ಕಲಬುರಗಿಯಲ್ಲಿ ವಿಶ್ವಕರ್ಮ ಸಮಾಜಕ್ಕೆ ಸಮುದಾಯ ಭವನಕ್ಕೆ ನಿವೇಶನ ಮಂಜೂರು
ಸರ್ಕಾರದ ಕ್ರಮಕ್ಕೆ ವಿಶ್ವಕರ್ಮ ಮಹಾ ಒಕ್ಕೂಟದ ಅಭಿನಂದನೆ; ಕೆ.ಪಿ. ನಂಜುಂಡಯ್ಯರಿಗೆ ವಿಧಾನ ಪರಿಷತ್ ನಾಮನಿರ್ದೇಶನಕ್ಕೆ ಒತ್ತಾಯ

ಕಲಬುರಗಿ, ಜು.11: ಕಲಬುರಗಿ ಜಿಲ್ಲಾ ಕೇಂದ್ರದಲ್ಲಿ ವಿಶ್ವಕರ್ಮ ಸಮಾಜದ ಸಾಂಸ್ಕೃತಿಕ ಹಾಗೂ ಸಾಮಾಜಿಕ ಚಟುವಟಿಕೆಗಳಿಗೆ ಸಮುದಾಯ ಭವನ ನಿರ್ಮಿಸಲು ಸರ್ಕಾರ ನಿವೇಶನ ಮಂಜೂರು ಮಾಡಿರುವುದಕ್ಕೆ ಕರ್ನಾಟಕ ವಿಶ್ವಕರ್ಮ ಮಹಾ ಒಕ್ಕೂಟದ ಅಧ್ಯಕ್ಷ ವಿಜಯಕುಮಾರ್ ಪಟ್ಟಾರ್ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉತ್ತರ ಕರ್ನಾಟಕದ ಪ್ರಮುಖ ಜಿಲ್ಲೆಯಾದ ಕಲಬುರಗಿಯ ವಿಶ್ವಕರ್ಮ ಸಮಾಜದ ಬಹುಕಾಲದ ಬೇಡಿಕೆಗೆ ಸ್ಪಂದಿಸಿ ರಾಜ್ಯ ಸರ್ಕಾರ ಸುಮಾರು 1.4 ಕೋಟಿ ರೂಪಾಯಿ ಮೌಲ್ಯದ ನಿವೇಶನವನ್ನು ಮಂಜೂರು ಮಾಡಿರುವುದು ಸಂತಸದ ವಿಚಾರ ಎಂದು ಹೇಳಿದರು.
ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದನೆಗೊಂಡಿರುವ ಕೋಟನೂರು-ಡಿ ಗ್ರಾಮದ ಸರ್ವೇ ನಂ.61/4ರಲ್ಲಿ 30 ವರ್ಷಗಳ ಅವಧಿಗೆ ಗುತ್ತಿಗೆ ಆಧಾರದ ಮೇಲೆ 1,344.22 ಚದರ ಮೀಟರ್ ವಿಸ್ತೀರ್ಣದ ಜಾಗವನ್ನು ಮಂಜೂರು ಮಾಡಲಾಗಿದೆ. ನಿವೇಶನದ ಹಂಚಿಕೆ ಮೌಲ್ಯದ ಶೇ.10ರ ದರವನ್ನು ನಿಗದಿಪಡಿಸಲಾಗಿದ್ದು, ಜೂನ್ 20ರಂದು ರಾಜ್ಯ ಸಚಿವ ಸಂಪುಟ ಇದಕ್ಕೆ ಅನುಮೋದನೆ ನೀಡಿದೆ ಎಂದು ವಿವರಿಸಿದರು.
ಸುಮಾರು ಎಂಟು ತಿಂಗಳ ಹಿಂದೆ ನಡೆದ ವಿಶ್ವಕರ್ಮ ಮಹಾ ಒಕ್ಕೂಟದ ಕಾರ್ಯಕ್ರಮದಲ್ಲಿ ಈ ಬೇಡಿಕೆಯನ್ನು ಸರ್ಕಾರದ ಮುಂದಿರಿಸಲಾಗಿತ್ತು. ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರ ಪ್ರಯತ್ನದಿಂದ ಈ ಬೇಡಿಕೆ ಈಡೇರಿದೆ ಎಂದು ಅವರು ಹೇಳಿದರು.
ರಾಜ್ಯದ ಹಿಂದುಳಿದ ವರ್ಗಗಳಲ್ಲಿ ವಿಶ್ವಕರ್ಮ ಸಮಾಜಕ್ಕೆ ಹೆಚ್ಚಿನ ಸಾಮಾಜಿಕ ಹಾಗೂ ಆರ್ಥಿಕ ಸೌಲಭ್ಯಗಳು ದೊರೆಯಬೇಕಿದ್ದು, ಇತರ ಜಿಲ್ಲೆಗಳಲ್ಲಿಯೂ ಸಮುದಾಯ ಭವನ ಹಾಗೂ ವಿದ್ಯಾರ್ಥಿ ವಸತಿ ನಿಲಯಗಳಂತಹ ಮೂಲಸೌಕರ್ಯಗಳನ್ನು ಒದಗಿಸಬೇಕು ಎಂದು ಒತ್ತಾಯಿಸಿದರು.
ವಿಶ್ವಕರ್ಮ ಅಭಿವೃದ್ಧಿ ನಿಗಮಕ್ಕೆ ರಾಜ್ಯ ಸರ್ಕಾರ ನೀಡುತ್ತಿರುವ 70 ಕೋಟಿ ರೂಪಾಯಿ ಅನುದಾನವನ್ನು 100 ಕೋಟಿಗೆ ಹೆಚ್ಚಿಸಬೇಕು. ಜೊತೆಗೆ ವಿಶ್ವಕರ್ಮ ಮಹಾಸಭೆ ಅಧ್ಯಕ್ಷ ಕೆ.ಪಿ. ನಂಜುಂಡಯ್ಯ ಅವರನ್ನು ರಾಜ್ಯ ವಿಧಾನ ಪರಿಷತ್ಗೆ ನಾಮನಿರ್ದೇಶನ ಮಾಡಬೇಕು ಎಂದು ಅವರು ಸರ್ಕಾರವನ್ನು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಡಾ. ಕೆ. ಮೋನಪ್ಪ, ಚಂದ್ರಶೇಖರ್ ಕೆ. ಪಟ್ಟಾರ್, ಗಂಗಾಧರ್ ಪೋದ್ದಾರ್, ಮಾರುತಿ ಕಮ್ಮಾರ, ಪ್ರಾಣೇಶ್ ಬಡಿಗೇರ್, ವಿಶ್ವನಾಥ ಪೋದ್ದಾರ್, ಮೌನೇಶ್ ಬಡಿಗೇರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.



