ಸೆಂಟ್ರಿಂಗ್ ಕಾರ್ಮಿಕ ಆತ್ಮಹತ್ಯೆ ಪ್ರಕರಣ: ಆರೋಪಿಗಳ ಬಂಧನಕ್ಕೆ ಆಗ್ರಹಿಸಿ ಪ್ರತಿಭಟನೆ
ಮೃತ ಕಾರ್ಮಿಕನ ಕುಟುಂಬಕ್ಕೆ ಪರಿಹಾರ ನೀಡುವಂತೆ ಒತ್ತಾಯ; ಏಳು ದಿನಗಳಲ್ಲಿ ಕ್ರಮ ಕೈಗೊಳ್ಳದಿದ್ದರೆ ಉಗ್ರ ಹೋರಾಟದ ಎಚ್ಚರಿಕೆ
ಕಲಬುರಗಿ, ಆ. 3: ಜಿಲ್ಲೆಯ ಕಾಳಗಿ ತಾಲ್ಲೂಕಿನ ರಟಕಲ್ ಗ್ರಾಮದ ಸೆಂಟ್ರಿಂಗ್ ಕಾರ್ಮಿಕ ಖದೀರ್ ಪಾಷಾ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ತಕ್ಷಣ ಬಂಧಿಸಬೇಕು ಹಾಗೂ ಮೃತರ ಕುಟುಂಬಕ್ಕೆ ಸರ್ಕಾರದಿಂದ ಸೂಕ್ತ ಪರಿಹಾರ ನೀಡಬೇಕು ಎಂದು ಒತ್ತಾಯಿಸಿ ಕಲ್ಯಾಣ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಸೋಮವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ವೇದಿಕೆಯ ರಾಜ್ಯಾಧ್ಯಕ್ಷ ಶಿವಲಿಂಗ ಹಳಿಮನಿ ಅವರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಕಾರ್ಯಕರ್ತರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ, ಪ್ರಕರಣದಲ್ಲಿ ಶೀಘ್ರ ನ್ಯಾಯ ದೊರಕಿಸುವಂತೆ ಆಗ್ರಹಿಸಿದರು.
ಪ್ರತಿಭಟನಾಕಾರರ ಆರೋಪದ ಪ್ರಕಾರ, ಖದೀರ್ ಪಾಷಾ ಅವರು ಚಿತ್ತಾಪುರ ತಾಲ್ಲೂಕಿನ ಶ್ರೀ ಸಿಮೆಂಟ್ ಕಂಪನಿಯ ಹಿಂಭಾಗದ ಸೇತುವೆ ಕಾಮಗಾರಿಯನ್ನು ಗುತ್ತಿಗೆದಾರರಾದ ವಿಜಯಕುಮಾರ ಚವ್ಹಾಣ ಹಾಗೂ ಅರವಿಂದ ಚವ್ಹಾಣ ಅವರೊಂದಿಗೆ ಒಪ್ಪಂದ ಮಾಡಿಕೊಂಡು ಪೂರ್ಣಗೊಳಿಸಿದ್ದರು. ಆದರೆ ಕಾಮಗಾರಿಗೆ ಸಂಬಂಧಿಸಿದ ಸುಮಾರು ₹15 ರಿಂದ ₹16 ಲಕ್ಷ ಬಾಕಿ ಹಣ ಕೇಳಿದಾಗ ಗುತ್ತಿಗೆದಾರರು ಜೀವ ಬೆದರಿಕೆ ಹಾಕಿದ್ದಲ್ಲದೆ, ರೌಡಿಗಳನ್ನು ಕಳುಹಿಸಿ ಕಿರುಕುಳ ನೀಡಿದ್ದರಿಂದ ಮಾನಸಿಕವಾಗಿ ನೊಂದ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದರು.
ಮೃತ ಖದೀರ್ ಪಾಷಾ ಅವರ ಪತ್ನಿ ಈಗಾಗಲೇ ರಟಕಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರೂ, ಇದುವರೆಗೆ ಪ್ರಮುಖ ಆರೋಪಿಗಳನ್ನು ಬಂಧಿಸಿಲ್ಲ ಎಂದು ಪ್ರತಿಭಟನಾಕಾರರು ಅಸಮಾಧಾನ ವ್ಯಕ್ತಪಡಿಸಿದರು.
ಈ ಘಟನೆ ಗೃಹ ಸಚಿವರ ಜಿಲ್ಲೆಯಲ್ಲೇ ನಡೆದಿರುವುದು ದುಃಖಕರ ಸಂಗತಿ. ಆದ್ದರಿಂದ ಪ್ರಕರಣದ ಆರೋಪಿಗಳನ್ನು ತಕ್ಷಣ ಬಂಧಿಸಿ, ಮೃತರ ಕುಟುಂಬಕ್ಕೆ ಸರ್ಕಾರದಿಂದ ಪರಿಹಾರ ಘೋಷಿಸಬೇಕು ಎಂದು ಒತ್ತಾಯಿಸಿದರು.
ಮುಂದಿನ ಏಳು ದಿನಗಳೊಳಗೆ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳದಿದ್ದರೆ ಜಿಲ್ಲಾಧಿಕಾರಿ ಕಚೇರಿ ಎದುರು ಉಗ್ರ ಹೋರಾಟ ಆರಂಭಿಸಲಾಗುವುದು ಎಂದು ವೇದಿಕೆ ಎಚ್ಚರಿಕೆ ನೀಡಿತು.
ಪ್ರತಿಭಟನೆಯಲ್ಲಿ ಸತೀಶ್, ವಿಶ್ವನಾಥ್, ಸಂದೀಪ್ ಭರಣಿ, ನಾಗರಾಜ ಪಾಟೀಲ್ ಸೇರಿದಂತೆ ಹಲವಾರು ಕಾರ್ಯಕರ್ತರು ಭಾಗವಹಿಸಿದ್ದರು.



