ಜಗಜೀವನ್ ರಾಮ್ ಭಾವಚಿತ್ರ ಧ್ವಂಸ ಪ್ರಕರಣ ಭೇದಿಸಿದ ಪೊಲೀಸರು; ಐವರು ಆರೋಪಿಗಳ ಬಂಧನ
ಕೊಟಗಾ ಗ್ರಾಮದಲ್ಲಿ ಕಬ್ಬಿಣದ ಫಲಕ ಹಾನಿ, ಭಾವಚಿತ್ರಕ್ಕೆ ಅವಮಾನ; ಜಮೀನು ವಿವಾದವೇ ಕೃತ್ಯದ ಹಿಂದಿನ ಕಾರಣ ಎಂಬ ಶಂಕೆ

ಕಲಬುರಗಿ, ಜು. 27: ಜಿಲ್ಲೆಯ ಕಾಳಗಿ ಪೊಲೀಸ್ ಠಾಣೆ ವ್ಯಾಪ್ತಿಯ ಕೊಟಗಾ ಗ್ರಾಮದಲ್ಲಿ ಬಾಬು ಜಗಜೀವನ್ ರಾಮ್ ಅವರ ಭಾವಚಿತ್ರವಿದ್ದ ಕಬ್ಬಿಣದ ಫಲಕವನ್ನು ಧ್ವಂಸಗೊಳಿಸಿ, ಭಾವಚಿತ್ರಕ್ಕೆ ಅವಮಾನ ಎಸಗಿದ ಪ್ರಕರಣವನ್ನು ಪೊಲೀಸರು ಭೇದಿಸಿದ್ದು, ಐವರು ಆರೋಪಿಗಳನ್ನು ಬಂಧಿಸಿದ್ದಾರೆ.
ಬಂಧಿತರನ್ನು ಕೊಟಗಾ ಗ್ರಾಮದ ಸಂಜು ಅಲಿಯಾಸ್ ಸಂಜೀವಕುಮಾರ್ ಬಾಜಿ (40), ಶಿರೋಮಣಿ ಹಲಗೆನೋರ್ (50), ನಾಗರಾಜ ಹಲಗೆ (24), ರಘು ವಾಲೀಕಾರ್ (19) ಹಾಗೂ ದೀಪಕ್ ಹಲಗೆ (18) ಎಂದು ಗುರುತಿಸಲಾಗಿದೆ.
ಜುಲೈ 9ರಂದು ನಡೆದ ಘಟನೆಯ ಕುರಿತು ದೂರು ದಾಖಲಾಗಿದ್ದ ಹಿನ್ನೆಲೆಯಲ್ಲಿ ಪಿಎಸ್‌ಐ ಶೀಲಾದೇವಿ ಹಾಗೂ ಸಿಬ್ಬಂದಿಯ ತಂಡ ತಾಂತ್ರಿಕ ಮತ್ತು ವೈಜ್ಞಾನಿಕ ಸಾಕ್ಷ್ಯಾಧಾರಗಳನ್ನು ಆಧರಿಸಿ ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.
ಪ್ರಾಥಮಿಕ ತನಿಖೆಯಲ್ಲಿ, ಕೊಟಗಾ ಗ್ರಾಮದ ಸರ್ವೇ ನಂ. 5ರಲ್ಲಿ ಇರುವ ಸರ್ಕಾರಿ ಜಮೀನಿನ ವಿಚಾರಕ್ಕೆ ಸಂಬಂಧಿಸಿದ ವಿವಾದವೇ ಕೃತ್ಯದ ಹಿಂದಿನ ಪ್ರಮುಖ ಕಾರಣ ಎನ್ನುವುದು ಬೆಳಕಿಗೆ ಬಂದಿದೆ. ಜಮೀನಿನ ಹಕ್ಕು ಹಾಗೂ ಬಳಕೆಗೆ ಸಂಬಂಧಿಸಿದ ಅಸಮಾಧಾನದ ಹಿನ್ನೆಲೆಯಲ್ಲಿ, ಹಲವು ವರ್ಷಗಳಿಂದ ಅಲ್ಲಿ ಅಳವಡಿಸಲಾಗಿದ್ದ ಬಾಬು ಜಗಜೀವನ್ ರಾಮ್ ಅವರ ಭಾವಚಿತ್ರವಿದ್ದ ಕಬ್ಬಿಣದ ಫಲಕವನ್ನು ಧ್ವಂಸಗೊಳಿಸಿ ಗ್ರಾಮದಲ್ಲಿ ಅಶಾಂತಿ ಸೃಷ್ಟಿಸುವ ಉದ್ದೇಶದಿಂದ ಈ ಕೃತ್ಯ ಎಸಗಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಕರಣದ ತನಿಖೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಅಭಿನಂದಿಸಿದ್ದಾರೆ.



