ಕಾನೂನು

ಸುಳ್ಳು ಪ್ರಕರಣ ದಾಖಲಿಸಿ ಮಾನಹಾನಿ: ವೈದ್ಯಕೀಯ ಅಧೀಕ್ಷಕರ ವಿರುದ್ಧ ಕ್ರಮಕ್ಕೆ ಮನವಿ

ಆರೋಪಗಳು ದುರುದ್ದೇಶಪೂರಿತ, ಗೌರವಕ್ಕೆ ಧಕ್ಕೆ ತಂದಿವೆ ಎಂದು ಹನಮಂತ ಮಟ್ಟೆ ಆರೋಪ

ಬೀದರ್, ಜು.11: ತಮ್ಮ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಿ ಮಾನಹಾನಿ ಮಾಡಲಾಗಿದೆ ಎಂದು ಆರೋಪಿಸಿರುವ ಔರಾದ್ ತಾಲೂಕಿನ ಬಲೂರ್ (ಜೆ) ಗ್ರಾಮದ ಮೂಲ ನಿವಾಸಿ ಹಾಗೂ ಪ್ರಸ್ತುತ ನಿಜಾಂಪುರ ಗ್ರಾಮದಲ್ಲಿ ವಾಸವಾಗಿರುವ ಹನಮಂತ ತಂದೆ ಸಿದ್ರಾಮ ಮಟ್ಟೆ ಅವರು, ಬ್ರಿಮ್ಸ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಶಿವಯೋಗಿ ಬಾಳಿ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ನೂತನ ನಗರ ಪೊಲೀಸ್ ಠಾಣೆಯ ವೃತ್ತ ನಿರೀಕ್ಷಕರಿಗೆ ಶನಿವಾರ ಮನವಿ ಸಲ್ಲಿಸಿದ್ದಾರೆ.

ಡಾ. ಶಿವಯೋಗಿ ಬಾಳಿ ಅವರು ಜುಲೈ 9ರಂದು ರಾತ್ರಿ 9.30ಕ್ಕೆ ನೂತನ ನಗರ ಪೊಲೀಸ್ ಠಾಣೆಯಲ್ಲಿ ತಮ್ಮ ವಿರುದ್ಧ ಪ್ರಕರಣ ಸಂಖ್ಯೆ 125/2026 ದಾಖಲಿಸಿದ್ದು, ಅದರ ಕುರಿತು ಜುಲೈ 11ರಂದು ಸುದ್ದಿ ಪ್ರಕಟವಾಗಿದೆ ಎಂದು ಅವರು ತಿಳಿಸಿದ್ದಾರೆ. ತಮ್ಮ ವಿರುದ್ಧ ದಾಖಲಾಗಿರುವ ಆರೋಪಗಳು ಸಂಪೂರ್ಣ ಸುಳ್ಳು, ಆಧಾರರಹಿತ ಹಾಗೂ ದುರುದ್ದೇಶಪೂರಿತವಾಗಿದ್ದು, ಯಾವುದೇ ಸತ್ಯಾಂಶ ಹೊಂದಿಲ್ಲ ಎಂದು ಹನಮಂತ ಮಟ್ಟೆ ಆರೋಪಿಸಿದ್ದಾರೆ.

ವೈಯಕ್ತಿಕ ದ್ವೇಷ ಹಾಗೂ ತಮ್ಮ ಗೌರವಕ್ಕೆ ಧಕ್ಕೆ ತರುವ ಉದ್ದೇಶದಿಂದಲೇ ಈ ಪ್ರಕರಣ ದಾಖಲಿಸಲಾಗಿದೆ ಎಂದು ಆರೋಪಿಸಿರುವ ಅವರು, ಇದರಿಂದ ತಮ್ಮ ಕುಟುಂಬ ಹಾಗೂ ಸಮಾಜದಲ್ಲಿ ತಮ್ಮ ಪ್ರತಿಷ್ಠೆಗೆ ಗಂಭೀರ ಹಾನಿಯಾಗಿದ್ದು, ಮಾನಸಿಕ ಮತ್ತು ಸಾಮಾಜಿಕವಾಗಿ ತೀವ್ರ ತೊಂದರೆ ಅನುಭವಿಸುವಂತಾಗಿದೆ ಎಂದು ದೂರಿದ್ದಾರೆ.

ಭಾರತೀಯ ಕಾನೂನುಗಳ ಅನ್ವಯ ಮಾನಹಾನಿಗೆ ಸಂಬಂಧಿಸಿದಂತೆ ಡಾ. ಶಿವಯೋಗಿ ಬಾಳಿ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಿ ನ್ಯಾಯ ಒದಗಿಸಬೇಕೆಂದು ಅವರು ಪೊಲೀಸ್ ಇಲಾಖೆಗೆ ಸಲ್ಲಿಸಿರುವ ಮನವಿಯಲ್ಲಿ ಆಗ್ರಹಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button