ಸಾಂಸ್ಕೃತಿಕ

ಕಲ್ಯಾಣ ಕರ್ನಾಟಕ ಸಾಂಸ್ಕೃತಿಕವಾಗಿ ಸಮೃದ್ಧ ನಾಡು: ಬಸವರಾಜ ಹೂಗಾರ

ಸಾಧಕರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹನಿಪಾ ಎಂ. ಶೇಖ್ ಅವರ ಸಾಧನೆಗೆ ಮೆಚ್ಚುಗೆ; ಕಲಾವಿದರಿಗೆ ಹೆಚ್ಚಿನ ಪ್ರೋತ್ಸಾಹದ ಅಗತ್ಯವಿದೆ ಎಂದ ಜಂಟಿ ನಿರ್ದೇಶಕರು

ಕಲಬುರಗಿ, ಜು.10: ಕಲ್ಯಾಣ ಕರ್ನಾಟಕವು ಕರ್ನಾಟಕದ ಸಾಂಸ್ಕೃತಿಕ ಪರಂಪರೆಯನ್ನು ಗಟ್ಟಿಯಾಗಿ ಉಳಿಸಿಕೊಂಡಿರುವ ಸಮೃದ್ಧ ನಾಡಾಗಿದ್ದು, ಸಾಹಿತ್ಯ, ಸಂಗೀತ, ತತ್ವಪದ ಹಾಗೂ ಶರಣ ಸಂಸ್ಕೃತಿಯಲ್ಲಿ ಈ ಭಾಗದ ಕೊಡುಗೆ ಅಪಾರವಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಲಬುರಗಿ ವಿಭಾಗದ ಜಂಟಿ ನಿರ್ದೇಶಕ ಬಸವರಾಜ ಹೂಗಾರ ಹೇಳಿದರು.

ನಗರದ ರಂಗಾಯಣ ಅಡಿಟೋರಿಯಂನ ಶ್ರೀ ಸಿದ್ದಯ್ಯ ಪುರಾಣಿಕ ಸುವರ್ಣ ಸಾಂಸ್ಕೃತಿಕ ಭವನದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯೋಜಿಸಿದ್ದ ‘ಸಾಧಕರೊಂದಿಗೆ ಸಂವಾದ’ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, ಕಲ್ಯಾಣ ಕರ್ನಾಟಕ ಯಾವುದೇ ಕ್ಷೇತ್ರದಲ್ಲೂ ಹಿಂದುಳಿದಿಲ್ಲ. ಈ ನೆಲ ಅನೇಕ ತತ್ವಪದಕಾರರು, ವಚನಕಾರರು, ದಾಸರು ಹಾಗೂ ಶರಣರನ್ನು ದೇಶಕ್ಕೆ ನೀಡಿದ್ದು, ಅವರ ಕೊಡುಗೆ ಅನನ್ಯವಾಗಿದೆ ಎಂದು ಹೇಳಿದರು.

ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹನಿಪಾ ಎಂ. ಶೇಖ್ ಅವರು ಈ ಭಾಗದ ಶ್ರೇಷ್ಠ ಸಾಧಕಿಯರಲ್ಲಿ ಒಬ್ಬರಾಗಿದ್ದು, ಸಂಪ್ರದಾಯಬದ್ಧ ಕುಟುಂಬದಿಂದ ಬಂದಿದ್ದರೂ ತತ್ವಪದಗಳ ಮೂಲಕ ವಿಶಿಷ್ಟ ಸಾಧನೆ ಮಾಡಿದ್ದಾರೆ. ಬೆಂಗಳೂರಿನಂತಹ ನಗರದಲ್ಲಿ ಅವಕಾಶ ದೊರೆತಿದ್ದರೆ ಇನ್ನಷ್ಟು ಎತ್ತರಕ್ಕೆ ಬೆಳೆಯಬಹುದಾಗಿತ್ತು. ಕಲ್ಯಾಣ ಕರ್ನಾಟಕದ ಕಲಾವಿದರಿಗೆ ಇನ್ನೂ ಹೆಚ್ಚಿನ ಪ್ರೋತ್ಸಾಹ ಮತ್ತು ಅವಕಾಶಗಳು ದೊರೆಯಬೇಕಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ಮಾತನಾಡಿದ ಹನಿಪಾ ಎಂ. ಶೇಖ್ ಅವರು ತಮ್ಮ ಜೀವನದ ಅನುಭವಗಳು, ಎದುರಿಸಿದ ಸವಾಲುಗಳು, ಸಮಾಜದಿಂದ ಹಾಗೂ ಮಠ-ಮಾನ್ಯಗಳಿಂದ ದೊರೆತ ಪ್ರೋತ್ಸಾಹದ ಬಗ್ಗೆ ಮನಮುಟ್ಟುವಂತೆ ಹಂಚಿಕೊಂಡರು. ತಮಗೆ ದೊರೆತ ಪ್ರಶಸ್ತಿಗಳು ಮತ್ತು ಗೌರವಗಳಿಗೆ ಈ ಭಾಗದ ಜನರ ಬೆಂಬಲವೇ ಪ್ರಮುಖ ಕಾರಣವಾಗಿದೆ ಎಂದು ಕೃತಜ್ಞತೆ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಪನಿರ್ದೇಶಕಿ ಜಗದೀಶ್ವರಿ ನಾಸಿ, ಕಲಬುರಗಿ ರಂಗಾಯಣ ನಿರ್ದೇಶಕಿ ಡಾ. ಸುಜಾತಾ ಜಂಗಮಶೆಟ್ಟಿ, ರಂಗಾಯಣ ಆಡಳಿತಾಧಿಕಾರಿ ಸಿದ್ರಾಮ ಸಿಂಧೆ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

ರಾಜ್ಯೋತ್ಸವ ಪ್ರಶಸ್ತಿ ವಿಜೇತ ಡಾ. ಸಿದ್ರಾಮಪ್ಪ ಪೊಲೀಸ್ ಪಾಟೀಲ್, ಬಾಬುರಾವ್ ಕೋಬಾಳ್, ಗಿರಿಜಾ ಕರಪುರ, ಶಿವಶರಣಯ್ಯ ನಿಂಗದಳ್ಳಿ, ವಿಶ್ವನಾಥ ತೋಟ್ನಳ್ಳಿ, ಶೇಖರ್ ಕಟ್ಟಿ, ಅಪ್ಪಾರಾಯ ಪೂಜಾರಿ, ಸಂಜು ಬರಗಾಲಿ, ಮಾಳಪ್ಪ ಪೂಜಾರಿ, ಅಲ್ಲಾವೋದ್ದಿನ್ ಶೇಖ್ ಸೇರಿದಂತೆ ಅನೇಕ ಸಾಹಿತಿಗಳು, ಕಲಾವಿದರು ಹಾಗೂ ಇಲಾಖೆಯ ಸಿಬ್ಬಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಕಾರ್ಯಕ್ರಮದ ಆರಂಭದಲ್ಲಿ ಸಂಗಮೇಶ ನೀಲಾ ಅವರಿಂದ ಸಂಗೀತ ಕಾರ್ಯಕ್ರಮ ನಡೆಯಿತು.

Related Articles

Leave a Reply

Your email address will not be published. Required fields are marked *

Back to top button