ಜಿಲ್ಲಾಸುದ್ದಿ

ಕನಿಷ್ಠ ವೇತನ ಜಾರಿಗೆ ಆಗ್ರಹಿಸಿ ಜುಲೈ 14ರಿಂದ ಅಹೋರಾತ್ರಿ ಧರಣಿ

ಸರ್ಕಾರಿ ಹಾಸ್ಟೆಲ್ ಹಾಗೂ ವಸತಿ ಶಾಲೆಗಳ ಹೊರಗುತ್ತಿಗೆ ನೌಕರರ ಸಂಘದ ಎಚ್ಚರಿಕೆ; 730 ಸಿಬ್ಬಂದಿಗೆ ವೇತನ ಆದೇಶ ಜಾರಿಯಾಗಿಲ್ಲ ಎಂಬ ಆರೋಪ

ಕಲಬುರಗಿ, ಜು.11: ಸರ್ಕಾರಿ ಹಾಸ್ಟೆಲ್ ಹಾಗೂ ವಸತಿ ಶಾಲೆಗಳ ಹೊರಗುತ್ತಿಗೆ ನೌಕರರಿಗೆ ಸರ್ಕಾರ ಘೋಷಿಸಿರುವ ಕನಿಷ್ಠ ವೇತನವನ್ನು ತಕ್ಷಣ ಜಾರಿಗೆ ತರಬೇಕು, ಸಿಬ್ಬಂದಿ ಕಡಿತ ಆದೇಶವನ್ನು ಹಿಂಪಡೆಯಬೇಕು ಹಾಗೂ ಹೊಸ ನೇಮಕಾತಿಗಳಲ್ಲಿನ ಅಕ್ರಮಗಳನ್ನು ತಡೆಯಬೇಕು ಎಂದು ಆಗ್ರಹಿಸಿ ಜುಲೈ 14ರಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಅಹೋರಾತ್ರಿ ಧರಣಿ ಸತ್ಯಾಗ್ರಹ ನಡೆಸಲಾಗುವುದು ಎಂದು ಕರ್ನಾಟಕ ರಾಜ್ಯ ಸರ್ಕಾರಿ ಹಾಸ್ಟೆಲ್ ಮತ್ತು ವಸತಿ ಶಾಲಾ ಹೊರಗುತ್ತಿಗೆ ನೌಕರರ ಸಂಘದ ಅಧ್ಯಕ್ಷ ಭೀಮಶೆಟ್ಟಿ ಯಂಪಳ್ಳಿ ತಿಳಿಸಿದ್ದಾರೆ.

ನಗರದಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೇ 22ರಂದು ಸರ್ಕಾರ ಹೊರಡಿಸಿದ ಆದೇಶದಂತೆ ಹೊರಗುತ್ತಿಗೆ ನೌಕರರಿಗೆ ತಿಂಗಳಿಗೆ ₹31 ಸಾವಿರ ಕನಿಷ್ಠ ವೇತನ ನೀಡಬೇಕಿದ್ದರೂ ಅಧಿಕಾರಿಗಳ ನಿರ್ಲಕ್ಷ್ಯದಿಂದ ಆದೇಶ ಇನ್ನೂ ಜಾರಿಯಾಗಿಲ್ಲ ಎಂದು ಆರೋಪಿಸಿದರು.

ಜಿಲ್ಲೆಯ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗಳ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ನೂರಾರು ಹೊರಗುತ್ತಿಗೆ ನೌಕರರು ಸಂಕಷ್ಟದಲ್ಲಿದ್ದಾರೆ. ಸಮಾಜ ಕಲ್ಯಾಣ ಇಲಾಖೆಯಲ್ಲೇ ಸುಮಾರು 450 ಸಿಬ್ಬಂದಿಗೆ ಇನ್ನೂ ಹೊಸ ವೇತನ ಜಾರಿಯಾಗಿಲ್ಲ ಎಂದು ಅವರು ಹೇಳಿದರು.

ಮೋರಾರ್ಜಿ ದೇಸಾಯಿ, ಕಿತ್ತೂರು ರಾಣಿ ಚೆನ್ನಮ್ಮ, ಡಾ. ಬಿ.ಆರ್. ಅಂಬೇಡ್ಕರ್, ಇಂದಿರಾಗಾಂಧಿ ಹಾಗೂ ಏಕಲವ್ಯ ವಸತಿ ನಿಲಯಗಳಲ್ಲಿ ಸೇವೆ ಸಲ್ಲಿಸುತ್ತಿರುವ ಸಿಬ್ಬಂದಿ ಸೇರಿದಂತೆ ಒಟ್ಟು 730 ಹೊರಗುತ್ತಿಗೆ ನೌಕರರಿಗೆ ಕನಿಷ್ಠ ವೇತನ ಜಾರಿಯಾಗಿಲ್ಲ. ವಾರಕ್ಕೆ ಒಂದು ದಿನ ರಜೆ ನೀಡುವ ಆದೇಶವೂ ಇನ್ನೂ ಅನುಷ್ಠಾನಗೊಂಡಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

2017ರ ನಂತರ ಆರಂಭವಾದ ಕೆಆರ್‌ಐಎಸ್‌ (KREIS) ವಸತಿ ನಿಲಯಗಳಲ್ಲಿ ಸಿಬ್ಬಂದಿ ಸಂಖ್ಯೆಯನ್ನು ಕಡಿತಗೊಳಿಸಿರುವುದರಿಂದ ಕೆಲಸದ ಒತ್ತಡ ಹೆಚ್ಚಾಗಿದೆ. 11 ಸಿಬ್ಬಂದಿ ಅಗತ್ಯವಿರುವ ಕಡೆ ಕೇವಲ 7 ಜನರನ್ನು ಮಾತ್ರ ನೇಮಕ ಮಾಡಲಾಗಿದ್ದು, ಹೊಸದಾಗಿ ಆರಂಭವಾಗಿರುವ 100 ವಿದ್ಯಾರ್ಥಿಗಳ ವಸತಿ ನಿಲಯಗಳಲ್ಲಿಯೂ ಅಗತ್ಯಕ್ಕಿಂತ ಕಡಿಮೆ ಸಿಬ್ಬಂದಿಯನ್ನು ನೇಮಿಸಲಾಗುತ್ತಿದೆ. ಇದರಿಂದ ನೌಕರರು ಹೆಚ್ಚಿನ ಕೆಲಸದ ಒತ್ತಡ ಮತ್ತು ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎಂದು ಹೇಳಿದರು.

ಸರ್ಕಾರ ಕೂಡಲೇ ಎಲ್ಲಾ ಬೇಡಿಕೆಗಳನ್ನು ಈಡೇರಿಸಬೇಕು. ಇಲ್ಲವಾದರೆ ಜುಲೈ 14ರಿಂದ ಆರಂಭವಾಗುವ ಅಹೋರಾತ್ರಿ ಧರಣಿಯನ್ನು ಯಶಸ್ವಿಗೊಳಿಸಲಾಗುವುದು ಎಂದು ಅವರು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮೇಘರಾಜ್ ಕಠಾರೆ, ಮೊಹಮ್ಮದ್ ಜಮೀರುದ್ದೀನ್ ಬಾಬಾ, ಅಲ್ಲಾ ಪಟೇಲ್, ಕಲ್ಯಾಣಿ ಪೂಜಾರಿ ಸೇರಿದಂತೆ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button