ಜಿಲ್ಲಾಸುದ್ದಿ

ಸಚಿವ ಖಂಡ್ರೆ ತವರಲ್ಲೇ ಗ್ರಾಮ ಪಂಚಾಯಿತಿ ಡಾಟಾ ಎಂಟ್ರಿ ಆಪರೇಟರ್ ಮೇಲೆ ಹಲ್ಲೆ: ವಿಡಿಯೊ ವೈರಲ್

ಬೀದರ್, ಅ.8– ರಾಜ್ಯದ ಗ್ರಾಮೀಣಾಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರ ತವರಲ್ಲೇ ಗ್ರಾಮ ಪಂಚಾಯಿತಿ ಡಾಟಾ ಎಂಟ್ರಿ ಆಪರೇಟರ್ ಮೇಲೆ ಗ್ರಾಮ ಪಂಚಾಯಿತಿ ಸದಸ್ಯನೊಬ್ಬ ಹಲ್ಲೆ ನಡೆಸಿರುವ ಘಟನೆ ಜಿಲ್ಲೆಯ ಔರಾದ್ ತಾಲ್ಲೂಕಿನ ಗುಡಪಳ್ಳಿ ಗ್ರಾಮದಲ್ಲಿ ನಡೆದಿದೆ.

ಗುಡಪಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಡಾಟಾ ಎಂಟ್ರಿ ಆಪರೇಟರ್ ಮಹಾದೇವ ಅವರ ಮೇಲೆ ಗ್ರಾಮ ಪಂಚಾಯಿತಿ ಸದಸ್ಯ ಏಕಾಏಕಿ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ. ಸದಸ್ಯನ ಅಧಿಕಾರಾವಧಿ ಮುಗಿದಿದ್ದರೂ ಪಂಚಾಯಿತಿ ಕಚೇರಿಗೆ ನುಗ್ಗಿ ಅಮಾನುಷವಾಗಿ ಹಲ್ಲೆ ನಡೆಸಿರುವುದಾಗಿ ಆರೋಪಿಸಲಾಗಿದೆ.

ಹಲ್ಲೆಗೆ ಸಂಬಂಧಿಸಿದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಆದರೆ ಈ ವಿಡಿಯೊ ಒಂದು ವರ್ಷದ ಹಿಂದೆಯೇ ನಡೆದಿರುವ ಘಟನೆಯದ್ದು ಎಂದು ಪ್ರಸ್ತುತ ಗ್ರಾಮ ಪಂಚಾಯಿತಿ ಅಧಿಕಾರಿಗಳು ಹಾಗೂ ಸಿಬ್ಬಂದಿ ಸ್ಪಷ್ಟಪಡಿಸಿದ್ದಾರೆ ಎನ್ನಲಾಗಿದೆ.

ಹಳೆಯ ಘಟನೆಯ ವಿಡಿಯೊ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಹಿನ್ನೆಲೆಯಲ್ಲಿ, ಹಲ್ಲೆ ನಡೆಸಿದ ಗ್ರಾಮ ಪಂಚಾಯಿತಿ ಸದಸ್ಯನ ವಿರುದ್ಧ ತಕ್ಷಣ ಎಫ್‌ಐಆರ್ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಗ್ರಾಮ ಪಂಚಾಯಿತಿ ಅಧಿಕಾರಿಗಳು ಹಾಗೂ ಸಿಬ್ಬಂದಿ ಒತ್ತಾಯಿಸಿದ್ದಾರೆ.

ಕರ್ತವ್ಯ ನಿರ್ವಹಿಸುತ್ತಿದ್ದ ಸಿಬ್ಬಂದಿಯ ಮೇಲೆ ಕಚೇರಿಯೊಳಗೆ ನುಗ್ಗಿ ಹಲ್ಲೆ ನಡೆಸಿರುವುದು ಗಂಭೀರ ಘಟನೆ. ಸರ್ಕಾರಿ ಕರ್ತವ್ಯದಲ್ಲಿರುವ ಸಿಬ್ಬಂದಿಗೆ ಸೂಕ್ತ ಭದ್ರತೆ ಒದಗಿಸುವ ಜತೆಗೆ, ಘಟನೆಗೆ ಕಾರಣರಾದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂಬ ಆಗ್ರಹ ಕೇಳಿಬಂದಿದೆ.

sswnews

https://sswnewskannada.com

Related Articles

Leave a Reply

Your email address will not be published. Required fields are marked *

Back to top button