ರಾಜಕೀಯ

ಸಚಿವ ಸಂಪುಟದಲ್ಲಿ ಮಹಿಳೆಯರಿಗೆ ಸ್ಥಾನವಿಲ್ಲ: ಕಾಂಗ್ರೆಸ್ ಸರ್ಕಾರದ ವಿರುದ್ಧ ಶೋಭಾ ಬಾಣಿ ಕಿಡಿ

ಮಹಿಳಾ ಸಬಲೀಕರಣದ ಮಾತು ಹೇಳುವ ಸರ್ಕಾರ ನಡೆ ಮೂಲಕ ವಿರುದ್ಧ ಸಂದೇಶ ನೀಡಿದೆ ಎಂದು ಆರೋಪ

ಕಲಬುರಗಿ, ಆ.5: ರಾಜ್ಯ ಸಚಿವ ಸಂಪುಟ ವಿಸ್ತರಣೆಯಲ್ಲಿ ಒಬ್ಬರೂ ಮಹಿಳಾ ಶಾಸಕರಿಗೆ ಸಚಿವ ಸ್ಥಾನ ನೀಡದಿರುವುದು ಕಾಂಗ್ರೆಸ್ ಸರ್ಕಾರದ ಮಹಿಳಾ ವಿರೋಧಿ ಧೋರಣೆಯನ್ನು ಬಯಲಿಗೆಳೆದಿದೆ ಎಂದು ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹಾಗೂ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಶೋಭಾ ಶಂಕರ ಬಾಣಿ ಆರೋಪಿಸಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು, ಚುನಾವಣೆ ವೇಳೆ ಮಹಿಳಾ ಸಬಲೀಕರಣ, ಸಮಾನ ಅವಕಾಶ ಹಾಗೂ ರಾಜಕೀಯ ಪ್ರಾತಿನಿಧ್ಯದ ಕುರಿತು ದೊಡ್ಡ ಭರವಸೆಗಳನ್ನು ನೀಡಿದ್ದ ಸರ್ಕಾರ, ಅಧಿಕಾರ ಹಂಚಿಕೆಯ ಸಂದರ್ಭದಲ್ಲಿ ಮಹಿಳೆಯರನ್ನು ಸಂಪೂರ್ಣವಾಗಿ ಕಡೆಗಣಿಸಿದೆ ಎಂದು ಟೀಕಿಸಿದ್ದಾರೆ.

ಗೃಹಲಕ್ಷ್ಮಿ, ಗೃಹಜ್ಯೋತಿ ಹಾಗೂ ನಾರಿಶಕ್ತಿ ಮೊದಲಾದ ಯೋಜನೆಗಳ ಮೂಲಕ ಮಹಿಳೆಯರ ಪರ ಎಂದು ಹೇಳಿಕೊಳ್ಳುವ ಸರ್ಕಾರ, ಸಚಿವ ಸಂಪುಟದಲ್ಲಿ ಮಹಿಳೆಯರಿಗೆ ಅವಕಾಶ ನೀಡದಿರುವ ಮೂಲಕ ತನ್ನ ನೈಜ ಮನೋಭಾವವನ್ನು ಅನಾವರಣಗೊಳಿಸಿದೆ ಎಂದು ಅವರು ದೂರಿದರು.

ರಾಜ್ಯದ ಜನತೆ ಮಹಿಳಾ ಶಾಸಕರನ್ನು ಆಯ್ಕೆ ಮಾಡಿ ವಿಧಾನಸಭೆಗೆ ಕಳುಹಿಸಿದ್ದರೂ, ಅವರಿಗೆ ಸಚಿವ ಸಂಪುಟದಲ್ಲಿ ಅವಕಾಶ ನಿರಾಕರಿಸಿರುವುದು ಮಹಿಳೆಯರ ರಾಜಕೀಯ ನಾಯಕತ್ವದ ಮೇಲಿನ ಅವಿಶ್ವಾಸವನ್ನು ಪ್ರತಿಬಿಂಬಿಸುತ್ತದೆ ಎಂದು ಅವರು ಹೇಳಿದರು.

ಹಿಂದೂಳಿದ ವರ್ಗದ ಶಾಸಕ ಮಂಕಾಳ ವೈದ್ಯ ಹಾಗೂ ಮಹಿಳಾ ನಾಯಕಿ ಗಾಯತ್ರಿ ಶಾಂತೇಗೌಡ ಅವರಿಗೆ ಸಚಿವ ಸ್ಥಾನ ನೀಡದಿರುವುದು ಪ್ರಾತಿನಿಧ್ಯದ ಪ್ರಶ್ನೆಯನ್ನು ಮತ್ತಷ್ಟು ಗಂಭೀರಗೊಳಿಸಿದೆ ಎಂದು ಅವರು ಅಭಿಪ್ರಾಯಪಟ್ಟರು.

ಸರ್ಕಾರ ಮಹಿಳಾ ಸಬಲೀಕರಣದ ಬಗ್ಗೆ ಮಾತನಾಡುವ ನೈತಿಕ ಹಕ್ಕನ್ನೇ ಕಳೆದುಕೊಂಡಿದ್ದು, ಮಹಿಳೆಯರಿಗೆ ಸಮಾನ ಅವಕಾಶ ನೀಡದೆ ಕೇವಲ ಘೋಷಣೆಗಳ ಮೂಲಕ ರಾಜಕೀಯ ನಡೆಸುತ್ತಿದೆ ಎಂಬ ಭಾವನೆ ರಾಜ್ಯದ ಮಹಿಳೆಯರಲ್ಲಿ ಮೂಡಿದೆ ಎಂದು ಅವರು ಟೀಕಿಸಿದರು.

ಇನ್ನಾದರೂ ಮುಖ್ಯಮಂತ್ರಿ ಸಚಿವ ಸಂಪುಟವನ್ನು ಮರುಪರಿಶೀಲಿಸಿ, ಅರ್ಹ ಮಹಿಳಾ ಶಾಸಕರಿಗೆ ಸೂಕ್ತ ಪ್ರಾತಿನಿಧ್ಯ ನೀಡಬೇಕು. ಇಲ್ಲವಾದರೆ ಮಹಿಳೆಯರ ಪರ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲಾಗುವುದು ಎಂದು ಶೋಭಾ ಬಾಣಿ ಎಚ್ಚರಿಕೆ ನೀಡಿದರು.

Related Articles

Leave a Reply

Your email address will not be published. Required fields are marked *

Back to top button