ಸಹಕಾರಿ ಸಂಘಗಳು ಸದಸ್ಯರ ಹಿತ ಕಾಪಾಡಬೇಕು: ಗುರುನಾಥ ಜ್ಯಾಂತಿಕರ್
ಸಹಕಾರ ಕ್ಷೇತ್ರದಲ್ಲಿ ಪಾರದರ್ಶಕತೆ, ವಿಶ್ವಾಸ ಮತ್ತು ಆರ್ಥಿಕ ಸ್ವಾವಲಂಬನೆಗೆ ಆದ್ಯತೆ ನೀಡುವಂತೆ ಕರೆ

ಬೀದರ್, ಜು.11: ಸಹಕಾರಿ ಸಂಘಗಳು ಸದಸ್ಯರ ಹಿತಾಸಕ್ತಿ ಹಾಗೂ ಆರ್ಥಿಕ ಅಭಿವೃದ್ಧಿಯನ್ನು ಪ್ರಮುಖ ಗುರಿಯಾಗಿಟ್ಟುಕೊಂಡು ಪಾರದರ್ಶಕವಾಗಿ ಕಾರ್ಯನಿರ್ವಹಿಸಬೇಕು ಎಂದು ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿಯ ರಾಜ್ಯ ನಿರ್ದೇಶಕ ಗುರುನಾಥ ಜ್ಯಾಂತಿಕರ್ ಹೇಳಿದರು.
ನಗರದ ಕಲ್ಯಾಣ ಪಟ್ಟಣದ ಸೌಹಾರ್ದ ಸಹಕಾರಿ ನಿಯಮಿತದ ಸಾಮರ್ಥ್ಯ ಸೌಧ ಸಭಾಂಗಣದಲ್ಲಿ ಶನಿವಾರ ನಡೆದ ಧರಿನಾಡು ಸೌಹಾರ್ದ ಸಹಕಾರಿ ಸಂಘ ನಿಯಮಿತ, ಬೀದರ್‌ನ 3ನೇ ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ಯುವಜನತೆ ಸಹಕಾರ ಕ್ಷೇತ್ರಕ್ಕಿಂತ ಷೇರು ಮಾರುಕಟ್ಟೆಯತ್ತ ಹೆಚ್ಚು ಒಲವು ತೋರುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಹೆಚ್ಚಿನ ಲಾಭದ ಆಸೆಯಿಂದ ಅನೇಕರು ತಮ್ಮ ಹಣ ಕಳೆದುಕೊಳ್ಳುತ್ತಿರುವುದು ದುಃಖದ ಸಂಗತಿ. ಸಹಕಾರಿ ಸಂಸ್ಥೆಗಳು ಜನರಲ್ಲಿ ವಿಶ್ವಾಸ ಮೂಡಿಸಿ ಸುರಕ್ಷಿತ ಉಳಿತಾಯ ಹಾಗೂ ಆರ್ಥಿಕ ಸ್ವಾವಲಂಬನೆಗೆ ಮಾರ್ಗದರ್ಶನ ನೀಡುವ ಜವಾಬ್ದಾರಿ ಹೊಂದಿವೆ ಎಂದು ಹೇಳಿದರು.
ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಕರ್ನಾಟಕ ರಾಜ್ಯ ಮಹಿಳಾ ಮಹಾಮಂಡಳದ ಅಧ್ಯಕ್ಷೆ ಶಕುಂತಲಾ ಬೆಳದಾಳೆ ಮಾತನಾಡಿ, ಸಹಕಾರ ಕ್ಷೇತ್ರವು ಸೇವಾ ಮನೋಭಾವದಿಂದ ಕಾರ್ಯನಿರ್ವಹಿಸುವ ಪವಿತ್ರ ವೇದಿಕೆಯಾಗಿದೆ. ವಿಶೇಷವಾಗಿ ಬಡವರು, ಶೋಷಿತರು ಹಾಗೂ ಸ್ವಸಹಾಯ ಸಂಘಗಳ ಮಹಿಳೆಯರ ಆರ್ಥಿಕ ಸಬಲೀಕರಣದಲ್ಲಿ ಸಹಕಾರಿ ಸಂಸ್ಥೆಗಳ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದು ತಿಳಿಸಿದರು.
ಹಿರಿಯ ಪತ್ರಕರ್ತ ಸದಾನಂದ ಜೋಶಿ ಮಾತನಾಡಿ, ಬೀದರ್ ಜಿಲ್ಲೆಗೆ ಸಹಕಾರ ಕ್ಷೇತ್ರದಲ್ಲಿ ವಿಶಿಷ್ಟ ಇತಿಹಾಸವಿದೆ. ಜಿಲ್ಲೆಯ ಸ್ವಸಹಾಯ ಸಂಘಗಳ ಕಾರ್ಯವೈಖರಿ ರಾಷ್ಟ್ರಮಟ್ಟದಲ್ಲಿ ಮಾದರಿಯಾಗಿದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಜಿಲ್ಲೆಯ ಕೆಲವು ಸಹಕಾರಿ ಸಕ್ಕರೆ ಕಾರ್ಖಾನೆಗಳು ನಷ್ಟಕ್ಕೊಳಗಾಗಿರುವುದು ಸಹಕಾರ ಚಳವಳಿಗೆ ಕಪ್ಪುಚುಕ್ಕೆ ತಂದಿದೆ ಎಂದು ವಿಷಾದ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ನಿವೃತ್ತ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಸಿ.ಎಸ್. ರಗಟೆ, ನಿವೃತ್ತ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ವಿ.ಜಿ. ರೆಡ್ಡಿ, ಹಿರಿಯ ಸಹಕಾರಿ ಮಹಾಲಿಂಗ ಸ್ವಾಮಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ಸಭೆಯ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಶಿವಶಂಕರ ಬೆಮಳಗಿ ವಹಿಸಿದ್ದರು. ವೀರಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಗೀತ ಮತ್ತು ಗೀತಾ ಪ್ರಾರ್ಥನೆ ನೆರವೇರಿತು. ರವಿಕುಮಾರ ಅರಗಲಿ ಸ್ವಾಗತಿಸಿದರು. ಪ್ರವೀಣ ಮಠ ಕಾರ್ಯಕ್ರಮ ನಿರೂಪಿಸಿದರು. ಅಮರ ಬಿರಾದರ್ ವಂದಿಸಿದರು. ಕಾರ್ಯಕ್ರಮದಲ್ಲಿ ಸಂಘದ ಉಪಾಧ್ಯಕ್ಷ ಕಲ್ಲಪ್ಪ ಸೋಲಪೂರೆ, ನಿರ್ದೇಶಕರಾದ ನಾಗರಾಜ ಮಠ, ಲೋಕೇಶ್ ಸಲಗರ, ಮಾಧವ ಲಾಡೆ, ಸತೀಶ ಧರಣೆ, ನಾಗಭೂಷಣ ರೆಡ್ಡಿ ಪ್ರಭುದೇವ, ಅಮೃತ ಹೊಸಮನಿ ಸೇರಿದಂತೆ ಸದಸ್ಯರು, ಸಿಬ್ಬಂದಿ ಹಾಗೂ ಗಣ್ಯರು ಭಾಗವಹಿಸಿದ್ದರು.



