ಕಲಬುರಗಿಯಲ್ಲಿ ನವೆಂಬರ್ 16ರಿಂದ ಸಹಜ ಸ್ಥಿತಿ ಯೋಗ ಶಿಬಿರ

ಕಲಬುರಗಿ, ನ.11: ನಗರದ ಸಿಐಬಿ ಮತ್ತು ಘಾಟಗೆ ಬಡಾವಣೆ ಮಧ್ಯದಲ್ಲಿರುವ ಕೇಂದ್ರ ಬಸ್ ನಿಲ್ದಾಣದ ಹಿಂಭಾಗದಲ್ಲಿ, ಹಳೆಯ ಇಎಸ್ಐ ಆಸ್ಪತ್ರೆ ಸಮೀಪದ ಎಂಎಸ್ಕೆ ಮಿಲ್ ವಸತಿ ಅಭಿವೃದ್ಧಿ ಪ್ರದೇಶದ ಜಿಡಿಎ ಖಾಸಗಿ ಬಡಾವಣೆಯಲ್ಲಿರುವ ಶ್ರೀ ಗುರುದತ್ತ ಧ್ಯಾನ ಮಂದಿರದಲ್ಲಿ ನವೆಂಬರ್ 16ರಿಂದ 28ರವರೆಗೆ ಸಹಜ ಸ್ಥಿತಿ ಯೋಗ ಶಿಬಿರ ಆಯೋಜಿಸಲಾಗಿದೆ ಎಂದು ಶಿಬಿರಾರ್ಥಿ ಹಾಗೂ ಪ್ರತಿಷ್ಠಿತ ಎಂ.ಎನ್. ದೇಸಾಯಿ ಪದವಿ ಕಾಲೇಜಿನ ಕಾರ್ಯದರ್ಶಿ ಜಗನ್ನಾಥ ನಾಗೂರ್ ತಿಳಿಸಿದ್ದಾರೆ.
ಪ್ರತಿಯೊಬ್ಬ ವ್ಯಕ್ತಿಯಲ್ಲಿಯೂ ಅಪಾರವಾದ ಅನನ್ಯ ಆಂತರಿಕ ಶಕ್ತಿ ಅಡಗಿರುತ್ತದೆ. ಆ ಶಕ್ತಿಯನ್ನು ಅರಿತುಕೊಂಡು ಜೀವನವನ್ನು ಅರ್ಥಪೂರ್ಣವಾಗಿಸಿಕೊಳ್ಳಲು ಹಾಗೂ ಸದಾ ಸುಖ, ಸಂತೋಷದಿಂದ ಇರಲು ಪ್ರಾಣಾಯಾಮ, ಧ್ಯಾನ, ಭಕ್ತಿ, ಜ್ಞಾನ ಮತ್ತು ಕರ್ಮಯೋಗಗಳ ಸಮನ್ವಯದ ತರಬೇತಿ ಈ ಶಿಬಿರದಲ್ಲಿ ನೀಡಲಾಗುತ್ತದೆ ಎಂದು ಅವರು ವಿವರಿಸಿದ್ದಾರೆ.
ದುಃಖದಿಂದ ಸಂತೋಷದ ಕಡೆಗೆ, ಸಂತೋಷದಿಂದ ನಿಜಾನಂದದ ಕಡೆಗೆ, ಅನಾರೋಗ್ಯದಿಂದ ಆರೋಗ್ಯದ ಕಡೆಗೆ, ಬಂಧನದಿಂದ ಮುಕ್ತಿಯ ಕಡೆಗೆ, ಕತ್ತಲೆಯಿಂದ ಬೆಳಕಿನ ಕಡೆಗೆ ಹಾಗೂ ಮಾನವೀಯತೆಯಿಂದ ವಿಶ್ವಮಾನವತೆಯ ಕಡೆಗೆ ಸಾಗಲು ಈ ಶಿಬಿರ ಮಾರ್ಗದರ್ಶನ ನೀಡಲಿದೆ ಎಂದು ತಿಳಿಸಿದ್ದಾರೆ.
ಶಿಬಿರದಲ್ಲಿ ಭಾಗವಹಿಸುವುದರಿಂದ ಮಾನಸಿಕ ಒತ್ತಡವನ್ನು ಕಡಿಮೆ ಮಾಡಿಕೊಂಡು ಮನಸ್ಸಿನ ಸಮತೋಲನ ಕಾಪಾಡಿಕೊಳ್ಳಲು ಸಾಧ್ಯವಾಗುತ್ತದೆ. ಆತ್ಮಸ್ಥೈರ್ಯ ಮತ್ತು ಜ್ಞಾಪಕಶಕ್ತಿಯ ವೃದ್ಧಿಗೂ ಸಹಕಾರಿಯಾಗಲಿದೆ. ಮಾನಸಿಕ ಧೈರ್ಯ ಹೆಚ್ಚಿಸಿಕೊಳ್ಳಲು ಹಾಗೂ ದೇಹದ ರೋಗನಿರೋಧಕ ಶಕ್ತಿಯನ್ನು ವೃದ್ಧಿಸಿಕೊಳ್ಳಲು ಯೋಗಾಭ್ಯಾಸ ಸಹಕಾರಿಯಾಗಿದೆ.
ರಾಜಯೋಗ, ಪ್ರಾಣಾಯಾಮ ಮತ್ತು ಧ್ಯಾನದ ಮೂಲಕ ಅಸ್ತಮಾ, ಮಧುಮೇಹ, ಅಧಿಕ ರಕ್ತದೊತ್ತಡ, ಸಂಧಿವಾತ ಸೇರಿದಂತೆ ವಿವಿಧ ದೀರ್ಘಕಾಲದ ಆರೋಗ್ಯ ಸಮಸ್ಯೆಗಳನ್ನು ನಿಯಂತ್ರಿಸಲು ಸಹಾಯಕವಾಗಬಹುದು ಎಂದು ಅವರು ತಿಳಿಸಿದ್ದಾರೆ.
ಮಾನವನ ಬದುಕಿನ ಉದ್ದೇಶವೇನು? ಸೃಷ್ಟಿಯಲ್ಲಿ ನಡೆಯುವ ಎಲ್ಲ ಚಟುವಟಿಕೆಗಳ ಹಿಂದಿನ ಕಾರಣವೇನು? ನೆಮ್ಮದಿ ಮತ್ತು ಸಂತೋಷಕ್ಕಾಗಿ ಮಾನವ ರೂಪಿಸಿಕೊಂಡಿರುವ ಧರ್ಮ, ಕಾನೂನು, ಹಣ ಹಾಗೂ ದ್ರವ್ಯಗಳ ವ್ಯವಸ್ಥೆ ನಿಜವಾದ ಸುಖವನ್ನು ನೀಡುತ್ತದೆಯೇ? ಎಂಬ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಲು 13 ದಿನಗಳ ತರಬೇತಿ ಶಿಬಿರ ಸಹಕಾರಿಯಾಗಲಿದೆ ಎಂದು ವಿವರಿಸಿದ್ದಾರೆ.
ಪ್ರತಿದಿನ ಎರಡೂವರೆ ಗಂಟೆಗಳ ಕಾಲ ನಡೆಯುವ ಈ ಶಿಬಿರವನ್ನು ವಿರೂಪಾಕ್ಷ ಗುರೂಜಿಯವರು ನಡೆಸಿಕೊಡಲಿದ್ದಾರೆ.
