ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಪಠ್ಯಪುಸ್ತಕಗಳು ಸಹಕಾರಿ: ಡಾ. ಬಸವರಾಜ್ ಕುಮೂನೂರ್

ಕಲಬುರಗಿ, ಅ. 10: ವಿದ್ಯಾರ್ಥಿಗಳಲ್ಲಿ ವಿಷಯಜ್ಞಾನವನ್ನು ವೃದ್ಧಿಸಿ, ಸ್ಪರ್ಧಾತ್ಮಕ ಜಗತ್ತಿನಲ್ಲಿ ಯಶಸ್ಸು ಸಾಧಿಸಲು ಪಠ್ಯಪುಸ್ತಕಗಳು ಮಹತ್ವದ ಪಾತ್ರ ವಹಿಸುತ್ತವೆ ಎಂದು ಡಾ. ಬಿ.ಆರ್. ಅಂಬೇಡ್ಕರ್ ಪದವಿ ಮಹಾವಿದ್ಯಾಲಯದ ನಿವೃತ್ತ ಪ್ರಾಚಾರ್ಯ ಡಾ. ಬಸವರಾಜ್ ಕುಮೂನೂರ್ ಹೇಳಿದರು.
ನಗರದ ಗೋದೂತಾಯಿ ದೊಡ್ಡಪ್ಪ ಅಪ್ಪ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ಪದವಿ ಮಹಿಳಾ ಮಹಾವಿದ್ಯಾಲಯದಲ್ಲಿ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಸಿದ್ದಲಿಂಗರಡ್ಡಿ ರಚಿಸಿರುವ ‘ವ್ಯಾವಹಾರಿಕ ಅರ್ಥಶಾಸ್ತ್ರ’ ಪಠ್ಯಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.
ವ್ಯಾವಹಾರಿಕ ಅರ್ಥಶಾಸ್ತ್ರವು ದೈನಂದಿನ ಜೀವನದಲ್ಲಿ ಎದುರಾಗುವ ಆರ್ಥಿಕ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳಲು ಮತ್ತು ಅವುಗಳಿಗೆ ಸೂಕ್ತ ಪರಿಹಾರ ಕಂಡುಕೊಳ್ಳಲು ನೆರವಾಗುತ್ತದೆ. ವಿದ್ಯಾರ್ಥಿಗಳು ಅರ್ಥಶಾಸ್ತ್ರದ ಸಿದ್ಧಾಂತಗಳನ್ನು ಪ್ರಾಯೋಗಿಕ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಇಂತಹ ಪಠ್ಯಪುಸ್ತಕಗಳು ವಿಷಯವನ್ನು ಸುಲಭವಾಗಿ ಗ್ರಹಿಸಲು ಹಾಗೂ ಪರೀಕ್ಷೆಗಳಲ್ಲಿ ಉತ್ತಮ ಸಾಧನೆ ಮಾಡಲು ಸಹಕಾರಿಯಾಗುತ್ತವೆ ಎಂದು ತಿಳಿಸಿದರು.
ಮುಖ್ಯ ಅತಿಥಿಯಾಗಿದ್ದ ಶರಣಬಸವೇಶ್ವರ ವಾಣಿಜ್ಯ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ದಶರಥ ಮೇತ್ರೆ ಮಾತನಾಡಿ, ವಿದ್ಯಾರ್ಥಿಗಳು ಡಿಜಿಟಲ್ ಮಾಧ್ಯಮವನ್ನೇ ಅವಲಂಬಿಸದೆ ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಓದುವಿಕೆಯಿಂದ ಜ್ಞಾನ ವೃದ್ಧಿಯಾಗುತ್ತದೆ. ಪುಸ್ತಕಗಳನ್ನು ಸ್ನೇಹಿತರಂತೆ ಪರಿಗಣಿಸಿ, ನಿರಂತರ ಅಧ್ಯಯನದಲ್ಲಿ ತೊಡಗಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಇನ್ನೋರ್ವ ಮುಖ್ಯ ಅತಿಥಿಯಾಗಿದ್ದ ಶರಣಬಸವೇಶ್ವರ ದೇವಸ್ಥಾನದ ಆವರಣದಲ್ಲಿರುವ ಶಾಲಾ-ಕಾಲೇಜುಗಳ ನಿರ್ದೇಶಕಿ ಡಾ. ನೀಲಾಂಬಿಕಾ ಶೇರಿಕಾರ ಮಾತನಾಡಿ, ಪೂಜ್ಯ ಡಾ. ಅಪ್ಪ ಅವರು ಪುಸ್ತಕ ಬರೆಯುವ ಸಂಸ್ಕೃತಿಗೆ ಪ್ರೋತ್ಸಾಹ ನೀಡಿದ್ದರು. ಸಿಬ್ಬಂದಿಯೂ ಪುಸ್ತಕ ರಚನೆಯಲ್ಲಿ ತೊಡಗಿಸಿಕೊಳ್ಳಲು ಅವರು ಬೆಂಬಲ ನೀಡುತ್ತಿದ್ದರು. ಇದರಿಂದ ಅನೇಕ ಪ್ರಾಧ್ಯಾಪಕರು ಪುಸ್ತಕಗಳನ್ನು ರಚಿಸಲು ಸಾಧ್ಯವಾಗಿದೆ. ವಿದ್ಯಾರ್ಥಿಗಳು ಸಮಯ ವ್ಯರ್ಥ ಮಾಡದೆ ಓದುವ ಅಭ್ಯಾಸ ಬೆಳೆಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಗೋದೂತಾಯಿ ಬಿ.ಎಡ್. ಮಹಾವಿದ್ಯಾಲಯದ ಪ್ರಾಚಾರ್ಯೆ ಡಾ. ಕಲ್ಪನಾ ಭೀಮಳ್ಳಿ ಹಾಗೂ ಮಹಾವಿದ್ಯಾಲಯದ ಪ್ರಾಚಾರ್ಯೆ ಡಾ. ಸೀಮಾ ಪಾಟೀಲ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ವೇದಿಕೆಯಲ್ಲಿ ಪ್ರಾಧ್ಯಾಪಕರಾದ ಡಾ. ಪುಟ್ಟಮಣಿ ದೇವಿದಾಸ ಮತ್ತು ಡಾ. ಪ್ರತಿಭಾ ಪಾಟೀಲ ಉಪಸ್ಥಿತರಿದ್ದರು. ಪುಸ್ತಕದ ಲೇಖಕ ಡಾ. ಸಿದ್ದಲಿಂಗರಡ್ಡಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ಶಾಂತಲಿಂಗ ಘಂಟೆ ಲೇಖಕರ ಪರಿಚಯ ಮಾಡಿಕೊಟ್ಟರು. ಕೃಪಾಸಾಗರ ಗೊಬೂರ್ ನಿರೂಪಿಸಿ ವಂದಿಸಿದರು. ಸಂಗೀತ ವಿಭಾಗದ ಪ್ರಾಧ್ಯಾಪಕರು ಹಾಗೂ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಮಹಾವಿದ್ಯಾಲಯದ ಬೋಧಕ, ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿನಿಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.



