ಜಿಲ್ಲಾಸುದ್ದಿಸಾಂಸ್ಕೃತಿಕ

‘ಅಪ್ಪನ ಒಡನಾಟ’ ಕೃತಿ ಬಿಡುಗಡೆ; ಬಸವ ಮಾರ್ಗ ಪ್ರಶಸ್ತಿ ಪ್ರದಾನ

ಪ್ರಖರ ವೈಚಾರಿಕ ಬರಹಗಾರ ಲಿಂಗಣ್ಣ ಸತ್ಯಂಪೇಟೆ ಅವರ ಸಂಸ್ಮರಣೆಯಲ್ಲಿ ಕೃತಿ ಬಿಡುಗಡೆ, ಪ್ರಶಸ್ತಿ ಪ್ರದಾನ ಮತ್ತು ಅವರ ನಿರ್ಭೀತ ಪತ್ರಿಕೋದ್ಯಮಕ್ಕೆ ಗೌರವ.

ಕಲಬುರಗಿ, ಜು. 25: ಶಾಲಾ ಶಿಕ್ಷಕರಾಗಿಯೂ, ಪತ್ರಕರ್ತರಾಗಿಯೂ ಕಾರ್ಯನಿರ್ವಹಿಸಿದ್ದ ದಿವಂಗತ ಲಿಂಗಣ್ಣ ಸತ್ಯಂಪೇಟೆ ಅವರು ರಾಜಕಾರಣಿಗಳ ಅಕ್ರಮಗಳು, ರೈತರ ಸಮಸ್ಯೆಗಳು ಹಾಗೂ ಸಾಮಾಜಿಕ ಅನ್ಯಾಯಗಳ ವಿರುದ್ಧ ನಿರ್ಭೀತಿಯಿಂದ ಧ್ವನಿ ಎತ್ತಿದ ಪ್ರಖರ ವೈಚಾರಿಕ ಬರಹಗಾರರಾಗಿದ್ದರು ಎಂದು ಮಾಜಿ ಸಚಿವ ಎಸ್.ಕೆ. ಕಾಂತಾ ಹೇಳಿದರು.

ನಗರದಲ್ಲಿ ಶನಿವಾರ ಶರಣಮಾರ್ಗ ಚಾರಿಟಬಲ್ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ಲಿಂಗಣ್ಣ ಸತ್ಯಂಪೇಟೆ ಅವರ 14ನೇ ಸಂಸ್ಮರಣೆ, ರಾಜ್ಯಮಟ್ಟದ ಬಸವ ಮಾರ್ಗ ಪ್ರಶಸ್ತಿ ಪ್ರದಾನ ಹಾಗೂ ‘ಅಪ್ಪನ ಒಡನಾಟ’ ಕೃತಿ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.

ಲಿಂಗಣ್ಣ ಸತ್ಯಂಪೇಟೆ ಅವರೊಂದಿಗೆ ತಮ್ಮ ಆತ್ಮೀಯ ಒಡನಾಟವನ್ನು ಸ್ಮರಿಸಿದ ಎಸ್.ಕೆ. ಕಾಂತಾ, ಅವರು ಶಿಕ್ಷಕರಾಗಿದ್ದರೂ ಪತ್ರಿಕೋದ್ಯಮದಲ್ಲಿ ನಿರ್ಭೀತ ಧೋರಣೆ ಅನುಸರಿಸಿ ಲಂಕೇಶ್ ಪತ್ರಿಕೆಯಲ್ಲಿ ಅಕ್ರಮಗಳ ವಿರುದ್ಧ ನಿರಂತರವಾಗಿ ಬರೆಯುತ್ತಿದ್ದರು. ಹಲವು ಬಾರಿ ಅಧಿಕಾರಿಗಳಿಂದ ವರ್ಗಾವಣೆ ಹಾಗೂ ಅಮಾನತು ಶಿಕ್ಷೆ ಅನುಭವಿಸಿದರೂ ತಮ್ಮ ಸಿದ್ಧಾಂತಗಳಿಂದ ಹಿಂದೆ ಸರಿಯಲಿಲ್ಲ. ಅಂತಹ ಸಂದರ್ಭಗಳಲ್ಲಿ ಅವರ ಪರವಾಗಿ ನಿಂತು ನ್ಯಾಯ ದೊರಕಿಸಲು ಪ್ರಯತ್ನಿಸಿದ್ದೆ ಎಂದು ನೆನಪಿಸಿಕೊಂಡರು.

ರೈತರು ಮತ್ತು ಶ್ರಮಜೀವಿಗಳು ಸದಾ ಸಂಕಷ್ಟದಲ್ಲಿರುವಾಗ ಸರ್ಕಾರಗಳು ಉದ್ಯಮಿಗಳಿಗೆ ಹೆಚ್ಚಿನ ಸೌಲಭ್ಯಗಳನ್ನು ನೀಡುತ್ತಿರುವುದು ವಿಷಾದನೀಯ. ಕೃಷಿಕರ ಕಲ್ಯಾಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.

ಶಾಸಕ ಬಿ.ಆರ್. ಪಾಟೀಲ ಮಾತನಾಡಿ, ಬಸವ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಂಡಿದ್ದ ಲಿಂಗಣ್ಣ ಸತ್ಯಂಪೇಟೆ ಅವರು ಅನ್ಯಾಯದ ವಿರುದ್ಧ ಅಣುಬಾಂಬಿನಂತೆ ಸಿಡಿದೇಳುತ್ತಿದ್ದ ವ್ಯಕ್ತಿಯಾಗಿದ್ದರು. ಈ ಭಾಗದ ರಾಜಕೀಯ ಹಾಗೂ ಧಾರ್ಮಿಕ ಕ್ಷೇತ್ರಗಳಲ್ಲಿನ ಅಕ್ರಮಗಳನ್ನು ನಿರ್ಭಯವಾಗಿ ಬಯಲಿಗೆಳೆಯುವ ಮೂಲಕ ಜನಜಾಗೃತಿ ಮೂಡಿಸಿದ್ದರು ಎಂದು ಹೇಳಿದರು.

ಲಿಂಗಣ್ಣ ಸತ್ಯಂಪೇಟೆ ಅವರ ಪುತ್ರ ವಿಶ್ವರಾಧ್ಯ ಸತ್ಯಂಪೇಟೆ ಮಾತನಾಡಿ, ತಮ್ಮ ತಂದೆ ಆರಂಭಿಸಿದ್ದ ‘ಬಸವ ಮಾರ್ಗ’ ಪತ್ರಿಕೆ ಒಂದು ಕಾಲದಲ್ಲಿ 25 ಸಾವಿರ ಪ್ರತಿಗಳವರೆಗೆ ಮಾರಾಟವಾಗುತ್ತಿತ್ತು. ಲಾಭ-ನಷ್ಟದ ಲೆಕ್ಕಾಚಾರ ಮಾಡದೇ ಓದುಗರ ಮನೆಗಳಿಗೆ ಪತ್ರಿಕೆ ತಲುಪಿಸುವುದನ್ನೇ ಧ್ಯೇಯವಾಗಿಸಿಕೊಂಡಿದ್ದರು. ಮುದ್ರಣಕ್ಕೆ ಹೋಗುವ ಕೊನೆಯ ಕ್ಷಣದವರೆಗೂ ಲೇಖನಗಳನ್ನು ತಿದ್ದುಪಡಿ ಮಾಡುವಷ್ಟು ಬರವಣಿಗೆಯ ಬಗ್ಗೆ ಕಾಳಜಿ ಹೊಂದಿದ್ದರು ಎಂದು ಸ್ಮರಿಸಿದರು.

ಸಾನ್ನಿಧ್ಯ ವಹಿಸಿದ್ದ ಮುದಗಲ್ ಕಲ್ಯಾಣಾಶ್ರಮದ ಮಹಾಂತ ಸ್ವಾಮೀಜಿ ಮಾತನಾಡಿ, ಲಿಂಗಣ್ಣ ಸತ್ಯಂಪೇಟೆ ಅವರು ಇಳಕಲ್ ಮಹಾಂತ ಅಪ್ಪಗಳ ಆಪ್ತ ಅನುಯಾಯಿಯಾಗಿದ್ದರು. ಶರಣ ತತ್ವದ ಪ್ರಚಾರಕ್ಕಾಗಿ ಹಲವು ಗ್ರಾಮಗಳಿಗೆ ತೆರಳಿ ಜನಜಾಗೃತಿ ಮೂಡಿಸುವ ಕಾರ್ಯದಲ್ಲಿ ಸದಾ ತೊಡಗಿಸಿಕೊಂಡಿದ್ದರು. ಅವರ ಬದುಕು ಶರಣರ ಆದರ್ಶಗಳಿಗೆ ಜೀವಂತ ಉದಾಹರಣೆಯಾಗಿತ್ತು ಎಂದು ಹೇಳಿದರು.

ಈ ಸಂದರ್ಭದಲ್ಲಿ ಬೆಂಗಳೂರಿನ ಸಿಸಿಬಿ ಪೊಲೀಸ್ ಅಧಿಕಾರಿ ಡಾ. ಬಿ.ಎಸ್. ಸುಧಾಕರ್ ಅವರಿಗೆ ರಾಜ್ಯಮಟ್ಟದ ಬಸವ ಮಾರ್ಗ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಇದೇ ವೇಳೆ ಸಂತೋಷ ಸತ್ಯಂಪೇಟೆ ರಚಿಸಿರುವ ‘ಅಪ್ಪನ ಒಡನಾಟ’ ಕೃತಿಯನ್ನು ಶಾಸಕ ಬಿ.ಆರ್. ಪಾಟೀಲ ಬಿಡುಗಡೆಗೊಳಿಸಿದರು. ಶರಣ ಮಾರ್ಗ ಪತ್ರಿಕೆಯ ವಿಶೇಷ ಸಂಚಿಕೆಯನ್ನೂ ಇದೇ ಸಂದರ್ಭದಲ್ಲಿ ಅನಾವರಣಗೊಳಿಸಲಾಯಿತು. ಅಶೋಕ ದೊಡ್ಡಮನಿ ಕೃತಿಯನ್ನು ಪರಿಚಯಿಸಿದರು.

ಲಿಂಗಣ್ಣ ಸತ್ಯಂಪೇಟೆ ಅವರ ಪುತ್ರ ಹಾಗೂ ಪತ್ರಕರ್ತ ಡಾ. ಶಿವರಂಜನ್ ಸತ್ಯಂಪೇಟೆ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಬಸವ ಸಮಿತಿ ಅಧ್ಯಕ್ಷೆ ವಿಲಾಸವತಿ ಖೂಬಾ, ಸರ್ವಜ್ಞ ಶಿಕ್ಷಣ ಸಮೂಹ ಸಂಸ್ಥೆಗಳ ಅಧ್ಯಕ್ಷ ಚನ್ನಾರೆಡ್ಡಿ ಪಾಟೀಲ, ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯ ಸಿದ್ದರಾಮ ಹೊನ್ಕಲ್, ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ರವೀಂದ್ರ ಶಾಬಾದಿ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು. ಸುರೇಶ್ ಬಡಿಗೇರ ಕಾರ್ಯಕ್ರಮ ನಿರೂಪಿಸಿದರು. ವಿಠ್ಠಲ್ ಚಿಕಣಿ ವಂದಿಸಿದರು.

Related Articles

Leave a Reply

Your email address will not be published. Required fields are marked *

Back to top button