2026 ಕಾಮನ್ವೆಲ್ತ್ ಕ್ರೀಡಾಕೂಟದಿಂದ ಕ್ರಿಕೆಟ್ ಹೊರಗುಳಿದಿದ್ದು ಏಕೆ? ಇಲ್ಲಿದೆ ಪ್ರಮುಖ ಕಾರಣಗಳು
ವೆಚ್ಚ ಕಡಿತಕ್ಕಾಗಿ ಕ್ರೀಡೆಗಳ ಸಂಖ್ಯೆ ಇಳಿಕೆ; ಕ್ರಿಕೆಟ್ ಸೇರಿ ಹಲವು ಜನಪ್ರಿಯ ಕ್ರೀಡೆಗಳಿಗೆ ಸ್ಥಾನ ಇಲ್ಲ

2022ರ ಬರ್ಮಿಂಗ್ಹ್ಯಾಮ್ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಭಾರತೀಯ ಮಹಿಳಾ ಕ್ರಿಕೆಟ್ ತಂಡ ಬೆಳ್ಳಿ ಪದಕ ಗೆದ್ದು ಇತಿಹಾಸ ನಿರ್ಮಿಸಿತ್ತು. 24 ವರ್ಷಗಳ ಬಳಿಕ ಕಾಮನ್ವೆಲ್ತ್ ಕ್ರೀಡಾಕೂಟಕ್ಕೆ ಮರಳಿದ್ದ ಕ್ರಿಕೆಟ್ ಅಭಿಮಾನಿಗಳಲ್ಲಿ ಭಾರಿ ಸಂಭ್ರಮ ಮೂಡಿಸಿತ್ತು. ಆದರೆ, ಜುಲೈ 23ರಿಂದ ಆರಂಭವಾಗಲಿರುವ 2026ರ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಪುರುಷರ ಹಾಗೂ ಮಹಿಳೆಯರ ಯಾವುದೇ ಕ್ರಿಕೆಟ್ ಸ್ಪರ್ಧೆ ನಡೆಯುವುದಿಲ್ಲ ಎಂಬುದು ಅಧಿಕೃತವಾಗಿದೆ.
ಕ್ರಿಕೆಟ್ ಮೊದಲ ಬಾರಿಗೆ 1998ರಲ್ಲಿ ಮಲೇಷ್ಯಾದ ಕೌಲಾಲಂಪುರದಲ್ಲಿ ನಡೆದ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಸ್ಥಾನ ಪಡೆದಿತ್ತು. ನಂತರ 2022ರ ಬರ್ಮಿಂಗ್ಹ್ಯಾಮ್ ಕ್ರೀಡಾಕೂಟದಲ್ಲಿ ಮಹಿಳೆಯರ ಟಿ20 ಕ್ರಿಕೆಟ್ಗೆ ಅವಕಾಶ ನೀಡಲಾಗಿತ್ತು. ಆದರೆ 2026ರ ಆವೃತ್ತಿಯಲ್ಲಿ ಮತ್ತೆ ಕ್ರಿಕೆಟ್ಗೆ ಸ್ಥಾನ ಸಿಕ್ಕಿಲ್ಲ.
ಈ ಬಾರಿ ಕ್ರೀಡಾಕೂಟವನ್ನು ಮೂಲತಃ ಆಸ್ಟ್ರೇಲಿಯಾದ ವಿಕ್ಟೋರಿಯಾ ನಗರದಲ್ಲಿ ನಡೆಸಲು ಯೋಜಿಸಲಾಗಿತ್ತು. ಆದರೆ 2023ರಲ್ಲಿ ಆಯೋಜನಾ ವೆಚ್ಚವು ಭಾರೀ ಪ್ರಮಾಣದಲ್ಲಿ ಏರಿಕೆಯಾದ ಕಾರಣ ವಿಕ್ಟೋರಿಯಾ ಸರ್ಕಾರ ಆತಿಥ್ಯ ವಹಿಸುವುದರಿಂದ ಹಿಂದೆ ಸರಿಯಿತು. ಬಳಿಕ ಸ್ಕಾಟ್ಲೆಂಡ್ನ ಗ್ಲಾಸ್ಗೋ ಕೊನೆಯ ಕ್ಷಣದಲ್ಲಿ ಆತಿಥ್ಯದ ಜವಾಬ್ದಾರಿಯನ್ನು ಸ್ವೀಕರಿಸಿತು.
ವೆಚ್ಚವನ್ನು ನಿಯಂತ್ರಿಸುವ ಉದ್ದೇಶದಿಂದ ಕಾಮನ್ವೆಲ್ತ್ ಕ್ರೀಡಾಕೂಟ ಒಕ್ಕೂಟ ಮತ್ತು ಸ್ಥಳೀಯ ಆಯೋಜಕರು ಈ ಬಾರಿ ಸರಳ ಮಾದರಿಯ ಕ್ರೀಡಾಕೂಟ ಆಯೋಜಿಸಲು ತೀರ್ಮಾನಿಸಿದರು. ಇದರ ಪರಿಣಾಮವಾಗಿ ಬರ್ಮಿಂಗ್ಹ್ಯಾಮ್ 2022ರಲ್ಲಿ ಇದ್ದ 19 ಕ್ರೀಡೆಗಳ ಬದಲಿಗೆ ಕೇವಲ 10 ಕ್ರೀಡೆಗಳಿಗೆ ಮಾತ್ರ ಅವಕಾಶ ನೀಡಲಾಗಿದೆ.
ಕ್ರಿಕೆಟ್ ಮಾತ್ರವಲ್ಲದೆ ಹಾಕಿ, ಬ್ಯಾಡ್ಮಿಂಟನ್, ಟೇಬಲ್ ಟೆನಿಸ್, ಕುಸ್ತಿ ಹಾಗೂ ರಗ್ಬಿ ಸೆವೆನ್ಸ್ ಸೇರಿದಂತೆ ಹಲವು ಜನಪ್ರಿಯ ಕ್ರೀಡೆಗಳನ್ನೂ ಕೈಬಿಡಲಾಗಿದೆ. ಕ್ರಿಕೆಟ್ಗೆ ದೊಡ್ಡ ತಂಡಗಳು, ವಿಶೇಷ ಮೈದಾನ, ಹುಲ್ಲಿನ ನಿರ್ವಹಣೆ ಹಾಗೂ ಪಿಚ್ ಸಿದ್ಧತೆಗೆ ಹೆಚ್ಚಿನ ವೆಚ್ಚವಾಗುವುದರಿಂದ ಅದನ್ನು ಕೈಬಿಡಲಾಗಿದೆ ಎಂದು ಆಯೋಜಕರು ತಿಳಿಸಿದ್ದಾರೆ.
2026ರ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಈಗಾಗಲೇ ಲಭ್ಯವಿರುವ ಒಳಾಂಗಣ ಕ್ರೀಡಾಂಗಣಗಳು ಮತ್ತು ಅಥ್ಲೆಟಿಕ್ಸ್ ಸೌಲಭ್ಯಗಳನ್ನು ಹೆಚ್ಚು ಬಳಸಿಕೊಂಡು ವೆಚ್ಚವನ್ನು ಕಡಿಮೆ ಮಾಡುವ ಉದ್ದೇಶದಿಂದ ಕ್ರೀಡೆಗಳ ಆಯ್ಕೆ ಮಾಡಲಾಗಿದೆ. ಹೀಗಾಗಿ ಈ ಬಾರಿ ಕ್ರಿಕೆಟ್ ಅಭಿಮಾನಿಗಳು ಕಾಮನ್ವೆಲ್ತ್ ವೇದಿಕೆಯಲ್ಲಿ ತಮ್ಮ ನೆಚ್ಚಿನ ಕ್ರೀಡೆಯನ್ನು ನೋಡುವ ಅವಕಾಶದಿಂದ ವಂಚಿತರಾಗಲಿದ್ದಾರೆ.



