ಆಳಂದ ವಸತಿ ನಿಲಯದಲ್ಲಿ ಕಳಪೆ ಆಹಾರ ಸೇವಿಸಿ ವಿದ್ಯಾರ್ಥಿಗಳು ಅಸ್ವಸ್ಥ

ಆಳಂದ, ಅ.7– ಪಟ್ಟಣದ ಡಾ. ಬಿ.ಆರ್. ಅಂಬೇಡ್ಕರ್ ವಸತಿ ನಿಲಯದಲ್ಲಿ ಕಳಪೆ ಆಹಾರ ಸೇವನೆಯಿಂದ ಸುಮಾರು 12 ವಿದ್ಯಾರ್ಥಿಗಳು ಅಸ್ವಸ್ಥಗೊಂಡಿರುವ ಘಟನೆ ನಡೆದಿದೆ.
ವಸತಿ ನಿಲಯದಲ್ಲಿ ರೊಟ್ಟಿ, ಅನ್ನ ಹಾಗೂ ಸಾಂಬಾರ್ ಸೇವಿಸಿದ ಬಳಿಕ ವಿದ್ಯಾರ್ಥಿಗಳಲ್ಲಿ ಏಕಾಏಕಿ ತೀವ್ರ ಹೊಟ್ಟೆನೋವು ಹಾಗೂ ವಾಂತಿ ಕಾಣಿಸಿಕೊಂಡಿದೆ. ಅಸ್ವಸ್ಥಗೊಂಡ ವಿದ್ಯಾರ್ಥಿಗಳನ್ನು ತಕ್ಷಣವೇ ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ವಸತಿ ನಿಲಯಕ್ಕೆ ಕಳಪೆ ಗುಣಮಟ್ಟದ ಆಹಾರ ಸಾಮಗ್ರಿಗಳನ್ನು ಸರಬರಾಜು ಮಾಡಿದ್ದೇ ಆಹಾರ ವಿಷಬಾಧೆಗೆ ಕಾರಣವಾಗಿರಬಹುದು ಎಂದು ಶಂಕಿಸಲಾಗಿದೆ. ಘಟನೆ ತಿಳಿಯುತ್ತಿದ್ದಂತೆ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಸೂಕ್ತ ಕ್ರಮಕ್ಕೆ ಆಗ್ರಹ
ತಾಲ್ಲೂಕಿನ ಡಾ. ಬಿ.ಆರ್. ಅಂಬೇಡ್ಕರ್ ಸರ್ಕಾರಿ ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯದಲ್ಲಿ ಊಟ ಸೇವಿಸಿದ ಬಳಿಕ ಸುಮಾರು 12 ವಿದ್ಯಾರ್ಥಿಗಳು ಅಸ್ವಸ್ಥರಾಗಿ ಆಳಂದ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿರುವ ಘಟನೆ ಆತಂಕಕ್ಕೆ ಕಾರಣವಾಗಿದೆ.
ವಿದ್ಯಾರ್ಥಿಗಳ ಆರೋಗ್ಯದಂತಹ ಸೂಕ್ಷ್ಮ ವಿಚಾರದಲ್ಲಿ ಘಟನೆ ನಡೆದ ತಕ್ಷಣವೇ ಸಂಬಂಧಿಸಿದ ಅಧಿಕಾರಿಗಳು ವಸತಿ ನಿಲಯಕ್ಕೆ ಭೇಟಿ ನೀಡಿ ಆಹಾರದ ಗುಣಮಟ್ಟ, ಅಡುಗೆ ವ್ಯವಸ್ಥೆ, ಸ್ವಚ್ಛತೆ ಹಾಗೂ ವಿದ್ಯಾರ್ಥಿಗಳ ಆರೋಗ್ಯದ ಕುರಿತು ಸಮಗ್ರ ಪರಿಶೀಲನೆ ನಡೆಸಬೇಕು ಎಂದು ಕರ್ನಾಟಕ ಭೀಮ್ ಸೇನೆಯ ಸಂಸ್ಥಾಪಕ ರಾಜ್ಯಾಧ್ಯಕ್ಷ ಶಂಕರ್ ರಾಮಲಿಂಗಯ್ಯ ಹಾಗೂ ಜಿಲ್ಲಾಧ್ಯಕ್ಷ ಸಂಜಯ್ ಆಗ್ರಹಿಸಿದ್ದಾರೆ.
ಘಟನೆಗೆ ವಸತಿ ನಿಲಯದ ವಾರ್ಡನ್ ಗುಂಡೇರಾವ್ ಹಾಗೂ ಸಮಾಜ ಕಲ್ಯಾಣ ಇಲಾಖೆಯ ತಾಲ್ಲೂಕು ಸಹಾಯಕ ನಿರ್ದೇಶಕಿ ವಿಜಯಲಕ್ಷ್ಮಿ ಹೊಲ್ಕರ್ ಅವರ ಕರ್ತವ್ಯ ನಿರ್ವಹಣೆಯ ಬಗ್ಗೆಯೂ ಪ್ರಶ್ನೆಗಳು ಉದ್ಭವಿಸಿವೆ. ವಿದ್ಯಾರ್ಥಿಗಳು ಅಸ್ವಸ್ಥಗೊಳ್ಳಲು ನಿಜವಾದ ಕಾರಣವೇನು ಎಂಬುದನ್ನು ನಿಷ್ಪಕ್ಷಪಾತ ತನಿಖೆಯ ಮೂಲಕ ತಕ್ಷಣ ಬಹಿರಂಗಪಡಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ತನಿಖೆಯಲ್ಲಿ ತಪ್ಪಿತಸ್ಥರು ಎಂದು ಸಾಬೀತಾದವರ ವಿರುದ್ಧ ಕಠಿಣ ಇಲಾಖಾ ಹಾಗೂ ಕಾನೂನು ಕ್ರಮ ಕೈಗೊಳ್ಳಬೇಕು. ವಿದ್ಯಾರ್ಥಿಗಳ ಜೀವ ಮತ್ತು ಆರೋಗ್ಯದ ವಿಚಾರದಲ್ಲಿ ಯಾವುದೇ ರೀತಿಯ ನಿರ್ಲಕ್ಷ್ಯಕ್ಕೆ ಅವಕಾಶ ನೀಡಬಾರದು ಎಂದು ಆಗ್ರಹಿಸಿದ್ದಾರೆ.
ಅಸ್ವಸ್ಥಗೊಂಡಿರುವ ಎಲ್ಲ ವಿದ್ಯಾರ್ಥಿಗಳಿಗೆ ಸಮರ್ಪಕ ಹಾಗೂ ಉಚಿತ ವೈದ್ಯಕೀಯ ಚಿಕಿತ್ಸೆ ನೀಡಬೇಕು. ಸೇವಿಸಲಾಗಿದ್ದ ಆಹಾರ ಮತ್ತು ಕುಡಿಯುವ ನೀರಿನ ಮಾದರಿಗಳನ್ನು ತಕ್ಷಣ ಪರೀಕ್ಷೆಗೆ ಒಳಪಡಿಸಬೇಕು. ವಸತಿ ನಿಲಯದ ಅಡುಗೆಮನೆ ಹಾಗೂ ಆಹಾರ ವಿತರಣಾ ವ್ಯವಸ್ಥೆಯ ಸಮಗ್ರ ಪರಿಶೀಲನೆ ನಡೆಸಬೇಕು. ಘಟನೆ ಕುರಿತು ನಿಷ್ಪಕ್ಷಪಾತ ತನಿಖೆ ನಡೆಸಿ ನಿರ್ಲಕ್ಷ್ಯ ಸಾಬೀತಾದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ವಿದ್ಯಾರ್ಥಿಗಳ ಆರೋಗ್ಯದೊಂದಿಗೆ ಯಾರಿಗೂ ಆಟವಾಡಲು ಅವಕಾಶ ನೀಡಬಾರದು. ಘಟನೆಯ ಸತ್ಯಾಂಶ ಹೊರಬಂದು ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಬೇಕು ಎಂದು ಅವರು ಆಗ್ರಹಿಸಿದ್ದಾರೆ.



