ಜಿಲ್ಲಾಸುದ್ದಿ

ಬರದಿಂದ ತೊಗರಿ ಬೆಳೆ ಹಾನಿ: ಬೆಳೆ ವಿಮೆಯಡಿ ಸಂಪೂರ್ಣ ಪರಿಹಾರಕ್ಕೆ ಪೂಜಾರಿ ಆಗ್ರಹ

ಕಲಬುರಗಿ, ಅ. 10: ಬರದ ಪರಿಣಾಮ ತೊಗರಿ ಬೆಳೆ ಸಂಪೂರ್ಣ ಒಣಗಿ ಹಾನಿಯಾಗಿರುವ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿ ಸಂಪೂರ್ಣ ಬೆಳೆ ಪರಿಹಾರ ನೀಡಬೇಕು ಎಂದು ತಾವರಗೇರಾ ಗ್ರಾಮದ ರೈತ ಶಿವರಾಜ್ ತಂದೆ ಶರಣಪ್ಪ ಪೂಜಾರಿ ಆಗ್ರಹಿಸಿದ್ದಾರೆ.

ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಾವರಗೇರಾ ಗ್ರಾಮದ ಸರ್ವೆ ಸಂಖ್ಯೆ 107/3ರಲ್ಲಿರುವ ಮೂರು ಎಕರೆ ಐದು ಗುಂಟೆ ಜಮೀನಿನಲ್ಲಿ ತೊಗರಿ ಬೆಳೆದಿದ್ದೆ. ಆದರೆ, ಮಳೆಯ ಕೊರತೆಯಿಂದ ಬೆಳೆ ಸಂಪೂರ್ಣ ಒಣಗಿ ನಷ್ಟವಾಗಿದೆ ಎಂದು ಅಳಲು ತೋಡಿಕೊಂಡರು.

ಕಳೆದ ಮೇ ತಿಂಗಳ ಕೊನೆಯ ವಾರದಲ್ಲಿ ಮೊದಲ ಬಾರಿಗೆ ತೊಗರಿ ಬಿತ್ತನೆ ಮಾಡಿದ್ದೆ. ನಂತರ ಎರಡು ತಿಂಗಳ ಕಾಲ ಮಳೆ ಬಾರದ ಕಾರಣ ಬೆಳೆ ಸಂಪೂರ್ಣ ಹಾನಿಯಾಯಿತು. ಜುಲೈ ಮೊದಲ ವಾರದಲ್ಲಿ ಭೂಮಿ ತೇವಗೊಂಡ ಬಳಿಕ ಮತ್ತೆ ತೊಗರಿ ಬಿತ್ತನೆ ಮಾಡಿದ್ದೆ. ಸೆಪ್ಟೆಂಬರ್ 17ರಂದು ಬೆಳೆ ವಿಮೆ ಮಾಡಿಸಿ, ವಿಮಾ ಕಂಪನಿಗೆ ₹1,456.82 ಪಾವತಿಸಿದ್ದೇನೆ ಎಂದು ತಿಳಿಸಿದರು.

ಎರಡನೇ ಬಾರಿ ಬಿತ್ತನೆ ಮಾಡಿದ ಬಳಿಕ ಸೆಪ್ಟೆಂಬರ್ 11ರವರೆಗೆ ಒಂದು ಹನಿಯೂ ಮಳೆ ಬಂದಿರಲಿಲ್ಲ. ಇದರಿಂದ ತೊಗರಿ ಬೆಳೆ ಬಿಸಿಲಿನ ತಾಪಕ್ಕೆ ತುತ್ತಾಗಿ ಸಂಪೂರ್ಣ ಒಣಗಿ ನಿಂತಿದೆ. ಬೆಳೆ ಕೈಗೆ ಬರುವ ನಿರೀಕ್ಷೆಯಲ್ಲಿದ್ದ ರೈತನಿಗೆ ಭಾರಿ ನಷ್ಟ ಉಂಟಾಗಿದೆ ಎಂದು ಹೇಳಿದರು.

ಆದ್ದರಿಂದ ಬೆಳೆ ವಿಮಾ ಅಧಿಕಾರಿಗಳು ಜಮೀನಿಗೆ ಭೇಟಿ ನೀಡಿ ಬೆಳೆ ಹಾನಿಯನ್ನು ಪರಿಶೀಲಿಸಬೇಕು. ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿ ಅರ್ಹ ಪರಿಹಾರವನ್ನು ಸಂಪೂರ್ಣವಾಗಿ ನೀಡಬೇಕು. ಜೊತೆಗೆ ಕೃಷಿಗಾಗಿ ಪಡೆದಿರುವ ಬ್ಯಾಂಕ್ ಸಾಲವನ್ನು ಮನ್ನಾ ಮಾಡಲು ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಶಿವರಾಜ್ ಪೂಜಾರಿ ಒತ್ತಾಯಿಸಿದರು.

sswnews

https://sswnewskannada.com

Related Articles

Leave a Reply

Your email address will not be published. Required fields are marked *

Back to top button