ಸ್ಥಳೀಯ ಕಬ್ಬು ಕಟಾವು ಯಂತ್ರಗಳಿಗೆ ಆದ್ಯತೆ ನೀಡುವಂತೆ ಪ್ರತಿಭಟನೆ
ಹೊರ ಜಿಲ್ಲೆಗಳ ಯಂತ್ರಗಳಿಗೆ ಅವಕಾಶದಿಂದ ಸ್ಥಳೀಯ ಮಾಲೀಕರಿಗೆ ಸಂಕಷ್ಟ; ಜಿಲ್ಲಾಡಳಿತಕ್ಕೆ ಮನವಿ

ಸ್ಥಳೀಯ ಕಬ್ಬು ಕಟಾವು ಯಂತ್ರಗಳಿಗೆ ಮೊದಲ ಆದ್ಯತೆ ನೀಡಬೇಕು ಎಂದು ಒತ್ತಾಯಿಸಿ ಜಿಲ್ಲಾ ಕಬ್ಬು ಕಟಾವು ಯಂತ್ರಗಳ ಮಾಲೀಕರ ಸಂಘದ ಪದಾಧಿಕಾರಿಗಳು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಸಂಘದ ಜಿಲ್ಲಾಧ್ಯಕ್ಷ ಶಾಂತಗೌಡ ಕೆ. ಪಾಟೀಲ ಅವರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಭೀಮಾಶಂಕರ ಎಸ್. ಪಾಟೀಲ, ಬಾಬುಗೌಡ ಎಸ್. ಬಿರಾದಾರ ಸೇರಿದಂತೆ ಹಲವರು ಭಾಗವಹಿಸಿದರು.
ಬಳಿಕ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದ ಪ್ರತಿಭಟನಾಕಾರರು, ಕಬ್ಬು ಕಟಾವು ಹಂಗಾಮಿನ ಸಂದರ್ಭದಲ್ಲಿ ಹೊರ ರಾಜ್ಯಗಳು ಹಾಗೂ ಇತರೆ ಜಿಲ್ಲೆಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಕಬ್ಬು ಕಟಾವು ಯಂತ್ರಗಳು ಬರುತ್ತಿದ್ದು, ಅವುಗಳಿಗೆ ಆದ್ಯತೆ ನೀಡಲಾಗುತ್ತಿದೆ. ಇದರಿಂದ ಸ್ಥಳೀಯವಾಗಿ ಯಂತ್ರಗಳನ್ನು ಖರೀದಿಸಿ ಸಾಲ ಮಾಡಿ ಜೀವನ ನಡೆಸುತ್ತಿರುವ ಮಾಲೀಕರಿಗೆ ಕೆಲಸದ ಕೊರತೆ ಉಂಟಾಗುತ್ತಿದೆ ಎಂದು ದೂರಿದರು.
ಕೆಲಸದ ಅಭಾವದಿಂದ ಯಂತ್ರಗಳ ನಿರ್ವಹಣೆ, ಸಾಲ ಮರುಪಾವತಿ ಹಾಗೂ ಕಾರ್ಮಿಕರ ವೇತನ ಪಾವತಿಯಲ್ಲಿ ತೀವ್ರ ಆರ್ಥಿಕ ಸಂಕಷ್ಟ ಎದುರಾಗುತ್ತಿದೆ. ಆದ್ದರಿಂದ ಜಿಲ್ಲೆಯ ರೈತರ ಹಿತಾಸಕ್ತಿ ಹಾಗೂ ಸ್ಥಳೀಯ ಯಂತ್ರ ಮಾಲೀಕರ ಬದುಕನ್ನು ಗಮನದಲ್ಲಿಟ್ಟುಕೊಂಡು ಮೊದಲ ಆದ್ಯತೆಯನ್ನು ಕಲಬುರಗಿ ಜಿಲ್ಲೆಯ ಸ್ಥಳೀಯ ಕಬ್ಬು ಕಟಾವು ಯಂತ್ರಗಳಿಗೆ ನೀಡಬೇಕು ಎಂದು ಆಗ್ರಹಿಸಿದರು.
ಸ್ಥಳೀಯ ಯಂತ್ರಗಳು ಲಭ್ಯವಿರುವವರೆಗೆ ಹೊರ ರಾಜ್ಯ ಹಾಗೂ ಇತರೆ ಜಿಲ್ಲೆಗಳ ಯಂತ್ರಗಳಿಗೆ ಅನುಮತಿ ನೀಡಬಾರದು. ಈ ಕುರಿತು ಅಗತ್ಯ ಆದೇಶ ಹೊರಡಿಸಿ ಜಾರಿಗೆ ತರಬೇಕು ಎಂದು ಮನವಿಯಲ್ಲಿ ಒತ್ತಾಯಿಸಿದರು.
ಸ್ಥಳೀಯ ಯಂತ್ರ ಮಾಲೀಕರ ನ್ಯಾಯಸಮ್ಮತ ಬೇಡಿಕೆಯನ್ನು ಪರಿಗಣಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಜಿಲ್ಲಾಡಳಿತವನ್ನು ಪ್ರತಿಭಟನಾಕಾರರು ಆಗ್ರಹಿಸಿದರು.



