ಜಿಲ್ಲಾಸುದ್ದಿ
ಮಹಾಲಕ್ಷ್ಮೀ ಜಾತ್ರೆಯಲ್ಲಿ ಡಾ. ಅಜಯ್‌ಸಿಂಗ್ ದಂಪತಿ ಭಾಗಿ
ಲೋಕಕಲ್ಯಾಣ, ರೈತರು ಹಾಗೂ ಕಾರ್ಮಿಕರ ಒಳಿತಿಗಾಗಿ ವಿಶೇಷ ಪೂಜೆ ಸಲ್ಲಿಕೆ

ಜೆವರ್ಗಿ, ಅ. 30: ಪಟ್ಟಣದ ಆರಾಧ್ಯ ದೇವತೆ ಶ್ರೀ ಕಲ್ಕತ್ತಾದೇವಿ (ಶ್ರೀ ಮಹಾಲಕ್ಷ್ಮೀ ದೇವಿ) ಜಾತ್ರಾ ಮಹೋತ್ಸವದ ಮೂರನೇ ದಿನದ ಅಂಗವಾಗಿ ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಡಾ. ಅಜಯ್‌ಸಿಂಗ್ ಹಾಗೂ ಅವರ ಪತ್ನಿ ಶ್ವೇತಾ ಸಿಂಗ್ ಅವರು ಬಡಿಗೇರ ಮನೆಯಲ್ಲಿ ದೇವಿಯ ದರ್ಶನ ಪಡೆದು, ವಿಶೇಷ ಪೂಜೆ ಸಲ್ಲಿಸಿದರು.
ನಾಡಿನ ಸಮಸ್ತ ಜನರ ಸುಖ, ಶಾಂತಿ, ಸಮೃದ್ಧಿ ಹಾಗೂ ಆರೋಗ್ಯಕರ ಜೀವನಕ್ಕಾಗಿ ದಂಪತಿ ಪ್ರಾರ್ಥಿಸಿದರು. ಪ್ರತಿಯೊಬ್ಬರ ಬದುಕಿನಲ್ಲಿ ಸಂತೋಷ, ನೆಮ್ಮದಿ ಮತ್ತು ಸೌಹಾರ್ದತೆ ನೆಲೆಸಲಿ. ರೈತರು, ಕಾರ್ಮಿಕರು ಸೇರಿದಂತೆ ಸಮಾಜದ ಎಲ್ಲ ವರ್ಗಗಳ ಜನರ ಜೀವನ ಹಸನಾಗಲಿ ಎಂದು ಶ್ರೀದೇವಿಯಲ್ಲಿ ಭಕ್ತಿಪೂರ್ವಕವಾಗಿ ಬೇಡಿಕೊಂಡರು.
ಜಾತ್ರಾ ಮಹೋತ್ಸವದ ಅಂಗವಾಗಿ ದೇವಿಯ ದರ್ಶನ ಪಡೆಯಲು ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರು, ಗಣ್ಯರು ಹಾಗೂ ಅಪಾರ ಸಂಖ್ಯೆಯ ಭಕ್ತಾದಿಗಳು ಉಪಸ್ಥಿತರಿದ್ದು, ಶ್ರೀದೇವಿಯ ದರ್ಶನ ಪಡೆದರು.
