ಚಿದ್ರಿಯಲ್ಲಿ ಇಂದಿನಿಂದ ಭವಾನಿ ಮಾತೆಯ ನವರಾತ್ರಿ ಉತ್ಸವ ಆರಂಭ

ಬೀದರ್, ಅ. ೧೦: ನಗರದ ಚಿದ್ರಿಯಲ್ಲಿ ಜೈ ಮಾತಾ ದಿ ಸೇವಾ ಸಂಘದ ವತಿಯಿಂದ ದಸರಾ ಹಬ್ಬದ ಅಂಗವಾಗಿ ಶ್ರೀ ಭವಾನಿ ಮಾತೆಯ ನವರಾತ್ರಿ ಉತ್ಸವವನ್ನು ಅಕ್ಟೋಬರ್ ೧೧ರಿಂದ ೨೦ರವರೆಗೆ ಭಕ್ತಿ ಮತ್ತು ಶ್ರದ್ಧೆಯಿಂದ ಆಚರಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ.
ಉತ್ಸವದ ಅಂಗವಾಗಿ ಪ್ರತಿದಿನ ಬೆಳಿಗ್ಗೆ ೯ ಗಂಟೆ ಹಾಗೂ ಸಂಜೆ ೭ ಗಂಟೆಗೆ ದೇವಿಯ ವಿಶೇಷ ಪೂಜೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ನವರಾತ್ರಿಯ ಮೊದಲ ದಿನ ಶೈಲಪುತ್ರಿ ಪೂಜೆ, ಎರಡನೇ ದಿನ ಬ್ರಹ್ಮಚಾರಿಣಿ ಹಾಗೂ ದುರ್ಗಾ ಪೂಜೆ, ಮೂರನೇ ದಿನ ಚಂದ್ರಘಂಟಾ ಮತ್ತು ಕೂಷ್ಮಾಂಡಾ ಪೂಜೆ ನೆರವೇರಲಿದೆ. ನಾಲ್ಕನೇ ದಿನ ದೇವಿಯ ವಿಶೇಷ ಪೂಜೆ, ಐದನೇ ದಿನ ಸ್ಕಂದಮಾತಾ ಪೂಜೆ ಹಾಗೂ ಆರನೇ ದಿನ ಕಾತ್ಯಾಯನಿ ಮಾತೆಯ ಪೂಜೆ ನಡೆಯಲಿದೆ.
ಆರನೇ ದಿನದ ಸಂಜೆ ರಾಮನಗರದ ಬ್ರಹ್ಮಕುಮಾರಿ ವಿಶ್ವವಿದ್ಯಾಲಯದ ವಿಜಯಲಕ್ಷ್ಮಿ ಅಕ್ಕನವರ ಪ್ರವಚನ ಕಾರ್ಯಕ್ರಮ ಆಯೋಜಿಸಲಾಗಿದೆ.
ಏಳನೇ ದಿನ ಕಾಲರಾತ್ರಿ ಮಾತೆಯ ಪೂಜೆ ನಡೆಯಲಿದ್ದು, ಮಕ್ಕಳಿಂದ ನಾಟಕ ಹಾಗೂ ನೃತ್ಯ ಪ್ರದರ್ಶನಗಳನ್ನು ಏರ್ಪಡಿಸಲಾಗಿದೆ. ಎಂಟನೇ ದಿನ ಮಹಾಗೌರಿ ಮಾತೆಯ ಪೂಜೆ, ಒಂಬತ್ತನೇ ದಿನ ಸಿದ್ಧಿದಾತ್ರಿ ಮಾತೆಯ ಪೂಜೆ ಹಾಗೂ ಹತ್ತನೇ ದಿನ ಆಯುಧ ಪೂಜೆ ನೆರವೇರಲಿದೆ.
ಅ. ೧೫ರಂದು ವಿಶೇಷ ಧಾರ್ಮಿಕ ಕಾರ್ಯಕ್ರಮ
ಅಕ್ಟೋಬರ್ ೧೫ರಂದು ನಡೆಯಲಿರುವ ವಿಶೇಷ ಧಾರ್ಮಿಕ ಕಾರ್ಯಕ್ರಮದಲ್ಲಿ ಹವಾ ಮಲ್ಲಿನಾಥ ಮಹಾರಾಜರು, ಮಚಂದ್ರನಾಥ ಮಹಾರಾಜರು, ಕುಮಾರಿ ಹರಿಕಾ, ಬೆಂಗಳೂರಿನ ಯುವ ವಾಗ್ಮಿ ಹಾಗೂ ಲೇಖಕ ಮಂಜುನಾಥ ಮತ್ತು ಬಿಜೆಪಿ ಮುಖಂಡ ಈಶ್ವರ ಸಿಂಗ್ ಠಾಕೂರ್ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ.
ವಿಜಯದಶಮಿಗೆ ಭವ್ಯ ಶೋಭಾಯಾತ್ರೆ
ವಿಜಯದಶಮಿಯ ಶುಭ ಸಂದರ್ಭದಲ್ಲಿ ಚಿದ್ರಿಯಲ್ಲಿ ಶ್ರೀ ಭವಾನಿ ಮಾತೆಯ ಭವ್ಯ ಶೋಭಾಯಾತ್ರೆ ನಡೆಯಲಿದೆ. ಉತ್ಸವದ ಎಲ್ಲ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ದೇವಿಯ ಕೃಪೆಗೆ ಪಾತ್ರರಾಗಬೇಕು ಎಂದು ಜೈ ಮಾತಾ ದಿ ಸೇವಾ ಸಂಘದ ಅಧ್ಯಕ್ಷ ವೆಂಕಟೇಶ ಶಾಳಿ ಅವರು ಮನವಿ ಮಾಡಿದ್ದಾರೆ.
ನವರಾತ್ರಿ ಉತ್ಸವದ ಹಿನ್ನೆಲೆಯಲ್ಲಿ ಚಿದ್ರಿಯಲ್ಲಿ ಭಕ್ತಿಪೂರ್ಣ ವಾತಾವರಣ ನಿರ್ಮಾಣವಾಗಿದ್ದು, ಉತ್ಸವವನ್ನು ಯಶಸ್ವಿಗೊಳಿಸಲು ಸಂಘದ ಪದಾಧಿಕಾರಿಗಳು ಹಾಗೂ ಭಕ್ತರು ಸಿದ್ಧತೆ ಕೈಗೊಂಡಿದ್ದಾರೆ.



