ಕ್ರೀಡೆ

ವಿಶ್ವಕಪ್‌ನಲ್ಲಿ ಆಟಗಾರರ ಚೇತರಿಕೆಗೆ ಅರಿಶಿನ, ಶುಂಠಿ, ಇನ್‌ಫ್ರಾರೆಡ್ ಥೆರಪಿ ಮೊರೆ

ವೇಗದ ಪಂದ್ಯಗಳ ನಡುವೆ ಫಿಟ್ನೆಸ್ ಕಾಪಾಡಲು ಇಂಗ್ಲೆಂಡ್ ತಂಡದ ವಿಶೇಷ ರಿಕವರಿ ಯೋಜನೆ

ನವದೆಹಲಿ: ಫಿಫಾ ವಿಶ್ವಕಪ್ 2026ರಲ್ಲಿ ನಿರಂತರ ಪಂದ್ಯಗಳು ಮತ್ತು ತೀವ್ರ ಪೈಪೋಟಿಯ ನಡುವೆಯೂ ಆಟಗಾರರ ದೈಹಿಕ ಸಾಮರ್ಥ್ಯ ಕಾಪಾಡಿಕೊಳ್ಳಲು ವಿವಿಧ ರಾಷ್ಟ್ರೀಯ ತಂಡಗಳು ಅತ್ಯಾಧುನಿಕ ಚೇತರಿಕೆ (ರಿಕವರಿ) ವಿಧಾನಗಳನ್ನು ಅನುಸರಿಸುತ್ತಿವೆ. ಇಂಗ್ಲೆಂಡ್ ತಂಡವು ಆಟಗಾರರ ಸ್ನಾಯುಗಳ ಉರಿಯೂತ ಕಡಿಮೆ ಮಾಡಲು ಅರಿಶಿನ (ಹಲದಿ), ಶುಂಠಿ ಮತ್ತು ಒಮೆಗಾ–3 ಮೀನು ಎಣ್ಣೆಯನ್ನು ಆಹಾರದಲ್ಲಿ ಸೇರಿಸಿಕೊಂಡಿದೆ.

ಮೆಕ್ಸಿಕೊ ವಿರುದ್ಧದ ಪಂದ್ಯ ಬಳಿಕ ಆಟಗಾರರಿಗೆ ಅರಿಶಿನ ಮಿಶ್ರಿತ ಪಾನೀಯಗಳನ್ನು ನೀಡಲಾಗುತ್ತಿದೆ. ಸ್ನಾಯುಗಳ ಉರಿಯೂತ ತಗ್ಗಿಸಲು ಹಾಗೂ ಶೀಘ್ರ ಚೇತರಿಕೆಗೆ ಈ ನೈಸರ್ಗಿಕ ಪದಾರ್ಥಗಳು ನೆರವಾಗುತ್ತವೆ ಎಂದು ತಂಡದ ವೈದ್ಯಕೀಯ ಸಿಬ್ಬಂದಿ ಅಭಿಪ್ರಾಯಪಟ್ಟಿದ್ದಾರೆ.

ವಿಶ್ವಕಪ್‌ನಲ್ಲಿ ಪಂದ್ಯಗಳ ನಡುವಿನ ವಿರಾಮ ಕಡಿಮೆಯಿರುವುದರಿಂದ ಆಟಗಾರರು ಸಂಪೂರ್ಣ ಚೇತರಿಸಿಕೊಳ್ಳಲು ವಿಶೇಷ ಯೋಜನೆಗಳನ್ನು ಅನುಸರಿಸಲಾಗುತ್ತಿದೆ. ಕಾರ್ಬೊಹೈಡ್ರೇಟ್ ಮತ್ತು ಪ್ರೋಟೀನ್ ಸಮೃದ್ಧ ಆಹಾರದ ಜೊತೆಗೆ ದೇಹದಲ್ಲಿ ಕಳೆದುಹೋದ ಶಕ್ತಿಯನ್ನು ಮರುಪಡೆಯುವತ್ತ ಹೆಚ್ಚಿನ ಗಮನ ನೀಡಲಾಗುತ್ತಿದೆ.

ಇದರೊಂದಿಗೆ ಐಸ್ ಬಾತ್, ಇನ್‌ಫ್ರಾರೆಡ್ ಲೇಸರ್ ಥೆರಪಿ, ಶಾಕ್‌ವೇವ್ ಥೆರಪಿ ಸೇರಿದಂತೆ ಆಧುನಿಕ ಚಿಕಿತ್ಸಾ ವಿಧಾನಗಳನ್ನೂ ಬಳಸಲಾಗುತ್ತಿದೆ. ಹಿಂದೆ ಮೆಗ್ನೀಷಿಯಂ ಪೂರೈಸಲು ಎಪ್ಸಮ್ ಸಾಲ್ಟ್ ಸ್ನಾನ ಹೆಚ್ಚು ಬಳಕೆಯಲ್ಲಿದ್ದರೆ, ಈಗ ಐಸ್ ಬಾತ್ ಮತ್ತು ಇನ್‌ಫ್ರಾರೆಡ್ ಚಿಕಿತ್ಸೆಗಳು ಪ್ರಮುಖ ರಿಕವರಿ ವಿಧಾನಗಳಾಗಿ ಪರಿಣಮಿಸಿವೆ.

ಮೆಕ್ಸಿಕೊ ನಗರದ ತಂಪು ವಾತಾವರಣದಿಂದ ಮಿಯಾಮಿ ನಗರದ ಬಿಸಿಲಿನ ವಾತಾವರಣಕ್ಕೆ ಹೊಂದಿಕೊಳ್ಳುವ ಸವಾಲಿನ ನಡುವೆಯೇ ಇಂಗ್ಲೆಂಡ್ ತಂಡ ಸೆಮಿಫೈನಲ್ ಪ್ರವೇಶಕ್ಕಾಗಿ ನಾರ್ವೆ ವಿರುದ್ಧದ ಮಹತ್ವದ ಪಂದ್ಯಕ್ಕೆ ಸಜ್ಜಾಗುತ್ತಿದೆ. ಹೀಗಾಗಿ ಆಟಗಾರರ ದೈಹಿಕ ಮತ್ತು ಮಾನಸಿಕ ಸಾಮರ್ಥ್ಯವನ್ನು ಉನ್ನತ ಮಟ್ಟದಲ್ಲಿ ಕಾಯ್ದುಕೊಳ್ಳಲು ವೈದ್ಯಕೀಯ ತಂಡ ವಿಶೇಷ ಕಾಳಜಿ ವಹಿಸಿದೆ.

Related Articles

Leave a Reply

Your email address will not be published. Required fields are marked *

Back to top button