ಸರ್ಕಾರಿ ಬಸ್ ಡಿಕ್ಕಿ: ಬೈಕ್ನಲ್ಲಿದ್ದ ಚಿಕ್ಕಮ್ಮ-ಸೋದರ ಮಗ ದುರ್ಮರಣ
ಔಷಧಿ ಪಡೆದು ಮನೆಗೆ ಮರಳುವ ವೇಳೆ ಭೀಕರ ಅಪಘಾತ; ಇಬ್ಬರೂ ಸ್ಥಳದಲ್ಲೇ ಮೃತ್ಯು

ಜಿಲ್ಲೆಯ ಹುಮನಾಬಾದ್ ತಾಲ್ಲೂಕಿನ ಕಬೀರಾಬಾದ್ ವಾಡಿ ಕ್ರಾಸ್ ಸಮೀಪ ಸರ್ಕಾರಿ ಬಸ್ ಬೈಕ್ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ನಲ್ಲಿದ್ದ ಚಿಕ್ಕಮ್ಮ ಹಾಗೂ ಸೋದರ ಮಗ ಮೃತಪಟ್ಟಿರುವ ದುರ್ಘಟನೆ ನಡೆದಿದೆ.
ಮೃತರನ್ನು ದುಬಳಗುಂಡಿ ಗ್ರಾಮದ ಪವನ್ (22) ಹಾಗೂ ಅವರ ಚಿಕ್ಕಮ್ಮ ನರಸಮ್ಮ ಎಂದು ಗುರುತಿಸಲಾಗಿದೆ. ಅಪಘಾತದ ತೀವ್ರತೆಗೆ ಪವನ್ ಅವರ ತಲೆಗೆ ಗಂಭೀರ ಗಾಯಗಳಾಗಿದ್ದು, ಹಿಂಬದಿಯಲ್ಲಿ ಕುಳಿತಿದ್ದ ನರಸಮ್ಮ ಕೂಡ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಕಾಮಾಲೆ ರೋಗಕ್ಕೆ ಔಷಧಿ ಪಡೆದುಕೊಳ್ಳಲು ಮನನಖೇಳ್ಳಿ ಗ್ರಾಮಕ್ಕೆ ತೆರಳಿದ್ದ ಇಬ್ಬರೂ ಚಿಕಿತ್ಸೆ ಪಡೆದು ವಾಪಸ್ಸಾಗುತ್ತಿದ್ದ ವೇಳೆ ಬೀದರ್–ಕಲಬುರಗಿ ಮಾರ್ಗದಲ್ಲಿ ಸಂಚರಿಸುತ್ತಿದ್ದ ಸರ್ಕಾರಿ ಬಸ್ ಬೈಕ್ಗೆ ಡಿಕ್ಕಿ ಹೊಡೆದಿದೆ ಎಂದು ತಿಳಿದುಬಂದಿದೆ.
ಅಪಘಾತದ ಬಳಿಕ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಹಳ್ಳಿಖೇಡ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.



