ಸರ್ವ ಸದಸ್ಯರ ಪರಿಶ್ರಮದಿಂದ ಸಂಘದ ಸಾಧನೆ: ಪಟ್ಟಣಕರ್

ಕಲಬುರಗಿ, ಅ.7– ಲಾಭ ಎಂದರೆ ಕೇವಲ ಹಣದ ಹೆಚ್ಚಳವಲ್ಲ; ಅದು ನಮ್ಮ ಸಂಘದ ಮೇಲಿನ ಸದಸ್ಯರ ವಿಶ್ವಾಸದ ಪ್ರತೀಕವಾಗಿದೆ ಎಂದು ಕಲ್ಯಾಣ ಕರ್ನಾಟಕ ವಕೀಲರ ಸೌಹಾರ್ದ ಸಹಕಾರಿ ನಿಯಮಿತದ ಅಧ್ಯಕ್ಷ ಅಂಬಾರಾಯ ಪಟ್ಟಣಕರ್ ಹೇಳಿದರು.
ನಗರದ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿರುವ ಕಲ್ಯಾಣ ಕರ್ನಾಟಕ ವಕೀಲರ ಸೌಹಾರ್ದ ಸಹಕಾರಿ ಸಂಘದ ಕಚೇರಿಯಲ್ಲಿ ನಡೆದ ನಾಲ್ಕನೇ ವರ್ಷದ ವಾರ್ಷಿಕೋತ್ಸವದ ಸರಳ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕಳೆದ ನಾಲ್ಕು ವರ್ಷಗಳಲ್ಲಿ ಸಂಘ ನಡೆಸಿಕೊಂಡು ಬಂದಿರುವ ಹಣಕಾಸಿನ ವ್ಯವಹಾರ ಲಾಭದಾಯಕವಾಗಿರುವುದು ಎಲ್ಲ ಸದಸ್ಯರಿಗೂ ಹೆಮ್ಮೆಯ ವಿಷಯವಾಗಿದೆ. ಈ ಸಾಧನೆ ಯಾವುದೇ ಒಬ್ಬ ವ್ಯಕ್ತಿಯ ಪರಿಶ್ರಮದ ಫಲವಲ್ಲ. ಸಂಘದ ಪ್ರತಿಯೊಬ್ಬ ಸದಸ್ಯರ ಸಹಕಾರ, ನಂಬಿಕೆ ಹಾಗೂ ಜವಾಬ್ದಾರಿಯುತ ನಡೆ ಇದರ ಹಿಂದೆ ಇದೆ ಎಂದು ತಿಳಿಸಿದರು.
ಕಳೆದ ನಾಲ್ಕು ವರ್ಷಗಳಲ್ಲಿ ಸಂಘದ ಆದಾಯ ಮತ್ತು ವೆಚ್ಚಗಳನ್ನು ಶಿಸ್ತುಬದ್ಧವಾಗಿ ನಿರ್ವಹಿಸುವ ಮೂಲಕ ಆರ್ಥಿಕವಾಗಿ ಸದೃಢವಾದ ಸ್ಥಿತಿಯನ್ನು ತಲುಪಲಾಗಿದೆ. ಸದಸ್ಯರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಕೈಗೊಂಡ ನಿರ್ಧಾರಗಳು ಹಾಗೂ ಪದಾಧಿಕಾರಿಗಳ ಪ್ರಾಮಾಣಿಕ ಪ್ರಯತ್ನಗಳು ಈ ಫಲಿತಾಂಶಕ್ಕೆ ಕಾರಣವಾಗಿವೆ ಎಂದರು.
ಸಂಘದ ಆರ್ಥಿಕ ಸದೃಢತೆಯನ್ನು ಮುಂದಿನ ದಿನಗಳಲ್ಲಿ ಸದಸ್ಯರ ಕಲ್ಯಾಣ, ವೃತ್ತಿಪರ ಅಭಿವೃದ್ಧಿ, ಸಾಮಾಜಿಕ ಸೇವೆ ಹಾಗೂ ಸಂಘದ ಮೂಲಸೌಕರ್ಯಗಳ ಅಭಿವೃದ್ಧಿಗೆ ಸಮರ್ಪಕವಾಗಿ ಬಳಸಿಕೊಳ್ಳುವುದು ಎಲ್ಲರ ಜವಾಬ್ದಾರಿಯಾಗಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಪಾರದರ್ಶಕತೆ, ಉತ್ತಮ ಆಡಳಿತ ಮತ್ತು ಸದಸ್ಯರ ಸಕ್ರಿಯ ಭಾಗವಹಿಸುವಿಕೆಯೊಂದಿಗೆ ಸಂಘವನ್ನು ಮತ್ತಷ್ಟು ಬಲಪಡಿಸುವ ಸಂಕಲ್ಪ ಮಾಡೋಣ ಎಂದು ಕರೆ ನೀಡಿದರು.
ಸಂಘದ ಏಕತೆ, ಸದಸ್ಯರ ಹಿತ ಮತ್ತು ವೃತ್ತಿಯ ಗೌರವ ಸದಾ ನಮ್ಮ ಮೊದಲ ಆದ್ಯತೆಯಾಗಿರಬೇಕು. ಇದೇ ರೀತಿಯ ಒಗ್ಗಟ್ಟು ಮತ್ತು ಸಹಕಾರ ಮುಂದೆಯೂ ಮುಂದುವರಿಯಲಿ ಎಂದು ಅವರು ಆಶಿಸಿದರು.
ಈ ಸಂದರ್ಭದಲ್ಲಿ ಗುಲಬರ್ಗಾ ನ್ಯಾಯವಾದಿಗಳ ಸಂಘದ ಅಧ್ಯಕ್ಷ ಶಿವಕುಮಾರ ಪಸಾರ ಹಾಗೂ ಪ್ರಧಾನ ಕಾರ್ಯದರ್ಶಿ ಎಸ್.ಬಿ. ವಾಡಿ ಅವರು ಸಹಕಾರಿ ಪಿತಾಮಹ ಸಿದ್ದನಗೌಡ ಪಾಟೀಲ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಸೌಹಾರ್ದ ಸಂಘಕ್ಕೆ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಜನಪರ ಹೋರಾಟಗಾರ ಹಾಗೂ ನ್ಯಾಯವಾದಿ ಹಣಮಂತರಾಯ ಅಟ್ಟೂರ ಅತಿಥಿಯಾಗಿ ಭಾಗವಹಿಸಿದ್ದರು. ಸೌಹಾರ್ದ ಸಂಘದ ಉಪಾಧ್ಯಕ್ಷ ವಿಶ್ವರಾಧ್ಯ ಈಜೇರಿ, ನಿರ್ದೇಶಕರಾದ ರಮೇಶ ಕಡಾಳೆ, ಹಣಮಂತ ಭಾವಿಕಟ್ಟಿ, ವಿಜಯಲಕ್ಷ್ಮಿ ಯರಗೋಳ, ಪತೃಬಿ ಶಾ., ಸಂಗೀತಾ, ಸರೋಜ, ನಿರ್ಮಲ ಬಿರಾದಾರ, ಸಿಇಒ ಅಶ್ವಿನಿ ಸೇರಿದಂತೆ ನಿರ್ದೇಶಕರು ಹಾಗೂ ಅನೇಕ ನ್ಯಾಯವಾದಿಗಳು ಉಪಸ್ಥಿತರಿದ್ದರು.



