ಕಲಬುರಗಿಯಲ್ಲಿ ಅ.11ರಿಂದ ಕಾಂಬಾರ್ ಅವರ ಏಕವ್ಯಕ್ತಿ ಶಿಲ್ಪಕಲಾ ಪ್ರದರ್ಶನ

ಕಲಬುರಗಿ, ಅ.10: ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆರ್ಥಿಕ ನೆರವಿನೊಂದಿಗೆ ಶಿಲ್ಪಕಲಾವಿದ ಮೌನೇಶ ಕೆ. ಕಾಂಬಾರ್ ಅವರ ಏಕವ್ಯಕ್ತಿ ಶಿಲ್ಪಕಲಾ ಪ್ರದರ್ಶನವನ್ನು ಅಕ್ಟೋಬರ್ 11ರಿಂದ 13ರವರೆಗೆ ಕಲಬುರಗಿ ನಗರದ ಮಹಾನಗರ ಪಾಲಿಕೆ ಉದ್ಯಾನವನದ ಸಮೀಪದಲ್ಲಿರುವ ದಿ ಐಡಿಯಲ್ ಫೈನ್ ಆರ್ಟ್ಸ್ ಸಂಸ್ಥೆಯ ಎಂ.ಎಂ.ಕೆ. ಕಾಲೇಜ್ ಆಫ್ ವಿಷುಯಲ್ ಆರ್ಟ್ಸ್ನ ಮಾತೋಶ್ರೀ ನೀಲಗಂಗಮ್ಮ ಜಿ. ಅಂದಾನಿ ಕಲಾ ಗ್ಯಾಲರಿಯಲ್ಲಿ ಆಯೋಜಿಸಲಾಗಿದೆ ಎಂದು ಹಿರಿಯ ಕಲಾವಿದ ಡಾ. ಪರಶುರಾಮ್ ಪಿ. ತಿಳಿಸಿದ್ದಾರೆ.
ಅಕ್ಟೋಬರ್ 11ರಂದು ಸಂಜೆ 5 ಗಂಟೆಗೆ ಹಿರಿಯ ಸಾಹಿತಿ ನರಸಿಂಗರಾವ್ ಹೇಮನೂರು ಅವರು ಶಿಲ್ಪಕಲಾ ಪ್ರದರ್ಶನವನ್ನು ಉದ್ಘಾಟಿಸಲಿದ್ದಾರೆ. ಹಿರಿಯ ಶಿಲ್ಪಕಲಾವಿದ ವೀರಣ್ಣ ಎಂ. ಶಿಲ್ಪಿ ಹಾಗೂ ಯಾದಗಿರಿಯ ಶಿಲ್ಪಕಲಾವಿದ ಪ್ರಶಾಂತ್ ಕುಮಾರ್ ಜಿ. ಮಠ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಚಿತ್ರಕಲಾ ಮತ್ತು ಶಿಲ್ಪಕಲಾವಿದ ಗೌತಮ್ ವಿ. ಅಂದಾನಿ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಅವರು ವಿವರಿಸಿದ್ದಾರೆ.
ಮೌನೇಶ ಕೆ. ಕಾಂಬಾರ್ ಅವರು ಮರದ ಮಾಧ್ಯಮದಲ್ಲಿ ರೂಪಿಸಿರುವ ಹತ್ತಕ್ಕೂ ಹೆಚ್ಚು ಸಾಂಪ್ರದಾಯಿಕ ಶಿಲ್ಪಕಲಾಕೃತಿಗಳು ಪ್ರದರ್ಶನದಲ್ಲಿ ಕಲಾಸಕ್ತರ ಗಮನ ಸೆಳೆಯಲಿವೆ. ಮರದ ಮೇಲೆ ತಮ್ಮ ಕಲ್ಪನೆ ಮತ್ತು ಕೌಶಲವನ್ನು ಬಳಸಿ ರೂಪಿಸಿರುವ ಕಲಾಕೃತಿಗಳು ಸಾಂಪ್ರದಾಯಿಕ ಶಿಲ್ಪಕಲೆಯ ಸೊಬಗನ್ನು ಪರಿಚಯಿಸಲಿವೆ.
ಕಾಂಬಾರ್ ಅವರು ಕರ್ನಾಟಕ ಶಿಲ್ಪಕಲಾ ಅಕಾಡೆಮಿಯ 13ನೇ ವಾರ್ಷಿಕ ಶಿಲ್ಪಕಲಾ ಪ್ರದರ್ಶನದಲ್ಲಿ ರಾಮ್ಸನ್ಸ್ ಕಲಾಪ್ರತಿಷ್ಠಾನದ ದತ್ತಿ ಪ್ರಶಸ್ತಿಯನ್ನು ಪಡೆದಿದ್ದಾರೆ. ಅಲ್ಲದೆ, ಬೆಂಗಳೂರು, ಧಾರವಾಡ, ಹಂಪಿ, ವಿಜಯಪುರ, ಸಿರಸಂಗಿ ಹಾಗೂ ಯಾದಗಿರಿಯಲ್ಲಿ ನಡೆದ ರಾಜ್ಯಮಟ್ಟದ ಶಿಲ್ಪಕಲಾ ಶಿಬಿರಗಳಲ್ಲಿ ಭಾಗವಹಿಸಿ ತಮ್ಮ ಕಲಾಪ್ರತಿಭೆಯನ್ನು ಪ್ರದರ್ಶಿಸಿದ್ದಾರೆ.
ಕಲಾಸಕ್ತರು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಈ ಶಿಲ್ಪಕಲಾ ಪ್ರದರ್ಶನಕ್ಕೆ ಭೇಟಿ ನೀಡಿ ಕಲಾಕೃತಿಗಳನ್ನು ವೀಕ್ಷಿಸುವ ಮೂಲಕ ಕಲಾವಿದನ ಸೃಜನಶೀಲ ಪ್ರಯತ್ನಕ್ಕೆ ಪ್ರೋತ್ಸಾಹ ನೀಡಬಹುದಾಗಿದೆ.



