ಅಂತರರಾಜ್ಯ ಮನೆಗಳ್ಳ ಬಂಧನ: ₹20 ಲಕ್ಷ ಮೌಲ್ಯದ ಚಿನ್ನಾಭರಣ ವಶ
ಕಲಬುರಗಿಯ ಎರಡು ಮನೆ ಕಳ್ಳತನ ಪ್ರಕರಣ ಭೇದಿಸಿದ ಅಶೋಕನಗರ ಪೊಲೀಸರು; 117 ಗ್ರಾಂ ಚಿನ್ನಾಭರಣ ಜಪ್ತಿ

ಕಲಬುರಗಿ, ಜು.24: ನಗರದ ಅಶೋಕನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಎರಡು ಮನೆ ಕಳ್ಳತನ ಪ್ರಕರಣಗಳನ್ನು ಭೇದಿಸಿರುವ ಪೊಲೀಸರು, ಅಂತರರಾಜ್ಯ ಮಟ್ಟದಲ್ಲಿ ಕಳ್ಳತನ ನಡೆಸುತ್ತಿದ್ದ ಆರೋಪಿಯನ್ನು ಬಂಧಿಸಿ ಸುಮಾರು ₹20 ಲಕ್ಷ ಮೌಲ್ಯದ 117 ಗ್ರಾಂ ಚಿನ್ನಾಭರಣವನ್ನು ವಶಪಡಿಸಿಕೊಂಡಿದ್ದಾರೆ ಎಂದು ನಗರ ಪೊಲೀಸ್ ಆಯುಕ್ತ ಡಾ. ಶರಣಪ್ಪ ಎಸ್.ಡಿ. ತಿಳಿಸಿದ್ದಾರೆ.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತೆಲಂಗಾಣ ರಾಜ್ಯದ ಹೈದರಾಬಾದ್ ಮೂಲದ, ಪ್ರಸ್ತುತ ವರಂಗಲ್‌ನಲ್ಲಿ ವಾಸವಾಗಿರುವ ಆಟೋ ಚಾಲಕ ಸೈಯದ್ ಹಮೀದ್ (46) ಎಂಬಾತನನ್ನು ಬಂಧಿಸಲಾಗಿದೆ ಎಂದು ಹೇಳಿದರು. ವಿಚಾರಣೆ ವೇಳೆ ಆರೋಪಿಯು ಕಲಬುರಗಿಯ ಎರಡು ಮನೆ ಕಳ್ಳತನ ಪ್ರಕರಣಗಳಲ್ಲಿ ತನ್ನ ಪಾತ್ರವನ್ನು ಒಪ್ಪಿಕೊಂಡಿದ್ದು, ಆತನಿಂದ ₹20 ಲಕ್ಷ ಮೌಲ್ಯದ 117 ಗ್ರಾಂ ತೂಕದ ಚಿನ್ನಾಭರಣಗಳನ್ನು ಜಪ್ತಿ ಮಾಡಲಾಗಿದೆ. ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಮಾಹಿತಿ ನೀಡಿದರು.
ಪ್ರಕರಣದ ವಿವರ ನೀಡಿದ ಅವರು, ದೂರುದಾರರು ಮಹಾನಗರ ಪಾಲಿಕೆ ಕೆಲಸಕ್ಕೆ ತೆರಳಿದ್ದ ವೇಳೆ ಅವರ ತಾಯಿ ಚಿಂಚೋಳಿ ತಾಲ್ಲೂಕಿನ ಚೆಂಗಟಾ ದರ್ಗಾಗೆ ಹೋಗಿದ್ದರು. ಈ ಸಂದರ್ಭ ಮನೆಗೆ ನುಗ್ಗಿದ ಕಳ್ಳ, ಮುಖ್ಯ ಬಾಗಿಲು ಮುರಿದು ಒಳ ಪ್ರವೇಶಿಸಿ, ಅಲಮಾರಿಯಲ್ಲಿದ್ದ ನಗದು ಹಾಗೂ ಚಿನ್ನ-ಬೆಳ್ಳಿ ಆಭರಣಗಳನ್ನು ಕಳವು ಮಾಡಿದ್ದಾನೆ ಎಂದು ತಿಳಿಸಿದರು.
ಕಳ್ಳತನದಲ್ಲಿ ₹50 ಸಾವಿರ ನಗದು, 300 ಗ್ರಾಂ ಬೆಳ್ಳಿ ವಸ್ತುಗಳು, 200 ಗ್ರಾಂ ಬೆಳ್ಳಿ ನಾಣ್ಯಗಳು, ಮತ್ತೊಂದು ಅಲಮಾರಿಯಲ್ಲಿದ್ದ ₹25 ಸಾವಿರ ನಗದು, 200 ಗ್ರಾಂ ಬೆಳ್ಳಿ ನಾಣ್ಯಗಳು ಹಾಗೂ 46 ಗ್ರಾಂ ತೂಕದ ಚಿನ್ನಾಭರಣ ಸೇರಿದಂತೆ ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳನ್ನು ದೋಚಲಾಗಿತ್ತು. ಈ ಸಂಬಂಧ ಅಶೋಕನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ನಗರ ಸಹಾಯಕ ಪೊಲೀಸ್ ಆಯುಕ್ತ ಶರಣಬಸಪ್ಪ ಸುಬೇದಾರ್ ಹಾಗೂ ಪೊಲೀಸ್ ಇನ್‌ಸ್ಪೆಕ್ಟರ್ ಸತೀಶ್ ಕನಮೇಶ್ವರ ಅವರ ನೇತೃತ್ವದ ವಿಶೇಷ ತಂಡವು ತಾಂತ್ರಿಕ ಮಾಹಿತಿ ಆಧರಿಸಿ ಆರೋಪಿಯನ್ನು ಪತ್ತೆಹಚ್ಚಿ ಬಂಧಿಸುವಲ್ಲಿ ಯಶಸ್ವಿಯಾಗಿದೆ. ಕಾರ್ಯಾಚರಣೆಯಲ್ಲಿ ವೈಜಿನಾಥ, ಮಲ್ಲಿಕಾರ್ಜುನ ಮೇತ್ರೆ, ಶಿವಪ್ರಕಾಶ್, ಮುಜಾಹಿದ್, ಕರಣ್, ನೀಲಕಂಠರಾಯ ಪಾಟೀಲ, ಚಂದ್ರಶೇಖರ್, ಹರಿಕಿಶೋರ್, ಶ್ರೀಕಾಂತ್, ಪ್ರಭಾಕರ್, ಶಿವಲಿಂಗ್ ಹಾಗೂ ಚೆನ್ನವೀರೇಶ್ ಸೇರಿದಂತೆ ಪೊಲೀಸ್ ಸಿಬ್ಬಂದಿ ಭಾಗವಹಿಸಿದ್ದರು.
ಸುದ್ದಿಗೋಷ್ಠಿಯಲ್ಲಿ ನಗರ ಪೊಲೀಸ್ ಉಪ ಆಯುಕ್ತರಾದ ಶ್ರೀಮತಿ ಶಾಲೂ, ಪ್ರವೀಣ್ ಎಚ್. ನಾಯಕ್ ಹಾಗೂ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.



