ಕಾನೂನು

ಪಿಎಸ್‌ಐ ವಿರುದ್ಧ ಕಿರುಕುಳದ ಆರೋಪ: ನ್ಯಾಯಸಮ್ಮತ ತನಿಖೆಗೆ ರೈತನ ಆಗ್ರಹ

ಜಮೀನು ವಿವಾದ ಪ್ರಕರಣದಲ್ಲಿ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡಿರುವ ಆರೋಪ; ಮೇಲಧಿಕಾರಿಗಳ ಮಧ್ಯಸ್ಥಿಕೆಗೆ ಮನವಿ

ಜಮೀನು ವಿವಾದಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಮಹಾಗಾಂವ್ ಪೊಲೀಸ್ ಠಾಣೆಯ ಪಿಎಸ್‌ಐ ಆಶಾ ಅವರ ವಿರುದ್ಧ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡಿರುವ ಗಂಭೀರ ಆರೋಪವನ್ನು ಮಹಾಗಾಂವ್ ತಾಂಡಾದ ರೈತ ತಾರಾಚಂದ್ ತಂದೆ ಸೋಮಲಾ ರಾಠೋಡ್ ಮಾಡಿದ್ದಾರೆ. ನಗರದಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಮ್ಮ ದೂರಿನ ಬಗ್ಗೆ ನ್ಯಾಯಯುತವಾಗಿ ಕ್ರಮ ಕೈಗೊಳ್ಳುವ ಬದಲು ಪೊಲೀಸ್ ಅಧಿಕಾರಿಯೇ ಒತ್ತಡ ಹೇರುತ್ತಿದ್ದಾರೆ ಎಂದು ಆರೋಪಿಸಿದರು.

ತಾರಾಚಂದ್ ಅವರ ಹೇಳಿಕೆಯ ಪ್ರಕಾರ, ಸರ್ವೆ ನಂ. 311/4ರಲ್ಲಿ ಒಂದು ಎಕರೆ ಜಮೀನಿನ ಮಾಲೀಕರಾಗಿದ್ದು, ಹಲವು ವರ್ಷಗಳಿಂದ ಆ ಜಮೀನಿನಲ್ಲಿ ಕೃಷಿ ಮಾಡಿಕೊಂಡು ಬರುತ್ತಿದ್ದಾರೆ. ಆದರೆ ಕೆಲವರು ತಮ್ಮ ಜಮೀನಿಗೆ ಅಕ್ರಮವಾಗಿ ಪ್ರವೇಶಿಸಿ, ಜೀವ ಬೆದರಿಕೆ ಹಾಕಿ ತಮ್ಮನ್ನು ಹೊರಹಾಕಲು ಯತ್ನಿಸಿದ್ದಾರೆ ಎಂದು ಆರೋಪಿಸಿದರು.

ಈ ಸಂಬಂಧ ನ್ಯಾಯಾಲಯದಲ್ಲಿ 2024ರಲ್ಲಿ ಸಿವಿಲ್ ದಾವೆ ದಾಖಲಿಸಿದ್ದು, ನ್ಯಾಯಾಲಯವು ಮಧ್ಯಂತರ ತಡೆಯಾಜ್ಞೆಯನ್ನೂ ನೀಡಿದೆ ಎಂದು ಅವರು ತಿಳಿಸಿದರು. ಆದರೂ 2024ರ ಡಿಸೆಂಬರ್ 8ರಂದು ಜಮೀನಿಗೆ ತೆರಳಿದ್ದ ವೇಳೆ ಎದುರಾಳಿ ಪಕ್ಷದವರು ಕೋಲು, ಕೊಡಲಿ ಹಾಗೂ ಇತರೆ ಆಯುಧಗಳೊಂದಿಗೆ ಹಲ್ಲೆ ನಡೆಸಿದ್ದಾರೆ. ಈ ವೇಳೆ ತಲೆಗೆ ಗಂಭೀರ ಗಾಯವಾಗಿದ್ದು, ಬಳಿಕ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ವಿವರಿಸಿದರು.

ಘಟನೆ ಕುರಿತು ಮಹಾಗಾಂವ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಚಿಕಿತ್ಸೆ ಪಡೆದು ಲಿಖಿತ ದೂರು ಸಹ ಸಲ್ಲಿಸಲಾಗಿದೆ. ಆದರೆ ತನಿಖೆಯ ಹೆಸರಿನಲ್ಲಿ ಪಿಎಸ್‌ಐ ಆಶಾ ಅವರು ಪ್ರಕರಣವನ್ನು ಹಿಂಪಡೆಯುವಂತೆ ಒತ್ತಡ ಹೇರಿದ್ದು, ರಾಜಿ ಮಾಡಿಕೊಳ್ಳುವಂತೆ ಒತ್ತಾಯಿಸಿದ್ದಾರೆ ಎಂದು ತಾರಾಚಂದ್ ಆರೋಪಿಸಿದರು. ದೂರು ಹಿಂಪಡೆಯದಿದ್ದರೆ ಸುಳ್ಳು ಪ್ರಕರಣ ದಾಖಲಿಸುವುದಾಗಿ ಬೆದರಿಕೆ ಹಾಕಲಾಗಿದೆ ಎಂದೂ ಅವರು ಹೇಳಿದರು.

ಈ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಡಿಐಜಿ, ಐಜಿಪಿ ಹಾಗೂ ರಾಜ್ಯ ಪೊಲೀಸ್ ದೂರು ಪ್ರಾಧಿಕಾರಕ್ಕೂ ದೂರು ಸಲ್ಲಿಸಲಾಗಿದೆ. ಆದರೂ ಇದುವರೆಗೆ ಯಾವುದೇ ಕ್ರಮ ಕೈಗೊಳ್ಳದಿರುವುದಕ್ಕೆ ಅವರು ಅಸಮಾಧಾನ ವ್ಯಕ್ತಪಡಿಸಿದರು.

ಪಿಎಸ್‌ಐ ತಮ್ಮ ಮೊಬೈಲ್‌ಗೆ ಕರೆ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದು, ಜೀವ ಬೆದರಿಕೆಯನ್ನೂ ಹಾಕಿದ್ದಾರೆ ಎಂದು ಆರೋಪಿಸಿದ ತಾರಾಚಂದ್, ಈ ಸಂಬಂಧದ ಕರೆಗಳ ದಾಖಲೆ ತಮ್ಮ ಬಳಿ ಇರುವುದಾಗಿ ತಿಳಿಸಿದರು. ಪ್ರಕರಣದ ಬಗ್ಗೆ ಸಮಗ್ರ ಹಾಗೂ ನಿಷ್ಪಕ್ಷಪಾತ ತನಿಖೆ ನಡೆಸಿ, ಸಂಬಂಧಪಟ್ಟ ಅಧಿಕಾರಿಯ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ಜೊತೆಗೆ ತಮ್ಮ ಹಾಗೂ ತಮ್ಮ ಕುಟುಂಬದ ಸುರಕ್ಷತೆಗೆ ಅಗತ್ಯ ರಕ್ಷಣೆ ಒದಗಿಸಬೇಕು ಎಂದು ಅವರು ಸರ್ಕಾರ ಮತ್ತು ಪೊಲೀಸ್ ಇಲಾಖೆಗೆ ಮನವಿ ಮಾಡಿದರು.

Related Articles

Leave a Reply

Your email address will not be published. Required fields are marked *

Back to top button