋಧಾಮೃತದಿಂದಲೇ ಜೀವನದಲ್ಲಿ ಸುಖ, ಶಾಂತಿ ಹಾಗೂ ಆತ್ಮಸಂತೃಪ್ತಿ ದೊರೆಯುತ್ತದೆ ಎಂದು ಉಜ್ಜಯಿನಿ ಸದ್ದರ್ಮ ಸಿಂಹಾಸನಾಧೀಶ್ವರ ಜಗದ್ಗುರು ಸಿದ್ಧಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರು ಹೇಳಿದರು.

ನಗರದ ಸೊಗಸನಕೇರಿ ಶ್ರೀ ಗುರುಶಾಂತಲಿಂಗೇಶ್ವರ ಕಲ್ಯಾಣಮಂಟಪದಲ್ಲಿ ಆಯೋಜಿಸಿದ್ದ ಸಿದ್ಧಾಂತ ಶಿಖಾಮಣಿ ವಚನ ಸಾಹಿತ್ಯ ಸಮನ್ವಯಾತ್ಮಕ ಆಧ್ಯಾತ್ಮಿಕ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಅವರು, ವೀರಶೈವ ಧರ್ಮವು ಅತ್ಯಂತ ಪ್ರಾಚೀನ ಮತ್ತು ಶ್ರೇಷ್ಠ ಪರಂಪರೆಯನ್ನು ಹೊಂದಿದೆ. ಶಿವಜ್ಞಾನ ಹಾಗೂ ಗುರುಕೃಪೆ ಇಲ್ಲದೆ ಜೀವನ ಸಾರ್ಥಕವಾಗುವುದಿಲ್ಲ ಎಂದು ಶ್ರೀ ಜಗದ್ಗುರು ರೇಣುಕಾಚಾರ್ಯರು ಸಿದ್ಧಾಂತ ಶಿಖಾಮಣಿಯಲ್ಲಿ ಬೋಧಿಸಿದ್ದಾರೆ ಎಂದು ತಿಳಿಸಿದರು.

ಕಾರ್ಯಕ್ರಮದ ನೇತೃತ್ವ ವಹಿಸಿದ್ದ ಕಡಗಂಚಿಯ ವೀರಭದ್ರ ಶಿವಾಚಾರ್ಯ ಸ್ವಾಮೀಜಿಗಳ ಸಾನ್ನಿಧ್ಯದಲ್ಲಿ ಮಾತನಾಡಿದ ಗ್ರಾಮೀಣ ಕ್ಷೇತ್ರದ ಶಾಸಕ ಬಸವರಾಜ ಮತ್ತಿಮೂಡ ಅವರ ಧರ್ಮಪತ್ನಿ ಜಯಶ್ರೀ ಮತ್ತಿಮೂಡ, ಹೊರಗಿನ ಕತ್ತಲೆಯನ್ನು ದೂರ ಮಾಡಲು ದೀಪ ಅಗತ್ಯವಿರುವಂತೆ, ಅಂತರಂಗದ ಅಜ್ಞಾನವನ್ನು ಹೋಗಲಾಡಿಸಲು ಗುರುಜ್ಞಾನ ಅತ್ಯಗತ್ಯವಾಗಿದೆ. ಮಹಾಗುರುಗಳ ಆಶೀರ್ವಾದದಿಂದ ಜೀವನ ಪಾವನವಾಗುತ್ತದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಚಿಂಚನಸೂರಿನ ಸಿದ್ಧಮಲ್ಲ ಶಿವಾಚಾರ್ಯರು, ಪಾಲಾದ ಡಾ. ಗುರುಮೂರ್ತಿ ಶಿವಾಚಾರ್ಯರು, ಸುಲೇಪೇಟ ಹಾಗೂ ಕಡಗಂಚಿಯ ಪಂಪಾಪತಿ ದೇವರುಗಳು ಉಪಸ್ಥಿತರಿದ್ದರು.

ರೈತ ಸಂಘದ ರಾಜ್ಯಾಧ್ಯಕ್ಷ ದಯಾನಂದ ಪಾಟೀಲ್, ಶಿವಾನಂದ ಮಠಪತಿ, ನಂದಿನಿ ಎಸ್. ಸನಬಾಳ, ಶಾರದಾಬಾಯಿ, ಶಾಂತಕುಮಾರ ಮಡಿವಾಳ ನಾವದಗಿ, ರಾಮಲಿಂಗ ಹೊನ್ನಳ್ಳಿ, ಸುಂಟನೂರಿನ ನಾಗಲಿಂಗಯ್ಯ ಶಾಸ್ತ್ರಿಗಳು ಸೇರಿದಂತೆ ಅನೇಕ ಭಕ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿದರು.

ಪೀಠದ ಗುರುಕುಲ ಸಾಧಕರಿಂದ ವೇದಘೋಷ ನಡೆಯಿತು. ಚೇತನ ಬೀದಿಮನಿ ಹಾಗೂ ಮಹಾಂತಯ್ಯಸ್ವಾಮಿ ನಿಂಗದಳ್ಳಿ ಅವರಿಂದ ಸಂಗೀತ ಕಾರ್ಯಕ್ರಮ ನಡೆಯಿತು. ಯುವ ಸಾಹಿತಿ ಶಿವಯ್ಯ ಮಠಪತಿ ಕಾರ್ಯಕ್ರಮ ನಿರೂಪಿಸಿದರು.

Related Articles

Leave a Reply

Your email address will not be published. Required fields are marked *

Back to top button