ಅಕ್ರಮ ಭತ್ತ ಸಾಗಣೆದಾರರ ಜತೆ ಶಾಮೀಲು ಆರೋಪ: ಸಿಪಿಐ ಕೊಡ್ಲಾ ಸೇರಿ ನಾಲ್ವರು ಅಮಾನತು

ಕಲಬುರಗಿ, ಅ.2- ಅಕ್ರಮವಾಗಿ ಪಡಿತರ ಅಕ್ಕಿ ಸಾಗಿಸುತ್ತಿದ್ದ ವಾಹನವನ್ನು ವಶಕ್ಕೆ ಪಡೆದ ಬಳಿಕ ಪ್ರಕರಣ ದಾಖಲಿಸದೆ, ಅಕ್ರಮವಾಗಿ ಹಣ ಪಡೆದು ವಾಹನವನ್ನು ಬಿಟ್ಟು ಕಳುಹಿಸಿದ ಆರೋಪದ ಹಿನ್ನೆಲೆಯಲ್ಲಿ ಆಳಂದ ಪೊಲೀಸ್ ಠಾಣೆಯ ಸಿಪಿಐ ಶರಣಬಸಪ್ಪ ಕೊಡ್ಲಾ ಸೇರಿದಂತೆ ನಾಲ್ವರು ಪೊಲೀಸ್ ಸಿಬ್ಬಂದಿಯನ್ನು ಅಮಾನತುಗೊಳಿಸಿ ಆದೇಶ ಹೊರಡಿಸಲಾಗಿದೆ.
ಮುಖ್ಯಮಂತ್ರಿ ಪದಕ ವಿಜೇತ ಸಿಪಿಐ ಶರಣಬಸಪ್ಪ ಕೊಡ್ಲಾ ಅವರ ಅಮಾನತು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.
ಆಳಂದ ಪೊಲೀಸರು ಅಕ್ರಮವಾಗಿ ಪಡಿತರ ಅಕ್ಕಿ ಸಾಗಿಸುತ್ತಿದ್ದ ವಾಹನವನ್ನು ಜಪ್ತಿ ಮಾಡಿದ್ದರು. ಆದರೆ ವಾಹನದ ವಿರುದ್ಧ ಅಧಿಕೃತವಾಗಿ ಯಾವುದೇ ಪ್ರಕರಣ ದಾಖಲಿಸದೆ, ಅಕ್ರಮ ಸಾಗಣೆದಾರರಿಂದ ಹಣ ಪಡೆದು ವಾಹನವನ್ನು ಬಿಟ್ಟು ಕಳುಹಿಸಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿತ್ತು.
ಪಡಿತರ ಅಕ್ಕಿ ಅಕ್ರಮ ಸಾಗಣೆದಾರರೊಂದಿಗೆ ಪೊಲೀಸ್ ಅಧಿಕಾರಿಗಳು ಶಾಮೀಲಾಗಿದ್ದಾರೆ ಎಂಬ ಆರೋಪದ ಕುರಿತು ನಡೆದ ತನಿಖಾ ವರದಿಯ ಆಧಾರದ ಮೇಲೆ ಈ ಶಿಸ್ತು ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿದುಬಂದಿದೆ.
ಸಿಪಿಐ ಶರಣಬಸಪ್ಪ ಕೊಡ್ಲಾ ಅವರೊಂದಿಗೆ ಠಾಣೆಯ ಇತರ ಮೂವರು ಸಿಬ್ಬಂದಿಗಳಾದ ಹನುಮಂತ, ಮಲ್ಲಿಕಾರ್ಜುನ ಹಾಗೂ ಸಾಯಿಬಣ್ಣ ಅವರನ್ನೂ ಅಮಾನತುಗೊಳಿಸಿ ಆದೇಶ ಹೊರಡಿಸಲಾಗಿದೆ.
ಅಕ್ರಮ ಪಡಿತರ ಅಕ್ಕಿ ಸಾಗಣೆ ಪ್ರಕರಣದಲ್ಲಿ ಪೊಲೀಸರ ಪಾತ್ರದ ಕುರಿತು ತನಿಖೆ ಮುಂದುವರಿದಿದ್ದು, ಇಲಾಖೆಯ ಶಿಸ್ತು ಕ್ರಮಕ್ಕೆ ಒಳಪಟ್ಟಿರುವ ಅಧಿಕಾರಿಗಳ ವಿರುದ್ಧದ ಆರೋಪಗಳ ಕುರಿತು ಮುಂದಿನ ತನಿಖೆಯಲ್ಲಿ ಹೆಚ್ಚಿನ ಮಾಹಿತಿ ಹೊರಬರುವ ನಿರೀಕ್ಷೆಯಿದೆ.



