ಆಂದೋಲ ಗ್ರಾಮದಲ್ಲಿ ಕುಡಿಯುವ ನೀರಿಗಾಗಿ ಹಾಹಾಕಾರ: ಜಲಜೀವನ್ ಮಿಷನ್ ಯೋಜನೆ ವಿಫಲವೆಂಬ ಆರೋಪ
ನಲ್ಲಿಗಳಿಗೆ ನೀರು ಬರದೇ ಗ್ರಾಮಸ್ಥರ ಪರದಾಟ; ಶಾಶ್ವತ ಕುಡಿಯುವ ನೀರಿನ ವ್ಯವಸ್ಥೆಗೆ ಆಗ್ರಹ

ಜೇವರ್ಗಿ, ಜು.28: ಜೇವರ್ಗಿ ತಾಲೂಕಿನ ಆಂದೋಲ ಗ್ರಾಮದಲ್ಲಿ ಮಳೆಗಾಲದಲ್ಲಿಯೂ ತೀವ್ರ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದ್ದು, ಜಲಜೀವನ್ ಮಿಷನ್ ಯೋಜನೆಯಡಿ ಅಳವಡಿಸಿರುವ ನಲ್ಲಿಗಳಿಗೆ ನೀರು ಹರಿಯದ ಕಾರಣ ಗ್ರಾಮಸ್ಥರು ಒಂದೇ ಬಾವಿಯನ್ನು ಅವಲಂಬಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಕುರಿತು ಹಲವು ಬಾರಿ ಅಧಿಕಾರಿಗಳ ಗಮನಕ್ಕೆ ತಂದಿದ್ದರೂ ಯಾವುದೇ ಶಾಶ್ವತ ಪರಿಹಾರ ದೊರೆತಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ತಕ್ಷಣವೇ ಸಂಬಂಧಪಟ್ಟ ಅಧಿಕಾರಿಗಳು ಸಮಸ್ಯೆ ಬಗೆಹರಿಸುವಂತೆ ಅವರು ಆಗ್ರಹಿಸಿದ್ದಾರೆ.
ಮಳೆಗಾಲದಲ್ಲಿಯೂ ನೀರಿಗಾಗಿ ಪರದಾಡಬೇಕಾದ ಸ್ಥಿತಿ ಎದುರಾಗಿದ್ದು, ಕಳೆದ ಸುಮಾರು 20 ದಿನಗಳಿಂದ ಗ್ರಾಮಕ್ಕೆ ನಿಯಮಿತವಾಗಿ ನೀರು ಪೂರೈಕೆಯಾಗುತ್ತಿಲ್ಲ ಎನ್ನಲಾಗಿದೆ. ಇದರಿಂದ ಗ್ರಾಮದಲ್ಲಿರುವ ಏಕೈಕ ಬಾವಿಯೇ ಜನರ ಜೀವನಾಡಿಯಾಗಿ ಪರಿಣಮಿಸಿದೆ. ವಿಶೇಷವಾಗಿ ವಯೋವೃದ್ಧರು ಬಾವಿಯಿಂದ ನೀರು ತರುವುದು ಕಷ್ಟಕರವಾಗಿದ್ದು, ಮಹಿಳೆಯರು ಮತ್ತು ಮಕ್ಕಳು ಕೂಡ ಸಂಕಷ್ಟ ಅನುಭವಿಸುತ್ತಿದ್ದಾರೆ.
ಜಲಜೀವನ್ ಮಿಷನ್ ಯೋಜನೆಯಡಿ ಮನೆಮನೆಗೆ ನಳ್ಳಿ ಸಂಪರ್ಕ ಕಲ್ಪಿಸಲಾಗಿದ್ದರೂ, ಇದುವರೆಗೆ ಒಂದೇ ಹನಿ ನೀರೂ ಬಂದಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ. ಪಂಚಾಯಿತಿ ವತಿಯಿಂದ ಹೊರಗಿನಿಂದ ಟ್ಯಾಂಕರ್ ಮೂಲಕ ನೀರು ತಂದು ಗ್ರಾಮಕ್ಕೆ ಪೂರೈಸಲಾಗುತ್ತಿದ್ದರೂ ಅದು ಅಗತ್ಯಕ್ಕೆ ಸಾಲುತ್ತಿಲ್ಲ ಎಂದು ಅವರು ತಿಳಿಸಿದ್ದಾರೆ.
ಸ್ವಂತ ವಾಹನಗಳಿರುವ ಕೆಲವರು ದೂರದ ಪ್ರದೇಶಗಳಿಂದ ಕುಡಿಯುವ ನೀರನ್ನು ತಂದು ಬಳಸುತ್ತಿದ್ದಾರೆ. ಆದರೆ ಇತರ ಕುಟುಂಬಗಳು ಗ್ರಾಮದ ಬಾವಿಯನ್ನೇ ಅವಲಂಬಿಸಬೇಕಾದ ಪರಿಸ್ಥಿತಿ ಇದೆ. ಇದರಿಂದ ಪ್ರತಿದಿನ ನೀರಿಗಾಗಿ ಗ್ರಾಮಸ್ಥರು ಪರದಾಡುತ್ತಿದ್ದಾರೆ.
ಗ್ರಾಮದ ಕುಡಿಯುವ ನೀರಿನ ಸಮಸ್ಯೆ ಕುರಿತು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಸಮರ್ಪಕ ಸ್ಪಂದನೆ ದೊರೆತಿಲ್ಲ ಎಂಬುದು ಗ್ರಾಮಸ್ಥರ ಆರೋಪವಾಗಿದೆ. ಆದ್ದರಿಂದ ಗ್ರಾಮಕ್ಕೆ ಶಾಶ್ವತ ಕುಡಿಯುವ ನೀರಿನ ಯೋಜನೆ ಜಾರಿಗೊಳಿಸಿ, ಜಲಜೀವನ್ ಮಿಷನ್ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.



