ಸಾಂಸ್ಕೃತಿಕ

ವಚನ ಸಂಗೀತದಿಂದ ಮಾನವೀಯ ಮೌಲ್ಯಗಳ ವೃದ್ಧಿ: ಸತ್ಯಂಪೇಟೆ

ವಚನ ಗಾಯನ ಕನ್ನಡ ಸಾಹಿತ್ಯ, ಸಂಸ್ಕೃತಿ ಮತ್ತು ಆಧ್ಯಾತ್ಮಿಕ ಮೌಲ್ಯಗಳ ಪ್ರತಿಬಿಂಬ ಎಂದು ಅಭಿಪ್ರಾಯ

ಸಂಗೀತವು ಕೇವಲ ಮನರಂಜನೆಯ ಸಾಧನವಲ್ಲ. ಅದು ದೈಹಿಕ ಹಾಗೂ ಮಾನಸಿಕ ಆರೋಗ್ಯಕ್ಕೆ ದಿವ್ಯೌಷಧಿಯಂತೆ ಕಾರ್ಯನಿರ್ವಹಿಸುವುದರ ಜೊತೆಗೆ ಮಾನವೀಯ ಮೌಲ್ಯಗಳನ್ನು ಬೆಳೆಸುವ ಶಕ್ತಿಯಾಗಿದೆ ಎಂದು ಪತ್ರಕರ್ತ ಹಾಗೂ ಲೇಖಕ ಡಾ. ಶಿವರಂಜನ್ ಸತ್ಯಂಪೇಟೆ ಹೇಳಿದರು.

ನಗರದ ಮರಾಠ ಮಹಾ ಮಂಡಳದಲ್ಲಿ ಪಂಡಿತ ಡಿ.ವಿ. ಪಲುಸ್ಕರ್ ಸಂಗೀತ ಸಾಹಿತ್ಯ ಕಲಾ ಸಂಘ ಹಾಗೂ ದೇವೀಂದ್ರಪ್ಪ ಜಿ.ಸಿ. ಸಂಗೀತ ಸಾಹಿತ್ಯ ಕಲಾ ಸಂಸ್ಥೆ ವತಿಯಿಂದ ಆಯೋಜಿಸಿದ್ದ ವಚನ ಗಾಯನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ವಚನ ಗಾಯನ ಸ್ಪರ್ಧೆಗಳು ಕನ್ನಡ ಸಾಹಿತ್ಯ, ಸಂಸ್ಕೃತಿ ಹಾಗೂ ಆಧ್ಯಾತ್ಮಿಕ ಮೌಲ್ಯಗಳನ್ನು ಪ್ರತಿಬಿಂಬಿಸುವ ಉತ್ತಮ ವೇದಿಕೆಯಾಗಿವೆ. ಸಂಗೀತವು ಒತ್ತಡವನ್ನು ಕಡಿಮೆ ಮಾಡಿ ಮನಸ್ಸಿಗೆ ನೆಮ್ಮದಿ ನೀಡುವುದರ ಜೊತೆಗೆ ಏಕಾಗ್ರತೆಯನ್ನು ಹೆಚ್ಚಿಸುತ್ತದೆ ಎಂದು ಹೇಳಿದರು.

ವಚನಗಳು, ದಾಸ ಸಾಹಿತ್ಯ ಹಾಗೂ ತತ್ವಪದಗಳಲ್ಲಿರುವ ಜೀವನ ಮೌಲ್ಯಗಳನ್ನು ಸಮಾಜದ ಪ್ರತಿಯೊಬ್ಬರಿಗೂ ತಲುಪಿಸುವ ಕಾರ್ಯ ನಿರಂತರವಾಗಿ ನಡೆಯಬೇಕು. ಇಂತಹ ಕಾರ್ಯಕ್ರಮಗಳು ಯುವಜನರಲ್ಲಿ ಸಾಹಿತ್ಯ ಮತ್ತು ಸಂಸ್ಕೃತಿಯ ಬಗ್ಗೆ ಆಸಕ್ತಿ ಬೆಳೆಸಲು ಸಹಕಾರಿಯಾಗುತ್ತವೆ ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ನಿವೃತ್ತ ಪ್ರಾಧ್ಯಾಪಕ ಪ್ರೊ. ಎಸ್.ಎಲ್. ಪಾಟೀಲ ಮಾತನಾಡಿದರು. ಹಂಪಿ ಕನ್ನಡ ವಿಶ್ವವಿದ್ಯಾಲಯದ ಸಂಗೀತ ವಿಭಾಗದ ಅತಿಥಿ ಉಪನ್ಯಾಸಕ ಡಾ. ತಿಮ್ಮಣ್ಣ ಭಜಂತ್ರಿ, ದೇವೀಂದ್ರಪ್ಪ ಜಿ.ಸಿ. ಸಂಗೀತ ಸಾಹಿತ್ಯ ಕಲಾ ಸಂಸ್ಥೆಯ ಅಧ್ಯಕ್ಷ ಸಿದ್ಧಾರ್ಥ ಚಿಮ್ಮಾಯಿದಲಾಯಿ ಹಾಗೂ ಪಂಡಿತ ಡಿ.ವಿ. ಪಲುಸ್ಕರ್ ಸಂಗೀತ ಸಾಹಿತ್ಯ ಕಲಾ ಸಂಘದ ಅಧ್ಯಕ್ಷ ಡಾ. ನಾಗರಾಜ ಪುರಂಕರ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಶ್ರೀಧರ ಹೊಸಮನಿ ಕಾರ್ಯಕ್ರಮ ನಿರೂಪಿಸಿದರು. ಸಿದ್ಧರಾಮ ಹೊಂಕಲ್, ಸಂತೋಷಕುಮಾರ ಕಾಮಶೆಟ್ಟಿ, ದೇವರಾಜ ತೀರ್ಥಪ್ಪ, ಡಾ. ಕೆ.ಎಸ್. ಬಂಧು, ಪಾಲಕರು ಹಾಗೂ ಸ್ಪರ್ಧಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Related Articles

Leave a Reply

Your email address will not be published. Required fields are marked *

Back to top button