ಕುಸ್ತಿಯಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾದ ಗ್ರಾಮೀಣ ಪ್ರತಿಭೆ

ಕಲಬುರಗಿ, ಅ. 10: ಅಫಜಲಪುರ ತಾಲ್ಲೂಕಿನ ಜೋಗೂರ ಗ್ರಾಮದ ವಿದ್ಯಾರ್ಥಿ ಕುಮಾರ ಮಲ್ಲಿಕಾರ್ಜುನ ಕುಸ್ತಿ ಸ್ಪರ್ಧೆಯಲ್ಲಿ ಗಮನಾರ್ಹ ಸಾಧನೆ ಮಾಡಿದ್ದು, ರಾಜ್ಯಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾನೆ.
ತಾಲ್ಲೂಕಿನ ಮಹಾಂತಪುರದಲ್ಲಿರುವ ಶ್ರೀ ಮಹಾಂತ ಜ್ಯೋತಿ ವಿದ್ಯಾಪೀಠದ ಅಡಿಯಲ್ಲಿ ನಡೆಯುತ್ತಿರುವ ಶ್ರೀ ಮಹಾಂತೇಶ್ವರ ಸಂಯುಕ್ತ ಪದವಿಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ಕಲಾ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿರುವ ಮಲ್ಲಿಕಾರ್ಜುನ, ಬುಧವಾರ ನಡೆದ ಪದವಿಪೂರ್ವ ಕಾಲೇಜುಗಳ ಜಿಲ್ಲಾಮಟ್ಟದ ಕ್ರೀಡಾಕೂಟದ ಕುಸ್ತಿ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿದ್ದಾನೆ. ಈ ಮೂಲಕ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಲು ಆಯ್ಕೆಯಾಗಿದ್ದಾನೆ.
ಗ್ರಾಮೀಣ ಭಾಗದ ವಿದ್ಯಾರ್ಥಿಯಾಗಿರುವ ಮಲ್ಲಿಕಾರ್ಜುನನ ಸಾಧನೆಗೆ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾದ ಕಾಯಯೋಗಿ ದಾಸೋಹಮೂರ್ತಿ ಸಿದ್ಧರಾಮ ಶಿವಾಚಾರ್ಯರು, ಶ್ರೀ ಮಹಾಂತೇಶ್ವರ ಧರ್ಮಕ್ಷೇತ್ರದ ಪೀಠಾಧಿಪತಿ ವೀರಮಹಾಂತ ಶಿವಾಚಾರ್ಯರು, ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಚನ್ನಬಸಯ್ಯ ಹಿರೇಮಠ, ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ದೇವನಗೌಡ ಪಾಟೀಲ, ಕಾಲೇಜಿನ ಪ್ರಾಚಾರ್ಯ ದಯಾನಂದ ಬಂದರವಾಡ ಹಾಗೂ ಉಪನ್ಯಾಸಕರು ಮತ್ತು ಸಿಬ್ಬಂದಿ ವರ್ಗದವರು ಹರ್ಷ ವ್ಯಕ್ತಪಡಿಸಿ ಶುಭ ಹಾರೈಸಿದ್ದಾರೆ.
ಈ ಸಂದರ್ಭದಲ್ಲಿ ಜಿಲ್ಲೆಯ ವಿವಿಧ ಕಾಲೇಜುಗಳ ಪ್ರಾಚಾರ್ಯರು, ಉಪನ್ಯಾಸಕರು ಹಾಗೂ ಕಾಲೇಜಿನ ದೈಹಿಕ ಶಿಕ್ಷಣ ಉಪನ್ಯಾಸಕ ಅಜಿತಕುಮಾರ ಭಕರೆ ಅವರು ವಿದ್ಯಾರ್ಥಿಯನ್ನು ಗೌರವಿಸಿ ಅಭಿನಂದಿಸಿದ್ದಾರೆ ಎಂದು ಕಾಲೇಜಿನ ಉಪನ್ಯಾಸಕ ವೀರಣ್ಣ ಡಿ. ಪಟ್ಟಣ ತಿಳಿಸಿದ್ದಾರೆ.



