ಜಿಲ್ಲಾಸುದ್ದಿ

ಅಣ್ಣ–ತಂಗಿ ನಡುವೆ ವೈಮನಸ್ಸು: ಮಹಾಗಾಂವ್ ಠಾಣೆ ಪಿಎಸ್‌ಐ ವಿರುದ್ಧ ಕ್ರಮಕ್ಕೆ ಆಗ್ರಹ

ಕಲಬುರಗಿ, ಅ. 10: ಅಣ್ಣ ಮತ್ತು ತಂಗಿಯ ನಡುವೆ ವೈಮನಸ್ಸು ಹೆಚ್ಚಾಗಲು ಮಹಾಗಾಂವ್ ಪೊಲೀಸ್ ಠಾಣೆಯ ಪಿಎಸ್‌ಐ ಬಸವರಾಜ್ ಚಿಕ್ಕೋಡಿ ಅವರೇ ಕಾರಣರಾಗಿದ್ದಾರೆ ಎಂದು ಆರೋಪಿಸಿರುವ ಹರಸೂರು ಗ್ರಾಮದ ನಿವಾಸಿ ಅಂಬಣ್ಣ, ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಂಬಣ್ಣ, ಹರಸೂರು ಗ್ರಾಮದ ಮನೆ ಸಂಖ್ಯೆ 959ರ ಆಸ್ತಿಯನ್ನು ತಾನು ಖರೀದಿಸಿ, ಗ್ರಾಮ ಪಂಚಾಯಿತಿಯಲ್ಲಿ ತನ್ನ ಹೆಸರಿಗೆ ಖಾತೆ ಬದಲಾವಣೆ ಮಾಡಿಸಿಕೊಂಡು, 11ಇ ದಾಖಲೆ ಮಾಡಿಸಿ ಮನೆ ತೆರಿಗೆ ಪಾವತಿಸುತ್ತಿದ್ದೇನೆ. ಸ್ವಂತ ದುಡಿಮೆಯಿಂದ ಹಣ ಹೊಂದಿಸಿ ಈ ಮನೆಯನ್ನು ನಿರ್ಮಿಸಿದ್ದೇನೆ ಎಂದು ತಿಳಿಸಿದರು.

ಮನೆ ನಿರ್ಮಿಸಿದ ಬಳಿಕ ತನ್ನ ತಂಗಿ ರುಕ್ಮಿಣಿಯ ಪತಿ ಪ್ರಕಾಶ್ ಅವರು ಕೆಲವು ದಿನಗಳವರೆಗೆ ಮನೆಯಲ್ಲಿ ಇರಲು ಅವಕಾಶ ಕೇಳಿದ್ದರಿಂದ ಒಪ್ಪಿಕೊಂಡಿದ್ದೆ. ಆದರೆ, ತಂಗಿಗೆ ಮದುವೆಯಾಗಿರುವುದರಿಂದ ಆಕೆ ತನ್ನ ಗಂಡನ ಮನೆಯಲ್ಲಿರಬೇಕು ಎಂದು ತಿಳಿಸಿ, ಆಕೆಯನ್ನು ಗಂಡನ ಮನೆಗೆ ಕಳುಹಿಸಿದ್ದೆ ಎಂದು ಹೇಳಿದರು.

ಸುಮಾರು 20 ದಿನಗಳ ಬಳಿಕ ತಂಗಿ ಮನೆಗೆ ಯಾರೂ ಇಲ್ಲದ ಸಮಯದಲ್ಲಿ ಬಂದು, ಮನೆಯ ಬೀಗ ಮುರಿದು ಒಳಗಿದ್ದ ಹೆಸರುಕಾಳು ಮಾರಾಟದಿಂದ ಬಂದಿದ್ದ ₹2.30 ಲಕ್ಷ ಹಣವನ್ನು ಕಳವು ಮಾಡಿಕೊಂಡಿದ್ದಾಳೆ. ಬಳಿಕ ನಮ್ಮ ವಿರುದ್ಧವೇ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ ಎಂದು ಅಂಬಣ್ಣ ಆರೋಪಿಸಿದರು.

ಈ ಕುರಿತು ತಾನೂ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾಗಿ ತಿಳಿಸಿದ ಅವರು, ಮಹಾಗಾಂವ್ ಠಾಣೆಯ ಪಿಎಸ್‌ಐ ಬಸವರಾಜ್ ಚಿಕ್ಕೋಡಿ ಅವರು ತನ್ನನ್ನು ಹೆದರಿಸಿ, ತಂಗಿ ಅತ್ಯಾಚಾರ ಪ್ರಕರಣ ದಾಖಲಿಸಿದರೆ ಏನು ಮಾಡುತ್ತೀಯಾ ಎಂದು ಬೆದರಿಕೆ ಹಾಕಿ ನಿಂದಿಸಿದ್ದಾರೆ ಎಂದು ಆರೋಪಿಸಿದರು.

ರಾತ್ರಿ ಮನೆಯ ಕಾವಲಿಗಾಗಿ ಬಂದಿದ್ದ ಪೊಲೀಸ್ ಅಧಿಕಾರಿಗಳು ಮಸೀದಿಯ ಒಳಗೆ ಕುಳಿತು ಮದ್ಯಪಾನ ಮಾಡಿದ್ದರು ಎಂಬ ಆರೋಪವನ್ನೂ ಅವರು ಮಾಡಿದರು. ಇಷ್ಟಾದರೂ ತಮಗೆ ನ್ಯಾಯ ದೊರಕಿಸಿಕೊಡುವ ಬದಲು, ಪಿಎಸ್‌ಐ ಅವರು ತಂಗಿಗೆ ಪ್ರಚೋದನೆ ನೀಡಿ ತನಗೆ ಅನ್ಯಾಯವಾಗುವಂತೆ ಮಾಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ತಮ್ಮ ಮತ್ತು ತಂಗಿಯ ನಡುವಿನ ವೈಮನಸ್ಸು ಹೆಚ್ಚಾಗಲು ಕಾರಣರಾಗಿದ್ದಾರೆ ಎನ್ನಲಾದ ಪಿಎಸ್‌ಐ ಬಸವರಾಜ್ ಚಿಕ್ಕೋಡಿ ಅವರ ವಿರುದ್ಧ ಸೂಕ್ತ ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳಬೇಕು. ಅಲ್ಲದೆ, ಕಳವು ಮಾಡಲಾಗಿದೆ ಎಂದು ಆರೋಪಿಸಿರುವ ₹2.30 ಲಕ್ಷ ಹಣವನ್ನು ಮರಳಿಸಿಕೊಡಲು ಕ್ರಮ ಕೈಗೊಳ್ಳಬೇಕು ಎಂದು ಅಂಬಣ್ಣ ಆಗ್ರಹಿಸಿದರು.

sswnews

https://sswnewskannada.com

Related Articles

Leave a Reply

Your email address will not be published. Required fields are marked *

Back to top button