ಜಿಲ್ಲಾಸುದ್ದಿ

ಗ್ರಂಥಪಾಲಕರ ನೇಮಕಕ್ಕೆ ಆಗ್ರಹ: ಅ.5ರಂದು ಬೆಂಗಳೂರಿನಲ್ಲಿ ರಾಜ್ಯಮಟ್ಟದ ಬೃಹತ್ ಪ್ರತಿಭಟನೆ

ಕಲಬುರಗಿ, ಸೆ.25: ಸರ್ಕಾರಿ ಶಾಲೆ, ಕಾಲೇಜು ಹಾಗೂ ವಿಶ್ವವಿದ್ಯಾಲಯಗಳಲ್ಲಿ ಖಾಲಿ ಇರುವ ಗ್ರಂಥಪಾಲಕರ ಹುದ್ದೆಗಳನ್ನು ತ್ವರಿತವಾಗಿ ಭರ್ತಿ ಮಾಡಬೇಕು ಹಾಗೂ ಎಲ್ಲ ಶಿಕ್ಷಣ ಸಂಸ್ಥೆಗಳಿಗೆ ಅಗತ್ಯ ಸಂಖ್ಯೆಯಲ್ಲಿ ಗ್ರಂಥಪಾಲಕರನ್ನು ನೇಮಕ ಮಾಡಬೇಕು ಎಂದು ಆಗ್ರಹಿಸಿ ಅಕ್ಟೋಬರ್ 5ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ರಾಜ್ಯಮಟ್ಟದ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ನವ ಕಲ್ಯಾಣ ಕರ್ನಾಟಕ ಗ್ರಂಥಪಾಲಕರ ಸಂಘದ ಗೌರವಾಧ್ಯಕ್ಷ ಡಾ. ಸುರೇಶ ಜಂಗೆ ತಿಳಿಸಿದರು.

ನಗರದ ಪತ್ರಿಕಾ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗ್ರಂಥಾಲಯಗಳು ವಿದ್ಯಾರ್ಥಿಗಳ ಜ್ಞಾನಾಭಿವೃದ್ಧಿ, ಓದುವ ಹವ್ಯಾಸ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿಯಲ್ಲಿ ಮಹತ್ವದ ಪಾತ್ರ ವಹಿಸುತ್ತವೆ. ಸರ್ಕಾರಿ ಶಾಲೆಗಳು ಹಾಗೂ ವಸತಿ ಶಾಲೆಗಳಲ್ಲಿ ಸಮರ್ಪಕ ಗ್ರಂಥಾಲಯ ವ್ಯವಸ್ಥೆಯೊಂದಿಗೆ ಅರ್ಹ ಗ್ರಂಥಪಾಲಕರ ನೇಮಕ ಅಗತ್ಯವಾಗಿದೆ ಎಂದರು.

ರಾಜ್ಯದ ವಿವಿಧ ಇಲಾಖೆಗಳಲ್ಲಿರುವ ಖಾಲಿ ಗ್ರಂಥಪಾಲಕರ ಹುದ್ದೆಗಳನ್ನು ಶೀಘ್ರ ಭರ್ತಿ ಮಾಡಬೇಕು. ಪ್ರತಿಯೊಂದು ಶಾಲೆ, ಕಾಲೇಜು ಹಾಗೂ ವಿಶ್ವವಿದ್ಯಾಲಯಗಳ ಗ್ರಂಥಾಲಯಗಳಿಗೆ ಗ್ರಂಥಪಾಲಕರನ್ನು ನೇಮಕ ಮಾಡಬೇಕು ಎಂದು ಒತ್ತಾಯಿಸಿದರು.

ಜ್ಞಾನಾಧಾರಿತ ಸಮಾಜ ನಿರ್ಮಾಣಕ್ಕೆ ಬಲಿಷ್ಠ ಗ್ರಂಥಾಲಯಗಳು ಹಾಗೂ ಅರ್ಹ ಗ್ರಂಥಪಾಲಕರ ಸೇವೆ ಅಗತ್ಯ. ಆದ್ದರಿಂದ ಪ್ರತಿಯೊಂದು ಶಾಲಾ-ಕಾಲೇಜಿನಲ್ಲಿ ಗ್ರಂಥಾಲಯ ವಿಜ್ಞಾನಕ್ಕೆ ಸಂಬಂಧಿಸಿದ ಕೋರ್ಸ್‌ಗಳನ್ನು ಆರಂಭಿಸಿ, ಗ್ರಂಥಾಲಯ ಶಿಕ್ಷಣಕ್ಕೆ ಹೆಚ್ಚಿನ ಉತ್ತೇಜನ ನೀಡಬೇಕು ಎಂದು ಆಗ್ರಹಿಸಿದರು.

ಗ್ರಂಥಪಾಲಕರ ಹುದ್ದೆಯ ಉದ್ಯೋಗಾಕಾಂಕ್ಷಿಗಳು, ಕರ್ತವ್ಯನಿರತ ಗ್ರಂಥಪಾಲಕರು, ಗ್ರಂಥಾಲಯ ಕ್ಷೇತ್ರದ ವೃತ್ತಿಪರರು, ಶಿಕ್ಷಣ ಹಾಗೂ ಗ್ರಂಥಾಲಯ ಕ್ಷೇತ್ರದ ಹಿತೈಷಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪ್ರತಿಭಟನೆಯಲ್ಲಿ ಭಾಗವಹಿಸಿ ಹೋರಾಟವನ್ನು ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.

ಹೋರಾಟಕ್ಕೆ ಪುಸ್ತಕ ಪ್ರೇಮಿಗಳು, ಹಿರಿಯ ಸಾಹಿತಿಗಳು, ಕನ್ನಡ ಸಾಹಿತ್ಯ ಪರಿಷತ್ತು, ಪ್ರಕಾಶಕರು, ಕನ್ನಡ ಸಂಘಟನೆಗಳು, ಸಾಮಾಜಿಕ ಹೋರಾಟಗಾರರು ಹಾಗೂ ಗ್ರಂಥಾಲಯ ಕ್ಷೇತ್ರದ ಹಿತೈಷಿಗಳು ಬೆಂಬಲ ನೀಡುತ್ತಿರುವುದು ಗಮನಾರ್ಹವಾಗಿದೆ. ಕಲಬುರಗಿಯಿಂದ ಬೆಂಗಳೂರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರತಿಭಟನೆಯಲ್ಲಿ ಭಾಗವಹಿಸಲು ಅನುಕೂಲವಾಗುವಂತೆ ಬಸ್ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಹಿರಿಯ ಸಾಹಿತಿ ಡಾ. ಸ್ವಾಮಿರಾವ್ ಕುಲಕರ್ಣಿ, ಸಂಘದ ಅಧ್ಯಕ್ಷ ಡಾ. ಪರಮಾನಂದ ಜೆ. ಹಂಗರಗಿ, ಪ್ರಧಾನ ಕಾರ್ಯದರ್ಶಿ ಬಸವರಾಜ ಮಾಲಿಪಾಟೀಲ, ಖಜಾಂಚಿ ಡಾ. ಸಾವಿತ್ರಿ ಅಮರನಾಥ, ಡಾ. ನಿಂಗಯ್ಯ ಪಾಟೀಲ, ಡಾ. ಸಾವಿತ್ರಿ ಕೃಷ್ಣ, ಡಾ. ದಾನಪ್ಪ ವಗ್ಗಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button