ಅಪರಾಧ

ಕಲಬುರಗಿಯಲ್ಲಿ ವೈನ್‌ಶಾಪ್ ಎದುರು ಭೀಕರ ಹತ್ಯೆ; ನಾಲ್ವರ ದಾಳಿ, ಹಳೆಯ ದ್ವೇಷದ ಶಂಕೆ

47 ವರ್ಷದ ರವಿಚಂದ್ರ ಗುಟ್ಟೇದಾರ್‌ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ; ಪತ್ನಿಯಿಂದ ಹತ್ಯೆ ಆರೋಪಿಗಳ ವಿರುದ್ಧ ದೂರು

ಕಲಬುರಗಿ, ಜು. 27: ನಗರದ ಹಳೆಯ ಆರ್‌ಟಿಒ ರಸ್ತೆಯಲ್ಲಿರುವ ಸುಷ್ಮಾ ವೈನ್‌ಶಾಪ್ ಎದುರು 47 ವರ್ಷದ ವ್ಯಕ್ತಿಯೊಬ್ಬರನ್ನು ನಾಲ್ವರು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಭಾನುವಾರ ತಡರಾತ್ರಿ ನಡೆದಿದೆ. ಮೃತರನ್ನು ಆದರ್ಶನಗರ ನಿವಾಸಿ ರವಿಚಂದ್ರ ತಿಪ್ಪಯ್ಯ ಗುಟ್ಟೇದಾರ್ (47) ಎಂದು ಗುರುತಿಸಲಾಗಿದೆ.

ಪ್ರತ್ಯಕ್ಷದರ್ಶಿಗಳ ಮಾಹಿತಿ ಪ್ರಕಾರ, ನಾಲ್ವರು ಆರೋಪಿಗಳು ರವಿಚಂದ್ರ ಅವರನ್ನು ಬೆನ್ನಟ್ಟಿಕೊಂಡು ಬಂದು ವೈನ್‌ಶಾಪ್ ಎದುರು ಅಡ್ಡಗಟ್ಟಿ ಮಾರಕಾಸ್ತ್ರಗಳಿಂದ ಮನಬಂದಂತೆ ಹಲ್ಲೆ ನಡೆಸಿದ್ದಾರೆ. ತೀವ್ರ ರಕ್ತಸ್ರಾವದಿಂದ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಹಾಗೂ ಸ್ಟೇಷನ್ ಬಜಾರ್ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಳಿಕ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಜಿಲ್ಲಾಸ್ಪತ್ರೆಗೆ ರವಾನಿಸಲಾಯಿತು.

ಪ್ರಾಥಮಿಕ ತನಿಖೆಯಲ್ಲಿ ಈ ಹತ್ಯೆ ಹಳೆಯ ದ್ವೇಷ ಅಥವಾ ಹಿಂದಿನ ಕೊಲೆ ಪ್ರಕರಣದ ವೈಷಮ್ಯದ ಹಿನ್ನೆಲೆಯಿಂದ ನಡೆದಿರಬಹುದೆಂಬ ಶಂಕೆ ವ್ಯಕ್ತವಾಗಿದೆ. ಘಟನಾ ಸ್ಥಳದ ಸಿಸಿಟಿವಿ ದೃಶ್ಯಾವಳಿಗಳನ್ನು ಪೊಲೀಸರು ಪರಿಶೀಲಿಸುತ್ತಿದ್ದು, ನಾಲ್ವರು ಆರೋಪಿಗಳ ಬಂಧನಕ್ಕಾಗಿ ವಿಶೇಷ ತಂಡ ರಚಿಸಿ ಶೋಧ ಕಾರ್ಯ ಆರಂಭಿಸಿದ್ದಾರೆ.

ಪತ್ನಿಯಿಂದ ದೂರು

ಮೃತ ರವಿಚಂದ್ರ ಅವರ ಪತ್ನಿ ಜಯಶ್ರೀ ಗುಟ್ಟೇದಾರ್ ಅವರು ಸ್ಟೇಷನ್ ಬಜಾರ್ ಪೊಲೀಸ್ ಠಾಣೆಗೆ ದೂರು ನೀಡಿ, 2020ರಲ್ಲಿ ನಡೆದ ಅಬ್ದುಲ್ ಇನ್ಸಾದ್ ಕೊಲೆ ಪ್ರಕರಣದ ಹಿನ್ನೆಲೆಯಲ್ಲಿದ್ದ ವೈಷಮ್ಯವೇ ಈ ಹತ್ಯೆಗೆ ಕಾರಣವಾಗಿರಬಹುದು ಎಂದು ಆರೋಪಿಸಿದ್ದಾರೆ.

ದೂರಿನ ಪ್ರಕಾರ, ರವಿಚಂದ್ರ ಅವರು ಹುಮನಾಬಾದ್ ರಿಂಗ್‌ರೋಡ್ ಸಮೀಪ ಟೀ ಪಾಯಿಂಟ್ ನಡೆಸುತ್ತಿದ್ದರು. ಈ ಹಿಂದೆ ಕೊಲೆ ಪ್ರಕರಣದ ಬಳಿಕ ಕುಟುಂಬವು ನಿವಾಸವನ್ನೂ ಬದಲಿಸಿತ್ತು. ಆದರೂ ಅವರಿಗೆ ನಿರಂತರ ಬೆದರಿಕೆಗಳು ಬರುತ್ತಿದ್ದವು ಎಂದು ಅವರು ತಿಳಿಸಿದ್ದಾರೆ.

ಭಾನುವಾರ ರಾತ್ರಿ ಎಂದಿನಂತೆ ವೈನ್‌ಶಾಪ್‌ಗೆ ತೆರಳಿದ್ದ ವೇಳೆ ದುಷ್ಕರ್ಮಿಗಳು ದಾಳಿ ನಡೆಸಿದ್ದು, ಅವರ ದೇಹದ ಬೆನ್ನು, ಹೊಟ್ಟೆ ಹಾಗೂ ಎದೆ ಭಾಗಗಳಲ್ಲಿ ಒಟ್ಟು 12 ಗಾಯಗಳು ಪತ್ತೆಯಾಗಿವೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಈ ಸಂಬಂಧ ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆ ಹಾಗೂ ಬಂಧನಕ್ಕಾಗಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button