ನ. 1ರಿಂದ ಕಲ್ಯಾಣ ಕರ್ನಾಟಕಕ್ಕೆ ವಂದೇ ಭಾರತ್ ರೈಲು ಸಂಚಾರ ಆರಂಭ
ಕಲಬುರಗಿ ಮಾರ್ಗವಾಗಿ ಸಂಚರಿಸಲಿರುವ ಮುಂಬೈ–ಬೆಂಗಳೂರು ರೈಲು; ಅಧಿಕಾರಿಗಳೊಂದಿಗೆ ಡಾ. ಉಮೇಶ್ ಜಾಧವ್ ಚರ್ಚೆ

ಕಲಬುರಗಿ, ಅ. 30: ಕಲಬುರಗಿ ರೈಲು ನಿಲ್ದಾಣದಲ್ಲಿ ಮಾಜಿ ಸಂಸದ ಡಾ. ಉಮೇಶ್ ಜಾಧವ್ ಅವರು ಶುಕ್ರವಾರ ರೈಲ್ವೆ ಅಧಿಕಾರಿಗಳನ್ನು ಭೇಟಿ ಮಾಡಿ, ನವೆಂಬರ್ 1ರಿಂದ ಆರಂಭವಾಗಲಿರುವ ಮುಂಬೈ–ಬೆಂಗಳೂರು ನಡುವಿನ ವಂದೇ ಭಾರತ್ ರೈಲಿನ ಸಂಚಾರದ ಕುರಿತು ಚರ್ಚಿಸಿದರು.
ಈ ರೈಲು ಕಲ್ಯಾಣ ಕರ್ನಾಟಕದ ಜನತೆಗೆ ದೊರೆಯುತ್ತಿರುವ ಮಹತ್ವದ ಕೊಡುಗೆಯಾಗಿದೆ ಎಂದು ಡಾ. ಉಮೇಶ್ ಜಾಧವ್ ಅಭಿಪ್ರಾಯಪಟ್ಟರು. ವಿಮಾನ ಪ್ರಯಾಣಕ್ಕೆ ಪರ್ಯಾಯವೆನಿಸುವ ಆರಾಮದಾಯಕ ಹಾಗೂ ಅತ್ಯಾಧುನಿಕ ಪ್ರಯಾಣದ ಅನುಭವವನ್ನು ಈ ರೈಲು ಒದಗಿಸಲಿದೆ ಎಂದು ಅವರು ತಿಳಿಸಿದರು.
ಕಲಬುರಗಿ ಮಾರ್ಗವಾಗಿ ವಂದೇ ಭಾರತ್ ರೈಲು ಸಂಚರಿಸುವುದರಿಂದ ಈ ಭಾಗದ ಸಂಪರ್ಕ ವ್ಯವಸ್ಥೆ ಸುಧಾರಿಸುವುದರ ಜೊತೆಗೆ ಪ್ರವಾಸೋದ್ಯಮ, ವ್ಯಾಪಾರ ಮತ್ತು ಪ್ರಾದೇಶಿಕ ಅಭಿವೃದ್ಧಿಗೆ ಹೊಸ ವೇಗ ದೊರೆಯಲಿದೆ ಎಂಬ ಆಶಯವನ್ನು ಅವರು ವ್ಯಕ್ತಪಡಿಸಿದರು.
ಈ ಮಹತ್ವದ ಕೊಡುಗೆಗಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ, ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಹಾಗೂ ಕೇಂದ್ರ ಸಚಿವ ವಿ. ಸೋಮಣ್ಣ ಅವರಿಗೆ ಹೃತ್ಪೂರ್ವಕ ಧನ್ಯವಾದಗಳನ್ನು ಅರ್ಪಿಸುವುದಾಗಿ ಡಾ. ಜಾಧವ್ ಹೇಳಿದರು.
ನವೆಂಬರ್ 1ರಂದು ಕಲ್ಯಾಣ ಕರ್ನಾಟಕದ ಜನತೆ ಈ ಅಭಿವೃದ್ಧಿಯ ಸಂಭ್ರಮವನ್ನು ಒಗ್ಗಟ್ಟಿನಿಂದ ಆಚರಿಸಬೇಕು. ಈ ಭಾಗದ ಅಭಿವೃದ್ಧಿಯ ಪಯಣ ಇದೇ ರೀತಿ ಮುಂದುವರಿಯಲಿ ಎಂದು ಅವರು ಆಶಿಸಿದರು.
