ಜಿಲ್ಲಾಸುದ್ದಿ

ಗೋಳಾ ಲಕ್ಕಮ್ಮದೇವಿ ಜಾತ್ರೆಗೆ ನಾಳೆ ಚಾಲನೆ: ಕಂಚಿನ ಕಳಸದ ಮೆರವಣಿಗೆ

ಕಲಬುರಗಿ, ನ.11: ಜಿಲ್ಲೆಯ ಆಳಂದ ತಾಲೂಕಿನ ಗೋಳಾ (ಬಿ) ಗ್ರಾಮದಲ್ಲಿರುವ ಶ್ರೀ ಲಕ್ಷ್ಮೀಖ ದೇವಿ ದೇವಸ್ಥಾನದ ಜಾತ್ರೆ ನವೆಂಬರ್ 13ರಿಂದ ಆರಂಭವಾಗಲಿದೆ. ಜಾತ್ರೆಯ ಅಂಗವಾಗಿ ನಡೆಯುವ ಧಾರ್ಮಿಕ ಕಾರ್ಯಕ್ರಮಗಳು ಹಾಗೂ ಕಂಚಿನ ಕಳಸದ ಮೆರವಣಿಗೆಗೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಲಕ್ಕಮ್ಮದೇವಿ ಟ್ರಸ್ಟ್ ಅಧ್ಯಕ್ಷ ಬಸವರಾಜ ಎಸ್. ಮಾಲಿಪಾಟೀಲ ತಿಳಿಸಿದರು.

ನಗರದ ಪತ್ರಿಕಾ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನವೆಂಬರ್ 13ರ ಶುಕ್ರವಾರ ಸಂಜೆ 6 ಗಂಟೆಗೆ ಶ್ರೀ ಲಕ್ಷ್ಮೀ ದೇವಸ್ಥಾನದ ಕಟ್ಟಿಗೆಯ ಕಳಸ ಮೆರವಣಿಗೆ ಆರಂಭವಾಗಿ ರಾತ್ರಿ 9 ಗಂಟೆಗೆ ಶ್ರೀ ಲಕ್ಕಮ್ಮದೇವಿ ದೇವಸ್ಥಾನ ತಲುಪಲಿದೆ. ನವೆಂಬರ್ 14ರ ಶನಿವಾರ ಬೆಳಿಗ್ಗೆ 11 ಗಂಟೆಗೆ ಗೋಳಾ ಗ್ರಾಮದ ಲಕ್ಷ್ಮೀ ದೇವಸ್ಥಾನದಿಂದ ಕಂಚಿನ ಕಳಸದ ಮೆರವಣಿಗೆ ಆರಂಭವಾಗಿ ಮಧ್ಯಾಹ್ನ 3 ಗಂಟೆಗೆ ತಲುಪಲಿದೆ ಎಂದು ವಿವರಿಸಿದರು.

ಈ ಜಾತ್ರೆಗೆ ಗ್ರಾಮದ ಸುತ್ತಮುತ್ತಲಿನ ಪ್ರದೇಶಗಳು ಸೇರಿದಂತೆ ತಾಲೂಕು, ಜಿಲ್ಲೆ ಹಾಗೂ ಮಹಾರಾಷ್ಟ್ರ, ಆಂಧ್ರಪ್ರದೇಶ ಮತ್ತು ಕರ್ನಾಟಕದ ವಿವಿಧ ಭಾಗಗಳಿಂದ ಸುಮಾರು 40ರಿಂದ 50 ಸಾವಿರ ಭಕ್ತರು ಆಗಮಿಸುವ ನಿರೀಕ್ಷೆಯಿದೆ. ಜಾತ್ರೆಯಲ್ಲಿ ಮಹಿಳೆಯರು ಹಾಗೂ ಪುರುಷರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲಿದ್ದು, ಹೆಚ್ಚಿನ ವಾಹನಗಳೂ ಆಗಮಿಸಲಿವೆ ಎಂದು ಹೇಳಿದರು.

ಜಾತ್ರೆಯ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ವಹಿಸಬೇಕು. ಭಕ್ತರಿಗೆ ದೇವಿಯ ದರ್ಶನ ಪಡೆಯಲು ಯಾವುದೇ ತೊಂದರೆಯಾಗದಂತೆ ಸೂಕ್ತ ವ್ಯವಸ್ಥೆ ಕಲ್ಪಿಸಬೇಕು. ಜನಸಂದಣಿಯನ್ನು ನಿಯಂತ್ರಿಸಲು ಹಾಗೂ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡಲು ಅಗತ್ಯ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಬೇಕು ಎಂದು ಅವರು ಮನವಿ ಮಾಡಿದರು.

ಚಪ್ಪಲಿ ಪೂಜೆಯ ವಿಶೇಷ ಆಚರಣೆ

ಶ್ರೀ ಲಕ್ಕಮ್ಮದೇವಿ ದೇವಸ್ಥಾನದ ಮತ್ತೊಂದು ವಿಶೇಷ ಆಚರಣೆಯೆಂದರೆ ಚಪ್ಪಲಿ ಪೂಜೆ. ಭಕ್ತರು ದೇವಾಲಯದ ಮುಂದೆ ಹಳೆಯದಾದ, ಸವೆದುಹೋದ ಚಪ್ಪಲಿಗಳನ್ನು ಕಟ್ಟಿ ಹೋಗುವ ಸಂಪ್ರದಾಯವಿದೆ. ಯಾರು ಈ ಚಪ್ಪಲಿಗಳನ್ನು ಕಟ್ಟುತ್ತಾರೆ ಎಂಬುದು ಯಾರಿಗೂ ತಿಳಿಯುವುದಿಲ್ಲ. ದೇವಿಯೇ ಆ ಚಪ್ಪಲಿಗಳನ್ನು ಧರಿಸಿ ಸಂಚರಿಸುತ್ತಾಳೆ ಎಂಬ ಭಕ್ತರ ನಂಬಿಕೆ ಇದೆ. ಹೀಗಾಗಿ ಸವೆದ ಚಪ್ಪಲಿಗಳಿಗೆ ಭಕ್ತರು ವಿಶೇಷ ಪೂಜೆ ಸಲ್ಲಿಸುವ ಪದ್ಧತಿ ಬೆಳೆದು ಬಂದಿದೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ ಅವರು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಶರಣು ವಾರದ್, ಜಗನ್ನಾಥ ಗೋಳಾ, ಅಮೃತ ಸಜ್ಜನ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button