ಸಚಿವ ಸ್ಥಾನ ಕೈತಪ್ಪಿದ ಬೇಸರ: ಯೋಜನಾ ಆಯೋಗದ ಉಪಾಧ್ಯಕ್ಷ ಸ್ಥಾನಕ್ಕೆ ಬಿ.ಆರ್. ಪಾಟೀಲ್ ರಾಜೀನಾಮೆ?
ಸಚಿವ ಸಂಪುಟದಲ್ಲಿ ಅವಕಾಶ ಸಿಗದ ಹಿನ್ನೆಲೆಯಲ್ಲಿ ಭಾವನಾತ್ಮಕ ಪತ್ರ ವೈರಲ್; ರಾಜೀನಾಮೆ ಕುರಿತು ರಾಜಕೀಯ ವಲಯದಲ್ಲಿ ಚರ್ಚೆ

ಕಲಬುರಗಿ, ಆ.5: ರಾಜ್ಯ ಸಚಿವ ಸಂಪುಟ ವಿಸ್ತರಣೆಯಲ್ಲಿ ಸಚಿವ ಸ್ಥಾನ ದೊರೆಯದ ಹಿನ್ನೆಲೆಯಲ್ಲಿ ರಾಜ್ಯ ಯೋಜನಾ ಆಯೋಗದ ಉಪಾಧ್ಯಕ್ಷ ಹಾಗೂ ಆಳಂದ ಶಾಸಕ ಬಿ.ಆರ್. ಪಾಟೀಲ್ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಪತ್ರವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಯೋಜನಾ ಆಯೋಗದ ಉಪಾಧ್ಯಕ್ಷ ಸ್ಥಾನಕ್ಕೆ ಅವರು ರಾಜೀನಾಮೆ ನೀಡುವ ಸಾಧ್ಯತೆ ಕುರಿತು ರಾಜಕೀಯ ವಲಯದಲ್ಲಿ ಚರ್ಚೆ ಆರಂಭವಾಗಿದೆ.
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ಸಚಿವ ಸಂಪುಟದ ವಿಸ್ತರಣೆಯಲ್ಲಿ ತಮ್ಮನ್ನು ಕಡೆಗಣಿಸಿರುವುದಕ್ಕೆ ಬೇಸರ ವ್ಯಕ್ತಪಡಿಸಿರುವ ಬಿ.ಆರ್. ಪಾಟೀಲ್, ಕಾಂಗ್ರೆಸ್ ಪಕ್ಷಕ್ಕಾಗಿ ಹಲವು ದಶಕಗಳಿಂದ ನಿಷ್ಠೆಯಿಂದ ದುಡಿದಿದ್ದರೂ ಸಚಿವ ಸ್ಥಾನ ದೊರೆಯದಿರುವುದು ನೋವು ತಂದಿದೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಕಾಂಗ್ರೆಸ್ ಪಕ್ಷದ ಪರವಾಗಿ ಕಾರ್ಯನಿರ್ವಹಿಸಿ, ಸಾಮಾಜಿಕ ನ್ಯಾಯ, ಪ್ರಜಾಪ್ರಭುತ್ವ ಮತ್ತು ಸಮಾನತೆಯ ಮೌಲ್ಯಗಳಿಗಾಗಿ ಹೋರಾಟ ನಡೆಸಿದ್ದೇನೆ. ಅಂತಹ ಸೇವೆಗೆ ದೊರೆತ ಪ್ರತಿಫಲವೇ ಸಚಿವ ಸಂಪುಟದಿಂದ ಹೊರಗಿಡುವುದೇ ಎಂಬ ಪ್ರಶ್ನೆಯನ್ನು ಅವರು ಎತ್ತಿದ್ದಾರೆ.
ತಮ್ಮ ರಾಜಕೀಯ ಜೀವನದ ಐದು ದಶಕಗಳ ಪಯಣವನ್ನು ನೆನಪಿಸಿಕೊಂಡಿರುವ ಅವರು, ಮಹಾತ್ಮ ಗಾಂಧಿ, ಡಾ. ಬಿ.ಆರ್. ಅಂಬೇಡ್ಕರ್, ಜಯಪ್ರಕಾಶ್ ನಾರಾಯಣ್ ಹಾಗೂ ಸಮಾಜವಾದಿ ಚಿಂತನೆಗಳಿಂದ ಪ್ರೇರಿತರಾಗಿ ಸಾರ್ವಜನಿಕ ಬದುಕಿನಲ್ಲಿ ಸೇವೆ ಸಲ್ಲಿಸಿದ್ದಾಗಿ ಹೇಳಿದ್ದಾರೆ. ನಾಲ್ಕು ಬಾರಿ ಶಾಸಕರಾಗಿ, ವಿಧಾನ ಪರಿಷತ್ ಸದಸ್ಯರಾಗಿ ಹಾಗೂ ಉಪಸಭಾಪತಿಯಾಗಿ ಕಾರ್ಯನಿರ್ವಹಿಸಿರುವುದನ್ನು ಉಲ್ಲೇಖಿಸಿದ್ದಾರೆ.
ರಾಜ್ಯ ಯೋಜನಾ ಆಯೋಗದ ಉಪಾಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಗ್ರಾಮ, ತಾಲ್ಲೂಕು ಹಾಗೂ ಜಿಲ್ಲಾ ಮಟ್ಟದ ಅಭಿವೃದ್ಧಿ ಯೋಜನೆಗಳಿಗೆ ಹೊಸ ಕಾರ್ಯಪದ್ಧತಿಯನ್ನು ಜಾರಿಗೆ ತಂದಿದ್ದು, ಹಲವು ವರ್ಷಗಳಿಂದ ನಿಂತಿದ್ದ ಯೋಜನಾ ಪ್ರಕ್ರಿಯೆಗೆ ಚೈತನ್ಯ ತುಂಬಲು ಪ್ರಯತ್ನಿಸಿದ್ದೇನೆ ಎಂದು ಅವರು ತಿಳಿಸಿದ್ದಾರೆ.
ರೈತರ ಹೋರಾಟ, ಸಿಎಎ–ಎನ್ಆರ್ಸಿ ಹಾಗೂ ಎಸ್ಎಆರ್ ವಿರುದ್ಧದ ಚಳವಳಿಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದನ್ನು ನೆನಪಿಸಿಕೊಂಡಿರುವ ಬಿ.ಆರ್. ಪಾಟೀಲ್, ಪ್ರಜಾಪ್ರಭುತ್ವದ ಮೌಲ್ಯಗಳ ರಕ್ಷಣೆಗೆ ನಿರಂತರವಾಗಿ ಹೋರಾಟ ನಡೆಸಿದ್ದೇನೆ ಎಂದು ಹೇಳಿದ್ದಾರೆ.
ಆಳಂದ ಕ್ಷೇತ್ರದಲ್ಲಿ ನಡೆದ ಮತದಾನ ಅಕ್ರಮ ಪ್ರಕರಣವನ್ನು ಬಹಿರಂಗಪಡಿಸಿ, ಅದರ ಬಗ್ಗೆ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ಗಮನಕ್ಕೂ ತಂದಿದ್ದಾಗಿ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಪಕ್ಷದ ಸಂಘಟನೆ ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳ ಪರವಾಗಿ ತಾವು ಸಲ್ಲಿಸಿರುವ ಸೇವೆಯನ್ನು ಕಡೆಗಣಿಸಿರುವುದು ಸರಿಯೇ ಎಂಬ ಪ್ರಶ್ನೆಯನ್ನು ರಾಜ್ಯದ ಜನರ ಮುಂದಿಟ್ಟಿದ್ದಾರೆ.
ಆದರೆ, ಬಿ.ಆರ್. ಪಾಟೀಲ್ ಅವರ ರಾಜೀನಾಮೆ ಕುರಿತು ಅಧಿಕೃತ ಘೋಷಣೆ ಅಥವಾ ಸರ್ಕಾರದ ದೃಢೀಕರಣ ಇನ್ನೂ ಹೊರಬಿದ್ದಿಲ್ಲ. ವೈರಲ್ ಆಗಿರುವ ಪತ್ರದ ಬೆನ್ನಲ್ಲೇ ರಾಜಕೀಯ ವಲಯದಲ್ಲಿ ವಿವಿಧ ರೀತಿಯ ಚರ್ಚೆಗಳು ನಡೆಯುತ್ತಿವೆ.



