ವಿಶ್ವೇಶ್ವರಯ್ಯ ಪಿಎಚ್‌ಡಿ ಯೋಜನೆ: ಪೋಸ್ಟ್ ಡಾಕ್ಟರಲ್ ಫೆಲೋಶಿಪ್‌ಗೆ ಅರ್ಜಿ ಆಹ್ವಾನ

ಕಲಬುರಗಿ, ಅ. 6: ಭಾರತ ಸರ್ಕಾರದ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ವಿಶ್ವೇಶ್ವರಯ್ಯ ಪಿಎಚ್‌ಡಿ ಯೋಜನೆಯಡಿ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕಂಪ್ಯೂಟರ್ ಸೈನ್ಸ್ ಮತ್ತು ಎಂಜಿನಿಯರಿಂಗ್ ವಿಭಾಗದಲ್ಲಿ ಪೋಸ್ಟ್ ಡಾಕ್ಟರಲ್ ಫೆಲೋಶಿಪ್ ಕಾರ್ಯಕ್ರಮಕ್ಕೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಫೆಲೋಶಿಪ್ ಒಂದು ವರ್ಷದ ಅವಧಿಗೆ ಮಾತ್ರ ಮಾನ್ಯವಾಗಿರುತ್ತದೆ. ಇದು ಪೂರ್ಣಕಾಲಿಕ, ತಾತ್ಕಾಲಿಕ ಹಾಗೂ ವರ್ಗಾಯಿಸಲಾಗದ ಹುದ್ದೆಯಾಗಿದ್ದು, ಭಾರತದಲ್ಲಿ ಮಾತ್ರ ಲಭ್ಯವಿರುತ್ತದೆ. ಯೋಜನೆಯಡಿ ಆಯ್ಕೆಯಾಗುವ ಅಭ್ಯರ್ಥಿಗಳು ಕಂಪ್ಯೂಟರ್ ಸೈನ್ಸ್ ಮತ್ತು ಎಂಜಿನಿಯರಿಂಗ್ ವಿಭಾಗದಲ್ಲಿ ಪೋಸ್ಟ್ ಡಾಕ್ಟರಲ್ ಸಂಶೋಧನಾ ಕಾರ್ಯ ಕೈಗೊಳ್ಳಬೇಕಾಗುತ್ತದೆ.
ಶೈಕ್ಷಣಿಕ ಅರ್ಹತೆ, ಸಹಪರಿಶೀಲಿತ ಸಂಶೋಧನಾ ಪ್ರಕಟಣೆಗಳು ಹಾಗೂ ಮಾನ್ಯತೆಗಳನ್ನು ಒಳಗೊಂಡಂತೆ ಉತ್ತಮ ಮತ್ತು ಸಾಬೀತಾದ ಶೈಕ್ಷಣಿಕ ಹಾಗೂ ಸಂಶೋಧನಾ ದಾಖಲೆ ಹೊಂದಿರುವ ಅರ್ಹ ಸಂಶೋಧಕರಿಗೆ ಫೆಲೋಶಿಪ್ ನೀಡಲಾಗುವುದು ಎಂದು ತಿಳಿಸಲಾಗಿದೆ.
ಯೋಜನೆಯ ಅರ್ಹತಾ ಮಾನದಂಡಗಳು, ನಿಯಮಗಳು ಮತ್ತು ಷರತ್ತುಗಳು, ಫೆಲೋಶಿಪ್ ಮೊತ್ತ ಹಾಗೂ ಅರ್ಜಿ ಸಲ್ಲಿಸುವ ವಿಧಾನ ಸೇರಿದಂತೆ ಹೆಚ್ಚಿನ ಮಾಹಿತಿಯನ್ನು ವಿಶ್ವವಿದ್ಯಾಲಯದ ಕಂಪ್ಯೂಟರ್ ಸೈನ್ಸ್ ವಿಭಾಗದ ಡೀನ್ ಪ್ರೊ. ಆರ್.ಎಸ್. ಹೆಗಡೆ ಅವರನ್ನು ಸಂಪರ್ಕಿಸಿ ಪಡೆಯಬಹುದು.
ಹೆಚ್ಚಿನ ಮಾಹಿತಿಗಾಗಿ 9604085138 ಮೊಬೈಲ್ ಸಂಖ್ಯೆಗೆ ಸಂಪರ್ಕಿಸಬಹುದು ಅಥವಾ ವಿಶ್ವವಿದ್ಯಾಲಯದ ಅಧಿಕೃತ ಜಾಲತಾಣವನ್ನು ವೀಕ್ಷಿಸಬಹುದು ಎಂದು ಪ್ರಕಟಣೆ ತಿಳಿಸಿದೆ.



