
ಕಲಬುರಗಿ, ಆ.1: ಬಂಜಾರಾ ಸಮಾಜದ ಮಹಾನ್ ನಾಯಕ ಬಾಬಾ ಲಖೀಶಾಹ್ ಬಂಜಾರಾ ಅವರ ಜನ್ಮದಿನೋತ್ಸವವನ್ನು ಆಗಸ್ಟ್ 2ರಂದು ಬೆಳಿಗ್ಗೆ 11 ಗಂಟೆಗೆ ನಗರದ ಬಂಜಾರಾ ಭವನದಲ್ಲಿ ಆಚರಿಸಲಾಗುವುದು ಎಂದು ಮಾಜಿ ಸಂಸದ ಹಾಗೂ ಬಿಜೆಪಿ ಮುಖಂಡ ಡಾ. ಉಮೇಶ್ ಜಾಧವ್ ತಿಳಿಸಿದ್ದಾರೆ.
ನಗರದ ಬಿಜೆಪಿ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಧರ್ಮರಕ್ಷಣೆ, ಮಾನವೀಯತೆ, ನಿಸ್ವಾರ್ಥ ಸೇವೆ, ತ್ಯಾಗ ಹಾಗೂ ರಾಷ್ಟ್ರಭಕ್ತಿಯ ಪ್ರತೀಕವಾಗಿರುವ ಬಾಬಾ ಲಖೀಶಾಹ್ ಬಂಜಾರಾ ಅವರ ಆದರ್ಶಗಳು ಇಂದಿಗೂ ಸಮಾಜಕ್ಕೆ ಪ್ರೇರಣೆಯಾಗಿವೆ ಎಂದು ಹೇಳಿದರು.
ಬಾಬಾ ಲಖೀಶಾಹ್ ಬಂಜಾರಾ ಅವರು 17ನೇ ಶತಮಾನದ ಮಹಾನ್ ಧಾರ್ಮಿಕ ವ್ಯಕ್ತಿತ್ವ, ಬಂಜಾರಾ (ಲಂಬಾಣಿ) ಸಮುದಾಯದ ಐತಿಹಾಸಿಕ ನಾಯಕ ಹಾಗೂ ಸಿಖ್ ಧರ್ಮದ ಒಂಬತ್ತನೇ ಗುರುಗಳಾದ ಗುರು ತೇಗ್ ಬಹದ್ದೂರ್ ಅವರ ಪರಮ ಭಕ್ತರಾಗಿದ್ದರು. ಅವರ ತ್ಯಾಗ ಮತ್ತು ಧೈರ್ಯದಿಂದ ಇತಿಹಾಸದಲ್ಲಿ ಚಿರಸ್ಥಾಯಿಯಾಗಿ ನೆನಪಾಗಿದ್ದಾರೆ ಎಂದು ತಿಳಿಸಿದರು.
ಅವರು ದೆಹಲಿಯ ಪ್ರಮುಖ ವ್ಯಾಪಾರಿ ಹಾಗೂ ಬಂಜಾರಾ ತಾಂಡಾಗಳ ಮುಖ್ಯಸ್ಥರಾಗಿದ್ದರು. ಸಿಖ್ ಗುರುಗಳ ತತ್ವಗಳಿಂದ ಪ್ರೇರಿತರಾಗಿ ಧರ್ಮಸೇವೆ ಹಾಗೂ ಮಾನವೀಯ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಂಡಿದ್ದರು ಎಂದು ವಿವರಿಸಿದರು.
ಕ್ರಿ.ಶ. 1675ರಲ್ಲಿ ಮೊಘಲ್ ದೊರೆ ಔರಂಗಜೇಬನ ಆದೇಶದ ಮೇರೆಗೆ ಗುರು ತೇಗ್ ಬಹದ್ದೂರ್ ಅವರನ್ನು ದೆಹಲಿಯ ಚಾಂದಿನಿ ಚೌಕ್ನಲ್ಲಿ ಶಿರಚ್ಛೇದ ಮಾಡಲಾಗಿತ್ತು. ಅವರ ಪಾರ್ಥಿವ ಶರೀರಕ್ಕೆ ಅಂತ್ಯಸಂಸ್ಕಾರ ನಡೆಸಲು ಯಾರೂ ಮುಂದೆ ಬರದಂತಹ ಪರಿಸ್ಥಿತಿಯಲ್ಲಿ ಬಾಬಾ ಲಖೀಶಾಹ್ ಬಂಜಾರಾ ಅಪಾರ ಧೈರ್ಯ ಪ್ರದರ್ಶಿಸಿ ಗುರುಗಳ ಪಾರ್ಥಿವ ಶರೀರವನ್ನು ಸುರಕ್ಷಿತವಾಗಿ ಸಾಗಿಸಿ, ತಮ್ಮ ಮನೆಯಲ್ಲಿಯೇ ಅಂತ್ಯಸಂಸ್ಕಾರ ನೆರವೇರಿಸಿದ್ದರು ಎಂದು ಹೇಳಿದರು.
ಇಂತಹ ಮಹಾನ್ ನಾಯಕರ ಇತಿಹಾಸವನ್ನು ಉಳಿಸಿ ಬೆಳೆಸುವ ಉದ್ದೇಶದಿಂದ ಜನ್ಮದಿನೋತ್ಸವವನ್ನು ಆಚರಿಸಲಾಗುತ್ತಿದ್ದು, ಬಂಜಾರಾ ಸಮಾಜದವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಡಾ. ಉಮೇಶ್ ಜಾಧವ್ ಮನವಿ ಮಾಡಿದರು.



