ಸಾಂಸ್ಕೃತಿಕ

ಪತ್ರಿಕೋದ್ಯಮ ಜನರ ಧ್ವನಿಯಾಗಲಿ: ಪತ್ರಿಕಾ ದಿನಾಚರಣೆಯಲ್ಲಿ ಜಿಲ್ಲಾಧಿಕಾರಿ ಇಕ್ರಮ್ ಶರೀಫ್ ಕರೆ

ವಿ.ಎನ್. ಕಾಗಲಕರ್ ಪ್ರಶಸ್ತಿ ಪ್ರದಾನ ಹಾಗೂ 25 ಪತ್ರಕರ್ತರಿಗೆ ವಾರ್ಷಿಕ ಪ್ರಶಸ್ತಿ; ಸತ್ಯ, ವಿಶ್ವಾಸಾರ್ಹತೆ ಮತ್ತು ಜವಾಬ್ದಾರಿಯುತ ಪತ್ರಿಕೋದ್ಯಮಕ್ಕೆ ಒತ್ತು

ಕಲಬುರಗಿ, ಜು.28: ಪ್ರಜಾಪ್ರಭುತ್ವದ ಯಶಸ್ಸಿಗೆ ಪತ್ರಿಕೋದ್ಯಮವು ಭದ್ರ ಬುನಾದಿಯಾಗಿದ್ದು, ಪತ್ರಕರ್ತರು ಸರ್ಕಾರ ಮತ್ತು ಜನರ ನಡುವೆ ಸೇತುವೆಯಾಗಿ ಕಾರ್ಯನಿರ್ವಹಿಸಬೇಕು ಎಂದು ಕಲಬುರಗಿ ಜಿಲ್ಲಾಧಿಕಾರಿ ಇಕ್ರಮ್ ಶರೀಫ್ ಹೇಳಿದರು.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಕಲಬುರಗಿ ಜಿಲ್ಲಾ ಘಟಕದ ವತಿಯಿಂದ ಪತ್ರಿಕಾ ಭವನದಲ್ಲಿ ಸೋಮವಾರ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ ಹಾಗೂ ವಿ.ಎನ್. ಕಾಗಲಕರ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿ ಪುರಸ್ಕೃತರನ್ನು ಸನ್ಮಾನಿಸಿ ಅವರು ಮಾತನಾಡಿದರು.

ಸಾರ್ವಜನಿಕರ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತಂದು ನೀತಿ ರೂಪಿಸುವಲ್ಲಿ ಪತ್ರಕರ್ತರ ಪಾತ್ರ ಮಹತ್ವದ್ದಾಗಿದೆ. ಸಾಮಾಜಿಕ ಜಾಲತಾಣಗಳ ಪ್ರಭಾವ ಹೆಚ್ಚುತ್ತಿರುವ ಈ ಕಾಲಘಟ್ಟದಲ್ಲಿಯೂ ಸಾಂಪ್ರದಾಯಿಕ ಪತ್ರಿಕೋದ್ಯಮವು ಸುದ್ದಿಯ ಪಾವಿತ್ರ್ಯತೆ ಹಾಗೂ ವಿಶ್ವಾಸಾರ್ಹತೆಯನ್ನು ಉಳಿಸಿಕೊಂಡಿದೆ. ಪಾರದರ್ಶಕ ಮತ್ತು ನಿಖರ ಮಾಹಿತಿಯನ್ನು ಜನರಿಗೆ ತಲುಪಿಸುವ ಪತ್ರಕರ್ತರ ಸೇವೆ ಅತ್ಯಂತ ಪವಿತ್ರವಾದದ್ದು ಎಂದು ಹೇಳಿದರು.

ಪತ್ರಕರ್ತರು ಕೇವಲ ಪ್ರಶಂಸೆಗೆ ಸೀಮಿತವಾಗದೆ, ರಚನಾತ್ಮಕ ವಿಮರ್ಶೆ ಮತ್ತು ಟೀಕೆ-ಟಿಪ್ಪಣಿಗಳ ಮೂಲಕ ಆಡಳಿತಕ್ಕೆ ಮಾರ್ಗದರ್ಶನ ನೀಡಬೇಕು. ಜಿಲ್ಲಾಡಳಿತ ಮತ್ತು ಪತ್ರಕರ್ತರು ಪರಸ್ಪರ ಪೂರಕವಾಗಿ ಕಾರ್ಯನಿರ್ವಹಿಸಿದರೆ ಜಿಲ್ಲೆಯ ಅಭಿವೃದ್ಧಿ ಇನ್ನಷ್ಟು ವೇಗವಾಗಿ ಸಾಧ್ಯವಾಗಲಿದೆ ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ನಗರ ಪೊಲೀಸ್ ಆಯುಕ್ತ ಡಾ. ಶರಣಪ್ಪ ಎಸ್.ಡಿ., ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಡ್ಡೂರು ಶ್ರೀನಿವಾಸಲು ಹಾಗೂ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಮಾತನಾಡಿ ಪತ್ರಕರ್ತರ ಸಾಮಾಜಿಕ ಹೊಣೆಗಾರಿಕೆ ಮತ್ತು ಪ್ರಜಾಪ್ರಭುತ್ವದಲ್ಲಿ ಮಾಧ್ಯಮಗಳ ಪಾತ್ರವನ್ನು ಒತ್ತಿಹೇಳಿದರು.

ಸಂಘದ ಮಾಜಿ ಉಪಾಧ್ಯಕ್ಷ ಭವಾನಿಸಿಂಗ್ ಠಾಕೂರ್, ಪತ್ರಕರ್ತ ಸತೀಶ್ ಜೇವರ್ಗಿ, ಜಿಲ್ಲಾ ಉಪಾಧ್ಯಕ್ಷ ಅರುಣ್ ಕುಮಾರ್ ಕದಂ, ರಾಜ್ಯ ಸಮಿತಿಯ ಮಾಜಿ ಸದಸ್ಯ ದೇವೇಂದ್ರಪ್ಪ ಕಪನೂರ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು. ಜಿಲ್ಲಾಾಧ್ಯಕ್ಷ ಬಾಬುರಾವ್ ಯಡ್ರಾಮಿ ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ಭೀಮಾಶಂಕರ ಫಿರೋಜಾಬಾದ್ ಸ್ವಾಗತಿಸಿದರು. ರಾಜಕುಮಾರ ಉದನೂರು ಕಾರ್ಯಕ್ರಮ ನಿರೂಪಿಸಿದರು. ರಾಚಪ್ಪ ಜಂಬಗಿ ಪ್ರಶಸ್ತಿ ಪುರಸ್ಕೃತರ ಪರಿಚಯ ಮಾಡಿಕೊಟ್ಟರು. ಬಾಬುರಾವ್ ಕೋಬಾಳ ಮತ್ತು ತಂಡ ಪ್ರಾರ್ಥನಾ ಗೀತೆ ಹಾಡಿದರು. ದೇವೇಂದ್ರಪ್ಪ ಅವಂಟಿ ವಂದಿಸಿದರು.

ಈ ಸಂದರ್ಭದಲ್ಲಿ ಪತ್ರಕರ್ತರಾದ ಪ್ರಭಾಕರ ಜೋಶಿ, ಚಂದ್ರಕಾಂತ ಹುಣಸಗಿ, ಪ್ರವೀಣ ರೆಡ್ಡಿ, ದೇವೇಂದ್ರಪ್ಪ ಅವಂಟಿ ಹಾಗೂ ಚಂದ್ರಶೇಖರ ಕವಲಗಾ ಅವರಿಗೆ ವಿ.ಎನ್. ಕಾಗಲಕರ್ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಜೊತೆಗೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 25 ಪತ್ರಕರ್ತರಿಗೆ ವಾರ್ಷಿಕ ಪ್ರಶಸ್ತಿಗಳನ್ನು ಪ್ರದಾನಿಸಲಾಯಿತು.

ಮುಖ್ಯಾಂಶ (ಬಾಕ್ಸ್): ಸತ್ಯಕ್ಕಾಗಿ ಪತ್ರಕರ್ತರು–ಪೊಲೀಸರು ಜೊತೆಯಾಗಿ ಕೆಲಸ ಮಾಡಬೇಕು

ನಗರ ಪೊಲೀಸ್ ಆಯುಕ್ತ ಡಾ. ಶರಣಪ್ಪ ಎಸ್.ಡಿ. ಮಾತನಾಡಿ, ಆಧುನಿಕ ತಂತ್ರಜ್ಞಾನ ಹಾಗೂ ಸಾಮಾಜಿಕ ಜಾಲತಾಣಗಳ ಬೆಳವಣಿಗೆಯಿಂದ ಸತ್ಯ ಮತ್ತು ಸುಳ್ಳು ಸುದ್ದಿಯನ್ನು ಗುರುತಿಸುವುದು ದೊಡ್ಡ ಸವಾಲಾಗಿದೆ. ಡೀಪ್‌ಫೇಕ್ ಸೇರಿದಂತೆ ತಿರುಚಿದ ಸುದ್ದಿಗಳ ವಿರುದ್ಧ ಪತ್ರಕರ್ತರು ಮತ್ತು ಪೊಲೀಸರು ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿ ಸತ್ಯವನ್ನು ಜನರಿಗೆ ತಲುಪಿಸಬೇಕೆಂದು ಹೇಳಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಡ್ಡೂರು ಶ್ರೀನಿವಾಸಲು ಮಾತನಾಡಿ, ಪತ್ರಕರ್ತರು ಮತ್ತು ಪೊಲೀಸರ ಕರ್ತವ್ಯಗಳು ಸಮಾಜದ ಹಿತದೃಷ್ಟಿಯಿಂದ ಒಂದೇ ಉದ್ದೇಶ ಹೊಂದಿವೆ. ಸಾಮಾಜಿಕ ಜಾಲತಾಣಗಳ ಯುಗದಲ್ಲೂ ಪತ್ರಿಕೆಗಳು ವಿಶ್ವಾಸಾರ್ಹ ಮಾಧ್ಯಮವಾಗಿ ಉಳಿದಿರುವುದು ಶ್ಲಾಘನೀಯ ಎಂದರು.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಮಾತನಾಡಿ, ಪತ್ರಕರ್ತರಾಗಲು ಬದ್ಧತೆ, ಘನತೆ ಮತ್ತು ಸಾಮಾಜಿಕ ಕಾಳಜಿ ಅಗತ್ಯ. ರಾಷ್ಟ್ರ ನಿರ್ಮಾಣದಲ್ಲಿ ಪತ್ರಕರ್ತರ ಕೊಡುಗೆ ಅನನ್ಯವಾಗಿದ್ದು, ಕಲಬುರಗಿ ರಾಜಕೀಯವಾಗಿ ಪ್ರಮುಖ ಕೇಂದ್ರವಾಗಿ ಬೆಳೆಯುತ್ತಿರುವ ಹಿನ್ನೆಲೆಯಲ್ಲಿ ಅಭಿವೃದ್ಧಿಗೆ ಪೂರಕವಾದ ಜವಾಬ್ದಾರಿಯುತ ಪತ್ರಿಕೋದ್ಯಮ ಅಗತ್ಯವಾಗಿದೆ ಎಂದು ಅಭಿಪ್ರಾಯಪಟ್ಟರು.

Related Articles

Leave a Reply

Your email address will not be published. Required fields are marked *

Back to top button