ರಾಜ್ಯ

ಬಿಸಿಯೂಟ ಸಿಬ್ಬಂದಿಗೆ ಕನಿಷ್ಠ ವೇತನ ಜಾರಿಗೊಳಿಸಲು ಆಗ್ರಹ

25 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಸಿಬ್ಬಂದಿಗೆ ಸಾಮಾಜಿಕ ಭದ್ರತೆ ಕಲ್ಪಿಸಲು ಒತ್ತಾಯ • ನಿವೃತ್ತಿ ಸೌಲಭ್ಯ, ವಿಮೆ ಹಾಗೂ ವೇತನ ಹೆಚ್ಚಳಕ್ಕೆ ಸರ್ಕಾರಕ್ಕೆ ಮನವಿ

ರಾಜ್ಯದ ಬಿಸಿಯೂಟ ಯೋಜನೆಯ ಸಿಬ್ಬಂದಿಗೆ ಕನಿಷ್ಠ ವೇತನ ಜಾರಿಗೊಳಿಸಿ, ಕಾರ್ಮಿಕರಾಗಿ ಪರಿಗಣಿಸಿ ಎಲ್ಲಾ ಸಾಮಾಜಿಕ ಭದ್ರತಾ ಸೌಲಭ್ಯಗಳನ್ನು ಒದಗಿಸಬೇಕು ಎಂದು ಕರ್ನಾಟಕ ರಾಜ್ಯ ಅಕ್ಷರ ದಾಸೋಹ ಬಿಸಿಯೂಟ ತಯಾರಕರ ಫೆಡರೇಷನ್ ರಾಜ್ಯಾಧ್ಯಕ್ಷ ಅವರೆಗೆ ಚಂದ್ರು ಆಗ್ರಹಿಸಿದರು.

ನಗರದ ಪತ್ರಿಕಾ ಭವನದಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ 25 ವರ್ಷಗಳಿಂದ ರಾಜ್ಯದ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ಬಿಸಿಯೂಟ ಯೋಜನೆಯಡಿ ಸೇವೆ ಸಲ್ಲಿಸುತ್ತಿರುವ ಸಿಬ್ಬಂದಿಗೆ ಯಾವುದೇ ಸಾಮಾಜಿಕ ಭದ್ರತೆ ಇಲ್ಲದಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಪ್ರಸ್ತುತ ಮುಖ್ಯ ಅಡುಗೆಯವರಿಗೆ ತಿಂಗಳಿಗೆ ₹4,700 ಹಾಗೂ ಸಹಾಯಕ ಅಡುಗೆಯವರಿಗೆ ₹4,600 ಮಾತ್ರ ಗೌರವಧನ ನೀಡಲಾಗುತ್ತಿದೆ. ಈ ಮೊತ್ತದಲ್ಲಿ ಜೀವನ ನಿರ್ವಹಣೆ ಕಷ್ಟಕರವಾಗಿದ್ದು, ಸರ್ಕಾರ ಕನಿಷ್ಠ ವೇತನ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.

ರಾಜ್ಯದಲ್ಲಿ ಸುಮಾರು 1.15 ಲಕ್ಷ ಬಿಸಿಯೂಟ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದು, ಅವರನ್ನು “ಸ್ಕೀಮ್ ವರ್ಕರ್ಸ್” ಎನ್ನುವ ಬದಲು ಕಾರ್ಮಿಕರಾಗಿ ಗುರುತಿಸಿ ಕನಿಷ್ಠ ವೇತನದ ವ್ಯಾಪ್ತಿಗೆ ತರಬೇಕು ಎಂದು ಆಗ್ರಹಿಸಿದರು. 2022-23ರಿಂದ ನಿವೃತ್ತರಾದ ಸಿಬ್ಬಂದಿಗೆ ಬಾಕಿ ಇರುವ ನಿವೃತ್ತಿ ಸೌಲಭ್ಯಗಳನ್ನು ಕೂಡಲೇ ಬಿಡುಗಡೆ ಮಾಡಬೇಕೆಂದು ಮನವಿ ಮಾಡಿದರು.

100ಕ್ಕೂ ಹೆಚ್ಚು ವಿದ್ಯಾರ್ಥಿಗಳಿರುವ ಶಾಲೆಗಳಲ್ಲಿ ಕೇವಲ ಇಬ್ಬರು ಅಡುಗೆ ಸಿಬ್ಬಂದಿಯಿಂದ ಕೆಲಸ ನಿರ್ವಹಿಸುವುದು ಕಷ್ಟವಾಗುತ್ತಿದೆ. ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಹೆಚ್ಚುವರಿ ಸಿಬ್ಬಂದಿಯನ್ನು ನೇಮಿಸಬೇಕು ಹಾಗೂ ಪ್ರತಿ ತಿಂಗಳ 5ನೇ ತಾರೀಖಿನೊಳಗೆ ವೇತನವನ್ನು ಬ್ಯಾಂಕ್ ಖಾತೆಗೆ ಜಮಾ ಮಾಡುವ ವ್ಯವಸ್ಥೆ ಜಾರಿಗೊಳಿಸಬೇಕು ಎಂದು ಹೇಳಿದರು.

ಸೇವೆಯಲ್ಲಿರುವಾಗ ಅಥವಾ ಕರ್ತವ್ಯದ ವೇಳೆ ಸಿಬ್ಬಂದಿ ಮೃತಪಟ್ಟರೆ ಅವರ ಕುಟುಂಬಕ್ಕೆ ₹20 ಲಕ್ಷ ಪರಿಹಾರ ನೀಡಬೇಕು ಹಾಗೂ ಕುಟುಂಬದ ಒಬ್ಬ ಸದಸ್ಯರಿಗೆ ಉದ್ಯೋಗ ನೀಡುವ ನೀತಿ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.

ಅಡುಗೆ ಕಾರ್ಯದ ವೇಳೆ ಅಪಘಾತ ಸಂಭವಿಸಿದರೆ ಸಂಪೂರ್ಣ ವೈದ್ಯಕೀಯ ವೆಚ್ಚವನ್ನು ಸರ್ಕಾರವೇ ಭರಿಸಬೇಕು. ಸಿಬ್ಬಂದಿಗೆ ಪ್ರತಿ ವರ್ಷ ಸಮವಸ್ತ್ರ, ಏಪ್ರನ್ ಹಾಗೂ ಅಗತ್ಯ ಸುರಕ್ಷತಾ ಪರಿಕರಗಳನ್ನು ಇಲಾಖೆಯಿಂದಲೇ ಉಚಿತವಾಗಿ ವಿತರಿಸಬೇಕು ಎಂದು ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಯಶೋಧಾ ರಾಠೋಡ್, ಕಾಂ. ಜೆ.ಜಿ. ಅಕ್ಕಮ್ಮ, ಸರೋಜಿನಿ ಹೀರಾಪೂರ, ಪ್ರಭುದೇವ ಯಳಸಂಗಿ, ಶಿಲ್ಪಾ ಕಾಂಬಳೆ, ಅನಿತಾ ಸೋಂಟ್ ಸೇರಿದಂತೆ ಫೆಡರೇಷನ್‌ನ ಪದಾಧಿಕಾರಿಗಳು ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button