ಕ್ರೀಡೆ

ಮ್ಯಾಚ್ ಫಿಕ್ಸಿಂಗ್ ಆರೋಪ: ಭಾರತೀಯ ಮೂಲದ ಅಮೆರಿಕ ಕ್ರಿಕೆಟಿಗ ಅಖಿಲೇಶ್ ರೆಡ್ಡಿಗೆ 8 ವರ್ಷ ನಿಷೇಧ

ಅಬುಧಾಬಿ ಟಿ10 ಲೀಗ್‌ನಲ್ಲಿ ಅಕ್ರಮ ಚಟುವಟಿಕೆ ಆರೋಪ ಸಾಬೀತು; 2033ರವರೆಗೆ ಎಲ್ಲಾ ಮಾದರಿಯ ಕ್ರಿಕೆಟ್‌ನಿಂದ ಅಮಾನತು

ನವದೆಹಲಿ: ಭಾರತೀಯ ಮೂಲದ ಅಮೆರಿಕದ ಕ್ರಿಕೆಟಿಗ ಬೋಡುಗುಂ ಅಖಿಲೇಶ್ ರೆಡ್ಡಿ ಅವರಿಗೆ ಮ್ಯಾಚ್ ಫಿಕ್ಸಿಂಗ್‌ಗೆ ಸಂಬಂಧಿಸಿದ ಗಂಭೀರ ಆರೋಪಗಳು ಸಾಬೀತಾದ ಹಿನ್ನೆಲೆಯಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಎಲ್ಲಾ ಮಾದರಿಯ ಕ್ರಿಕೆಟ್‌ನಿಂದ 8 ವರ್ಷಗಳ ಕಾಲ ನಿಷೇಧ ವಿಧಿಸಿದೆ.

ಐಸಿಸಿ ಭ್ರಷ್ಟಾಚಾರ ನಿಗ್ರಹ ಘಟಕದ ತನಿಖೆಯ ಪ್ರಕಾರ, 2025ರ ಅಬುಧಾಬಿ ಟಿ10 ಲೀಗ್ ವೇಳೆ ಅಖಿಲೇಶ್ ರೆಡ್ಡಿ ಪಂದ್ಯ ಫಿಕ್ಸ್ ಮಾಡಲು ಯತ್ನಿಸಿದ್ದರು. ಅಲ್ಲದೆ, ಮತ್ತೊಬ್ಬ ಆಟಗಾರನನ್ನೂ ಈ ಅಕ್ರಮ ಚಟುವಟಿಕೆಯಲ್ಲಿ ಭಾಗಿಯಾಗುವಂತೆ ಪ್ರೇರೇಪಿಸಲು ಪ್ರಯತ್ನಿಸಿದ್ದರು ಎಂಬುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ತನಿಖೆ ನಡೆಯುವ ವೇಳೆ ಸಾಕ್ಷ್ಯಗಳನ್ನು ನಾಶಪಡಿಸುವ ಉದ್ದೇಶದಿಂದ ತಮ್ಮ ಮೊಬೈಲ್‌ನಲ್ಲಿದ್ದ ಪ್ರಮುಖ ಚಾಟ್ ಸಂದೇಶಗಳು ಹಾಗೂ ಕರೆಗಳ ದಾಖಲೆಗಳನ್ನು ಅಳಿಸಿರುವುದೂ ತನಿಖೆಯಲ್ಲಿ ದೃಢಪಟ್ಟಿದೆ. ಈ ಎಲ್ಲ ಆರೋಪಗಳಲ್ಲಿ ತಪ್ಪಿತಸ್ಥರೆಂದು ಕಂಡುಬಂದ ಹಿನ್ನೆಲೆಯಲ್ಲಿ ಐಸಿಸಿ ಎಂಟು ವರ್ಷಗಳ ನಿಷೇಧ ಶಿಕ್ಷೆ ವಿಧಿಸಿದೆ.

ಈ ನಿಷೇಧವನ್ನು 2025ರ ನವೆಂಬರ್ 21ರಂದು ಜಾರಿಗೊಂಡಿದ್ದ ತಾತ್ಕಾಲಿಕ ಅಮಾನತು ದಿನಾಂಕದಿಂದಲೇ ಪರಿಗಣಿಸಲಾಗಿದ್ದು, 2033ರ ನವೆಂಬರ್ 21ರವರೆಗೆ ಅವರು ಯಾವುದೇ ರೀತಿಯ ಕ್ರಿಕೆಟ್ ಚಟುವಟಿಕೆಯಲ್ಲಿ ಭಾಗವಹಿಸಲು ಅವಕಾಶ ಇರುವುದಿಲ್ಲ.

ಯಾರು ಈ ಅಖಿಲೇಶ್ ರೆಡ್ಡಿ?

26 ವರ್ಷದ ಬೋಡುಗುಂ ಅಖಿಲೇಶ್ ರೆಡ್ಡಿ ಅವರು ಮೂಲತಃ ಹೈದರಾಬಾದ್‌ನವರು. ಭಾರತದಲ್ಲಿ ದೇಶೀಯ ಕ್ರಿಕೆಟ್ ಆಡಿದ್ದ ಅವರು ವಿಜಯ್ ಹಜಾರೆ ಟ್ರೋಫಿ ತಂಡದಲ್ಲೂ ಸ್ಥಾನ ಪಡೆದಿದ್ದರು. ಜೊತೆಗೆ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ತಂಡ ಸನ್‌ರೈಸರ್ಸ್ ಹೈದರಾಬಾದ್ ಪರ ನೆಟ್ ಬೌಲರ್ ಆಗಿಯೂ ಸೇವೆ ಸಲ್ಲಿಸಿದ್ದರು.

ಉತ್ತಮ ಅವಕಾಶಗಳಿಗಾಗಿ ನಂತರ ಅಮೆರಿಕಕ್ಕೆ ತೆರಳಿದ ಅವರು, ಅಲ್ಲಿನ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆದರು. ಬಲಗೈ ಬ್ಯಾಟರ್ ಹಾಗೂ ಆಫ್-ಸ್ಪಿನ್ ಬೌಲರ್ ಆಗಿರುವ ಅಖಿಲೇಶ್ ರೆಡ್ಡಿ, ಅಮೆರಿಕ ಪರ ನಾಲ್ಕು ಟ್ವೆಂಟಿ-20 ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದು, ಒಂದು ವಿಕೆಟ್ ಪಡೆದಿದ್ದಾರೆ. ಉತ್ತರ ಅಮೆರಿಕಾ ಟಿ20 ಕಪ್ನಲ್ಲಿ ಕೇಮನ್ ದ್ವೀಪಗಳ ವಿರುದ್ಧ ಅವರು ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು.

ಐಸಿಸಿ ಕ್ರಮದ ಬಳಿಕ ಅಖಿಲೇಶ್ ರೆಡ್ಡಿಯ ಕ್ರಿಕೆಟ್ ಭವಿಷ್ಯಕ್ಕೆ ದೊಡ್ಡ ಹಿನ್ನಡೆಯಾಗಿದ್ದು, ಕ್ರೀಡಾ ವಲಯದಲ್ಲಿ ಈ ಬೆಳವಣಿಗೆ ಚರ್ಚೆಗೆ ಗ್ರಾಸವಾಗಿದೆ.

Related Articles

Leave a Reply

Your email address will not be published. Required fields are marked *

Back to top button